ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ಮುಕ್ತಾಯವಾಗಿದೆ.
ಕೊರೋನಾ ಹರಡಬಹುದೆನ್ನುವ ಆತಂಕದ ಹಿನ್ನೆಲೆಯಲ್ಲಿ ಕೋರ್ಟ್ ಚಾಟಿ ಮತ್ತು ಮೇಕೆದಾಟು ಯೋಜನೆ ಜಾರಿಗೊಳಿಸಲು ಸರಕಾರ ಬದ್ದವಾಗಿದೆ. ನಿಮ್ಮೆಲ್ಲರ ವಿಶ್ವಾಸದೊಂದಿಗೆ ಯೋಜನೆಯನ್ನು ಜಾರಿಗೊಳಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪತ್ರ ಬರೆದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾದಯಾತ್ರೆ ಮುಕ್ತಾಯಗೊಳಿಸಿದೆ.
ಈ ಮಧ್ಯೆ ಕಾಂಗ್ರೆಸ್ ಹೈಕಮಾಂಡ್ ಕೂಡ ಪಾದಯಾತ್ರೆ ನಿಲ್ಲಿಸಲು ಸೂಚನೆ ನೀಡಿತ್ತು. ಹಾಗಾಗಿ ಕಾಂಗ್ರೆಸ್ ಮುಖಂಡರು ಸಭೆ ನಡೆಸಿ ಪಾದಯಾತ್ರೆ ಮುಗಿಸಲು ನಿರ್ಧರಿಸಿದರು.
ಸರಕಾರ ಮೇಕೆದಾಟು ಯೋಜನೆ ಜಾರಿಗೆ ಸ್ಪಷ್ಟ ಭರವಸೆ ನೀಡಿದ್ದರಿಂದ ಕಾಂಗ್ರೆಸ್ ಉದ್ದೇಶವೂ ಈಡೇರಿದಂತಾಗಿದೆ.
ಮುಖ್ಯಮಂತ್ರಿಗಳ ಪತ್ರದ ಸಾರಾಂಶ –
ಮಾನ್ಯ ಶ್ರೀ ಸಿದ್ದರಾಮಯ್ಯನವರು, ವಿರೋಧಪಕ್ಷದ ನಾಯಕರು ಹಾಗೂ ಶ್ರೀ ಡಿ.ಕೆ. ಶಿವಕುಮಾರ್, ಕೆ.ಪಿ.ಸಿ.ಸಿ, ಅಧ್ಯಕ್ಷರು ಇವರಿಗೆ;
ನಾನು ಮೇಕೆದಾಟು ಯೋಜನೆ ಬಗ್ಗೆ ನಿಮ್ಮೆಲ್ಲರ ವಿಶ್ವಾಸದೊಂದಿಗೆ ಅನುಷ್ಠಾನಕ್ಕಾಗಿ ಬೇಕಾಗಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧನಿದ್ದೇನೆ.
ಕರೋನಾ ಮಹಾಮಾರಿಯ 3ನೇ ಅಲೆ ತೀವ್ರವಾಗಿ ಅಪ್ಪಳಿಸಿದ ಹಿನ್ನೆಲೆಯಲ್ಲಿ ಜನಜೀವನ ವಿಶೇಷವಾಗಿ ಮಕ್ಕಳಮೇಲೆ ದುಷ್ಪರಿಣಾಮ ಬೀರಿದೆ. ಈ ಸಂದರ್ಭದಲ್ಲಿ ಹೆಚ್ಚು ಜನರನ್ನು ಸೇರಿಸಿ ಪಾದಯಾತ್ರೆ ಮುಂತಾದವುಗಳನ್ನು ಮಾಡುವುದು ಸಾರ್ವಜನಿಕ ಆರೋಗ್ಯ ದೃಷ್ಠಿಯಿಂದ ಸರಿಯಿರುವುದಿಲ್ಲ. ಈಗಾಗಲೇ ಮಾನ್ಯ ಉಚ್ಛನ್ಯಾಯಾಲಯ ಕೂಡ ಇದರ ಬಗ್ಗೆ ತೀವ್ರವಾದಂತಹ ಅಭಿಪ್ರಾಯ ನೀಡಿದೆ ಮತ್ತು ಇದು ಜನಾಭಿಪ್ರಾಯ ಕೂಡ ಆಗಿದೆ.
ಹೀಗಾಗಿ ಪಾದಯಾತ್ರೆಯನ್ನು ಮುಂದುವರೆಸುವುದನ್ನು ಕೈಬಿಟ್ಟು ನಾವೆಲ್ಲ ಈಗ ಕರೋನವನ್ನು ಎದುರಿಸಿ ಮುಂಬರುವ ದಿನಗಳಲ್ಲಿ ಒಂದಾಗಿ ಮೇಕೆದಾಟು ಯೋಜನೆ ಅನುಷ್ಠಾನದ ಕುರಿತು ಕ್ರಮ ಕೈಗೊಳ್ಳೋಣ ಎಂಬ ಮನವಿಯನ್ನು ತಮ್ಮಲ್ಲಿ ಮಾಡುತ್ತೇನೆ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಪಾದಯಾತ್ರೆ ಕೂಡಲೇ ನಿಲ್ಲಿಸಿ; ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಸೂಚನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ