ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲ್ಲೂಕಿನ ನಂದಗಡ ಗ್ರಾಮದಲ್ಲಿ ಶುಕ್ರವಾರ ಜಿಲ್ಲಾಮಟ್ಟದ ಸ್ವಚ್ಛೋತ್ಸವ ನಿತ್ಯೋತ್ಸವ ಮಾಸಾಚರಣೆ ಹಾಗೂ ಘನತ್ಯಾಜ್ಯ ವಿಲೇವಾರಿ ಘಟಕಗಳ ಏಕರೂಪದ ಬ್ರ್ಯಾಂಡಿಂಗ್ ಲೋಕಾರ್ಪಣೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಅಂಗವಾಗಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ ತ್ಯಾಜ್ಯ ಸಂಗ್ರಹಿಸುವ ವಾಹನಕ್ಕೆ ಚಾಲನೆ ನೀಡಿ ಸ್ವಚ್ಛ ಸಂಕೀರ್ಣ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದರು. ಜಿ.ಪಂ ಸದಸ್ಯ ಸುರೇಶ ಮ್ಯಾಗೇರಿ, ತಾ.ಪಂ ಅಧ್ಯಕ್ಷೆ ನಂದಾ ಕೊಡಚವಾಡಕರ, ಎಪಿಎಂಸಿ ಅಧ್ಯಕ್ಷ ಹಣಮಂತ ಪಾಟೀಲ, ಜಿಪಂ ಉಪ ಕಾರ್ಯದರ್ಶಿಗಳಾದ ಎಸ್.ಬಿ ಮುಳ್ಳೊಳ್ಳಿ, ಡಿ.ಎಂ ಜಕ್ಕಪ್ಪಗೋಳ ಹಾಗೂ ಇತರರು ಎಪಿಎಂಸಿ ಆವರಣದಲ್ಲಿ ಸಸಿ ನೆಡುವ ಮೂಲಕ ಏಕರೂಪದ ಬ್ರ್ಯಾಂಡಿಂಗ್ ಉದ್ಘಾಟಿಸಿ
ವಸ್ತುಪ್ರದರ್ಶನವನ್ನು ವೀಕ್ಷಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪಂಚಾಯ್ತಿಯ ಉಪ
ಕಾರ್ಯದರ್ಶಿ (ಅಭಿವೃದ್ಧಿ) ಎಸ್.ಬಿ ಮುಳ್ಳೊಳ್ಳಿ, ಗ್ರಾಮೀಣ ಭಾಗದಲ್ಲಿ ಕಸ
ಸಂಗ್ರಹಿಸಿ ಅದರಿಂದ ರಸವನ್ನು ತಯಾರಿಸುವ ಕೆಲಸಕ್ಕೆ ಕೈ ಹಾಕಿರುವ ನಂದಗಡ ಗ್ರಾಮ
ಪಂಚಾಯ್ತಿಯ ಈ ಕಾರ್ಯ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಜೊತೆಗೆ ಸ್ವಚ್ಛ ಭಾರತ ಮೀಷನ್
ಯೋಜನೆಯ ಅನುಷ್ಠಾನದಲ್ಲಿ ವಿಶೇಷ ಸಾಧನೆ ಮಾಡಿರುವ ಖಾನಾಪುರ ತಾಲ್ಲೂಕು ಬೆಳಗಾವಿ
ಜಿಲ್ಲೆಯ ಪ್ರಥಮ ಬಯಲುಶೌಚ ಮುಕ್ತ ತಾಲ್ಲೂಕು ಎಂಬ ಗೌರವಕ್ಕೆ ಪ್ರಾಪ್ತವಾಗಿದೆ ಎಂದು
ವಿವರಿಸಿದರು.
ಜಿಲ್ಲಾಡಳಿತ, ಜಿಲ್ಲಾಪಂಚಾಯತ ಬೆಳಗಾವಿ, ಗ್ರಾಮ ಪಂಚಾಯತ ನಂದಗಡಗಳ ಸಂಯುಕ್ತ
ಆಶ್ರಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಗ್ರಾ.ಪಂ.ನ ಸ್ವಚ್ಛಾಗ್ರಹಿಗಳನ್ನು
ಸತ್ಕರಿಸಲಾಯಿತು. ಬಳಿಕ ವೈಯುಕ್ತಿಕವಾಗಿ ಮತ್ತು ಸಮುದಾಯದಲ್ಲಿ ಸ್ವಚ್ಛತೆಯನ್ನು
ಕಾಪಾಡುವ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಈ ಸಂದರ್ಭದಲ್ಲಿ ತಾ.ಪಂ ಇಒ
ಬಸವರಾಜ ಅಡವಿಮಠ, ಸಹಾಯಕ ಕೃಷಿ ನಿರ್ದೇಶಕ ದಾಮೋದರ ಚವಾಣ, ಬಿ.ಇ.ಒ ಲಕ್ಷ್ಮಣರಾವ್
ಯಕ್ಕುಂಡಿ, ನರೇಗಾ ಸಹಾಯಕ ನಿರ್ದೇಶಕ ಎಂ.ಜಿ ದೇವರಾಜ್, ಪಿಡಿಒಗಳಾದ ರಘು ಬಿ.ಎನ್,
ಆರತಿ ಅಂಗಡಿ, ವೀಣಾ ಗೌಡ, ಕಾವೇರಿ ಹಿಮಕರ, ಲೀಲಾವತಿ ಕರಲಿಂಗನವರ ಸೇರಿದಂತೆ
ಅಧಿಕಾರಿಗಳು, ಸಿಬ್ಬಂದಿ ಹಾಗೂ ನಂದಗಡ ಗ್ರಾಮಸ್ಥರು ಇದ್ದರು.
ಪಿಡಿಒ ಪ್ರಭಾಕರ್ ಭಟ್ ಸ್ವಾಗತಿಸಿದರು. ಬಾಲರಾಜ್ ಭಜಂತ್ರಿ ನಿರೂಪಿಸಿದರು. ಕೆ.ಎಸ್
ಗಣೇಶ್ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ