*ಬೆಳಗಾವಿಯಲ್ಲಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆ ವಿಚಾರಕ್ಕೆ ಮಾರಾಮಾರಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಸಮುದಾಯಗಳ ನಡುವೆ ಮಾರಾಮಾರಿ ನಡೆದಿದೆ. ಮನೆಗೆ ನುಗ್ಗಿ ಅಟ್ಟಹಾಸ ಮೆರೆದ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೋಡಿದವರನ್ನೇ ಬೆಚ್ಚಿ ಬೀಳಿಸಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇಶನೂರು ಗ್ರಾಮದಲ್ಲಿ ವಾಲ್ಮೀಕಿ ಮೂರ್ತಿ ಪ್ರತಿಸ್ಠಾಪನೆಗೆ ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆ ಎರಡು ಸಮುದಾಯಗಳ ನಡುವೆ ಗಲಾಟೆ ಉಂಟಾಗಿದೆ. ಗುಂಪು ಕಟ್ಟಿಕೊಂಡು ಬಂದ ಕೆಲವರು ಒಂದು ಸಮುದಾಯದವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಮನೆ ಒಳಗೆ ಅಡಗಿ ಕುಳಿತವರ ಮೇಲೆಯೂ ಕಲ್ಲು ಕಟ್ಟಿಗೆಯಿಂದ ಬಾಗಿಲು ಮುರಿದು ಮನೆಗೆ ನುಗ್ಗಿ ದಾಳಿ ನಡೆಸಿದ್ದಾರೆ.
ಗ್ರಾಮದಲ್ಲಿ ಸದಾಶಿವ ಭಜಂತ್ರಿ ಎಂಬುವವರ ಮನೆಯ ಮೇಲೆ ಗುಂಪೊಂದು ಮನಬಂದಂತೆ ಕಲ್ಲು ತೂರಾಟ ನಡೆಸಿದೆ. ಶೌಚಾಲಯ, ಮನೆ ಮಾಳಿಗೆ ಸೇರಿದಂತೆ ಹಲವು ಭಾಗಗಳು ಧ್ವಂಸಗೊಂಡಿವೆ. ಮನೆಯಲ್ಲಿದ್ದ ವಸ್ತುಗಳು ಪುಡಿ ಪುಡಿಯಾಗಿದ್ದು ಕುಟುಂಬದವರು ಆತಂಕಕ್ಕೆ ಒಳಗಾಗಿದ್ದಾರೆ.
ನಂತರ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದರೂ ಕೂಡಾ ಎರಡು ಕಡೆಯವರ ನಡುವೆ ವಾಗ್ವಾದ ಮುಂದುವರಿದಿದೆ. ಮಹಿಳೆಯರನ್ನೂ ಲೆಕ್ಕಿಸದೆ ಪುರುಷರು ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದಾರೆ. ಈ ಗಲಾಟೆಯಲ್ಲಿ ಎರಡೂ ಸಮುದಾಯದ ಕೆಲವರಿಗೆ ಗಾಯಗಳಾಗಿವೆ.
ವಾಲ್ಮೀಕಿ ಮೂರ್ತಿ ಕುಡಿಸುವಸಲುವಾಗಿ ಜಾಗ ಸರ್ವೇಗಾಗಿ ವಾಲ್ಮೀಕಿ ಸಮುದಾಯದ ಯುವಕರು ಆಗಮಿಸಿದ್ದ ವೇಳೆ, ಎಸ್‌ಸಿ ಸಮುದಾಯದ ಮನೆಯ ಬಳಿ ಯಾಕೆ ಸರ್ವೇ ಎಂದು ಸದಾಶಿವ ಭಜಂತ್ರಿ ಕುಟುಂಬ ವಿರೋಧ ವ್ಯಕ್ತಪಡಿಸಿತ್ತು. ಇದರಿಂದ ಉದ್ರಿಕ್ತಗೊಂಡ ಗುಂಪು ಕಲ್ಲು ತೂರಾಟ ನಡೆಸಿದೆ. ಘಟನೆ ಸಂಬಂಧ ನೇಸರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




