

ಪ್ರಗತಿವಾಹಿನಿ ಸುದ್ದಿ, ಖಾನಾಪುರ : ಬೆಳಗಾವಿ ಜಿಲ್ಲೆಯಲ್ಲಿನ ಒಂದು ಅತ್ಯಂತ ಪವಿತ್ರ ನದಿಗಳಲ್ಲಿ ಒಂದಾದ ಹಾಗೂ ಖಾನಾಪುರ ತಾಲೂಕಿನ ಜೀವ ನದಿಯಾದ ಮಲಪ್ರಭೆಯ ಸ್ವಚ್ಛತಾ ಕಾರ್ಯಕ್ರಮವನ್ನು ಖಾನಾಪುರ ಪಟ್ಟಣ ಪಂಚಾಯತಿ, ಬೆಳಗಾವಿಯ ಪ್ರಯಾಸ್ ಫೌಂಡೇಶನ್ ಮತ್ತು ಖಾನಾಪುರದ ಕೆಲ ಸಾಮಾಜಿಕ ಯುವ ಕಾರ್ಯಕರ್ತರ ಸಹಯೋಗ ಹಾಗೂ ನೆರವಿನಿಂದ ನದಿಯ ಹಾಗೂ ಸುತ್ತಮುತ್ತಲ ಪರಿಸರದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ಪ್ರತಿ ಅಮವಾಸ್ಯೆ, ಮಕರ ಸಂಕ್ರಾಂತಿ, ಮಹಾ ಶಿವರಾತ್ರಿ ಮತ್ತು ಯುಗಾದಿ ಹಬ್ಬದ ದಿನಗಳಂದು ತಾಲೂಕಿನ ಹಾಗೂ ಜಿಲ್ಲೆಯ ಸಾವಿರಾರು ಭಕ್ತರು ನದಿಗೆ ಆಗಮಿಸಿ ಪುಣ್ಯ ಸ್ನಾನ ಮಾಡಿ ಧಾರ್ಮಿಕ ವಿಧಿ ವಿಧಾನ, ಕ್ರಿಯಾ ಕರ್ಮಗಳನ್ನು ನೆರವೇರಿಸುತ್ತಾರೆ. ಪಟ್ಟಣ ಪಂಚಾಯತಿಯಿಂದ ನದಿಯಲ್ಲಿ ಮತ್ತು ಪರಿಸರದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವಂತೆ ಸೂಚನಾ ಫಲಕಗಳನ್ನು ಅಳವಡಿಸಿ ಎಷ್ಟೇ ಜಾಗೃತಿಯನ್ನು ಮೂಡಿಸಿದರೂ ಕೂಡ ಭಕ್ತರು ನದಿಯಲ್ಲಿ ಪ್ಲಾಸ್ಟಿಕ್, ಹೂವು, ಹಣ್ಣು, ಕಾಯಿ, ಬಟ್ಟೆ ಇನ್ನಿತರ ವಸ್ತುಗಳನ್ನು ಎಸೆಯುವುದು, ತೇಲಿ ಬಿಡುವುದನ್ನು ಮಾಡುತ್ತಲೇ ಇದ್ದಾರೆ.
ಹಾಳಾದ ದೇವರ ಫೋಟೊಗಳು, ಭಗ್ನಗೊಂಡ ದೇವರ ಮೂರ್ತಿಗಳನ್ನು ವಿಸರ್ಜಿಸುತ್ತಿದ್ದಾರೆ. ಇದರಿಂದ ನದಿ ನೀರು ಮತ್ತು ಪರಿಸರ ಕಲುಷಿತ ಗೊಳ್ಳುತ್ತಲೆ ಇದೆ. ಈ ಮುಂಚೆಯು ಕೂಡ ಹಲವು ಬಾರಿ ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಇದ್ದಾರೆ.
ಆದಾಗ್ಯೂ ಕೂಡ ನದಿ ನೀರು ಇಲ್ಲಿ ಆಗಮಿಸುವ ಭಕ್ತರ, ಸಾರ್ವಜನಿಕರ ನಿರ್ಲಕ್ಷತನದಿಂದ ಪುನ: ಪುನ: ಕಲುಷಿತಗೊಳ್ಳುತ್ತಲೇ ಇದೆ. ಇನ್ನು ಮುಂದೆ ಹಬ್ಬ ಹರಿದಿನಗಳಂದು ಪೋಲಿಸ್ ಇಲಾಖೆಯ ಸಹಕಾರದಿಂದ ಪಟ್ಟಣ ಪಂಚಾಯತಿ ಸಿಬ್ಬಂದಿ ಸೇರಿ ಸಾರ್ವಜನಿಕರು, ಭಕ್ತರು ನದಿಯಲ್ಲಿ ಯಾವುದೇ ರೀತಿಯ ತ್ಯಾಜ್ಯವನ್ನು ಎಸೆಯದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಈ ಸಂದರ್ಭದಲ್ಲಿ ನಿರ್ಧರಿಸಲಾಯಿತು.
ಈ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಯಲ್ಲಪ್ಪ ಮಾವಿನಕಾಯಿ, ಪ್ರೇಮಾನಂದ ನಾಯಿಕ, ನಿವೃತ್ತ ಶಿಕ್ಷಕ ಶಿವಾನಂದ ಕುಂದರಿಗಿ, ಸದಸ್ಯ ಅಪ್ಪಯ್ಯ ಕೊಡೊಳ್ಳಿ, ಪ್ರಕಾಶ ದೇಶಪಾಂಡೆ, ದಿನಕರ ಮರಗಾಳೆ, ಪ್ರಯಾಸ ಫೌಂಡೇಶನ್ ಮುಖ್ಯಸ್ಥರಾದ ಅನಿಲ್ ಕುಲಕರ್ಣಿ, ಬೆಳಗಾವಿ ಮಹಾನಗರ ಪಾಲಿಕೆಯ ಸದಸ್ಯೆ ವಾಣಿ ಜೋಶಿ, ಸಪ್ನಾ ಪಾಟೀಲ್, ಅನಿತಾ ಕುಲಕರ್ಣಿ, ಅಕ್ಷಯ ಕುಲಕರ್ಣಿ, ವಿಕ್ರಮ ಪಾಟೀಲ, ನಂದಾ ಗರಗಟ್ಟೆ, ಪೂಜಾ ಜೋಶಿ, ಅಮರ ಜೋಶಿ, ಯಶ್ ಗರಗಟ್ಟಿ, ವಿನಾಯಕ ದೇಶಪಾಂಡೆ, ಕೇಶವ ಕುಲಕರ್ಣಿ, ವಿಶಾಲ ಸೋಮನಾಚೆ, ಅವ್ಯಾನ ಕುಲಕರ್ಣಿ, ನೈತಿಕ ಸೋಮನಾಚೆ, ಅನಂತ ಕುಲಕರ್ಣಿ, ಸ್ನೇಹಲ ಹೇಮಗಿರಿ, ವಿನಯ ಬೆಟಗೇರಿ, ಗುರುಪ್ರಸಾದ ಕುಲಕರ್ಣಿ ಮುಂತಾದ ಸದಸ್ಯರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ