Kannada NewsKarnataka NewsPolitics

*ವಿಶ್ವ ವಿದ್ಯಾಲಯ ಮುಚ್ಚುವುದರಿಂದ ಎಸ್ಸಿ, ಎಸ್ಟಿ, ಒಬಿಸಿ, ಮಹಿಳೆಯರಿಗೆ ಅನ್ಯಾಯವಾಗಲಿದೆ: ಬಸವರಾಜ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ: ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ರಾಜ್ಯಕ್ಕೆ 18 ಸಾವಿರ ಕೋಟಿ ರೂ. ಅನ್ಯಾಯವಾಗಿದೆ ಎನ್ನುವುದು ಶುದ್ಧ ಸುಳ್ಳು‌. ರಾಜ್ಯ ಸರ್ಕಾರ ಸುಳ್ಳು ಹೇಳುವುದನ್ನು ಬಿಟ್ಟು ಸತ್ಯವೇನಿದೆ ಎನ್ನುವುದನ್ನು ನಮಗೆ ತಿಳಿಸಿದರೆ ನಾವೂ ಸಹಕಾರ ನೀಡುತ್ತೇವೆ. ಸಂಬಂಧ ಪಟ್ಟ ಸಚಿವರ ಜೊತೆ ಮಾತನಾಡಿ ಹಣ ಬಿಡುಗಡೆ ಮಾಡಿಸುವ ಕೆಲಸ ಮಾಡುತ್ತೇವೆ. ಇದರಲ್ಲಿ ರಾಜಕಾರಣ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.

ಭಾನುವಾರ ಹಾವೇರಿಯಲ್ಲಿ ಜನ ಸಂಪರ್ಕ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳಿಂದ ಜಲ ಜೀವನ್ ಮಿಷನ್ ಯೋಜನೆ ನಡೆಯುತ್ತಿದೆ. ಕೇಂದ್ರ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಈ ಯೋಜನೆ ಜಾರಿಯಾಗಿದೆ. ರಾಜ್ಯ ಸರ್ಕಾರ ಖರ್ಚು ಮಾಡಿದ ಮೇಲೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತದೆ. ರಾಜ್ಯ ಸರ್ಕಾರ ತನ್ನ ಖಜಾನೆ ಖಾಲಿ ಮಾಡಿಕೊಂಡು ಸಂಪೂರ್ಣ ದಿವಾಳಿಯಾಗಿ ಹಣ ಖರ್ಚು ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಖರ್ಚು ಮಾಡಿದ ಮೇಲೆ ಅದರ ದಾಖಲೆಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದರೆ, ಖರ್ಚು ಮಾಡಿದ ಎಲ್ಲ ಹಣವೂ ರಾಜ್ಯಸರ್ಕಾರಕ್ಕೆ ಬರುತ್ತದೆ. ನಾವೂ ಕೂಡ ರಾಜ್ಯ ಸರ್ಕಾರಕ್ಕೆ ಸಹಕಾರ ಮಾಡುತ್ತೇವೆ. ರಾಜ್ಯ ಸರ್ಕಾರ ಸುಳ್ಳು ಹೇಳುವುದನ್ನು ಬಿಟ್ಟು ಸತ್ಯ ಏನಿದೆ ಎನ್ನುವುದನ್ನು ನಮಗೆ ತಿಳಿಸಿದರೆ ನಾವೂ ಸಹಕಾರ ಮಾಡುತ್ತೇವೆ. ಸಂಬಂಧ ಪಟ್ಟ ಸಚಿವರ ಜೊತೆ ಮಾತನಾಡಿ ಹಣ ಬಿಡುಗಡೆ ಮಾಡಿಸುವ ಕೆಲಸ ಮಾಡುತ್ತೇವೆ. ಇದರಲ್ಲಿ ರಾಜಕಾರಣ. ಮಾಡಬಾರದು ಎಂದು ಆಗ್ರಹಿಸಿದರು.

ವಿವಿ ಮುಚ್ಚುವುದು ಅನ್ಯಾಯ

ಇನ್ನು ರಾಜ್ಯ ಸರ್ಕಾರ ಹೊಸ ವಿಶ್ವ ವಿದ್ಯಾಲಯಗಳನ್ನು ಮುಚ್ಚಲು ಮುಂದಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಿಶ್ವ ವಿದ್ಯಾಲಯಗಳ ಪರಿಕಲ್ಪನೆ ಬದಲಾವಣೆಯಾಗಿದೆ. ರಾಜ್ಯದಲ್ಲಿ ಐವತ್ತು ಆರವತ್ತನೇ ದಶಕದಲ್ಲಿ ವಿಶ್ವ ವಿದ್ಯಾಲಯಗಳು ಸ್ಥಾಪನೆಯಾಗಿದ್ದವು. ಆವತ್ತಿನ ಕಾಲೇಜು ಸಂಖ್ಯೆ. ವಿದ್ಯಾರ್ಥಿಗಳ ಸಂಖ್ಯೆಗೂ ಇಂದಿಗೂ ಬಹಳ ವ್ಯತ್ಯಾಸ ಇದೆ. ನಾವು ಹಿಂದುಳಿದ ಜಿಲ್ಲೆಯನ್ನು ಗಮನದಲ್ಲಿಟ್ಟುಕೊಂಡು ಎಸ್ಸಿ ಎಸ್ಟಿ, ಹಿಂದುಳಿದ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿ ಎಂದು ವಿಶ್ವ ವಿದ್ಯಾಲಯ ಮಾಡದ್ದೇವೆ. ಈ ವಿಶ್ವ ವಿದ್ಯಾಲಯಕ್ಕೆ ಹೆಚ್ಚಿನ ಅನುದಾನ ಬೇಕಿಲ್ಲ. ಆದರೂ ಕೂಡ ಒಂದು ನಯಾ ಪೈಸೆಯನ್ನು ಕಾಂಗ್ರೆಸ್‌ ಸರ್ಕಾರ ನೀಡಿಲ್ಲ, ಆದರೂ, ವಿದ್ಯಾರ್ಥಿಗಳು ನೀಡುವ ಫೀ ಇಂದಲೇ ವಿಶ್ವ ವಿದ್ಯಾಲಯಗಳನ್ನು ನಡೆಸುತ್ತಿದ್ದಾರೆ. ಎಲ್ಲವೂ ಪಿಜಿ ಕೇಂದ್ರದಲ್ಲಿಯೇ ನಡೆಯುತ್ತಿರುವುದರಿಂದ ಸರ್ಕಾರ ಯಾವುದೇ ಭೂಮಿಯನ್ನು ನೀಡಿಲ್ಲ. ಡಿಜಿಟಲ್ ಶಿಕ್ಷಣ, ದೂರ ಶಿಕ್ಷಣ ಎಲ್ಲವನ್ನೂ ಸಮರ್ಪಕವಾಗಿ ಮಾಡುತ್ತಿದ್ದಾರೆ. ಜಿಲ್ಲೆಯ ಎಸ್ಸಿ ಎಸ್ಟಿ, ಒಬಿಸಿ  ವಿದ್ಯಾರ್ಥಿಗಳು ಹಾಗೂ ಹೆಣ್ಣು ಮಕ್ಕಳಿಗೆ ದೊಡ್ಡ ಪ್ರಮಾಣದಲ್ಲಿ ಅನುಕೂಲವಾಗಿದೆ. ಇದನ್ನು ಸ್ಥಗಿತಗೊಳಿಸಿದರೆ ಎಸಿ, ಎಸ್ಸಿ ಒಬಿಸಿ ಹಾಗೂ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಬಹಳ ದೊಡ್ಡ ಅನ್ಯಾಯ ಮಾಡಿದಂಗುತ್ತದೆ. ಈಗಾಗಲೇ ಎಲ್ಲ ಜಿಲ್ಲೆಯ ಜನರು, ವಿದ್ಯಾರ್ಥಿಗಳು, ಪೋಷಕರು, ಬುದ್ದಿ ಜೀವಿಗಳು ವಿರೋಧ ಮಾಡುತ್ತಿದ್ದಾರೆ. ಇವುಗಳನ್ನು ಅಲ್ಪ ದುಡ್ಡಿನಲ್ಲಿಯೇ ಬಲವರ್ಧನೆ ಮಾಡದೇ ಅವುಗಳನ್ನು ಮುಚ್ಚಿಸುವ ಕೆಲಸ ಮಾಡುತ್ತಿರುವುದು ಘೋರ ಅನ್ಯಾಯ ಎಂದರು.

Home add -Advt

ಈಗಾಗಲೇ ಇರುವ ಹಳೆಯ ವಿಶ್ವ ವಿದ್ಯಾಲಯಗಳಿಗೆ ನೂರಾರು ಕೋಟಿ ರೂ. ಖರ್ಚು ಮಾಡುತ್ತಾರೆ. ಅವುಗಳ ಸ್ಥಿತಿಗತಿ ಏನಿದೆ. ಖಾಲಿ ಹುದ್ದೆಗಳಿವೆ. ಎಷ್ಟೋ ಕೋರ್ಸ್‌ ಗಳಿಗೆ ವಿದ್ಯಾರ್ಥಿಗಳಿಲ್ಲ. ಅತ್ಯಂತ ಅಧೋಗತಿಗೆ ಹೋಗಿವೆ. ಭ್ರಷ್ಟಾಚಾರದ ಕೂಪಗಳಾಗಿವೆ. ಈಗಾಗಲೇ ಎರಡು ವರ್ಷದಲ್ಲಿ ಉತ್ತಮ ಕೆಲಸ ಮಾಡುತ್ತಿರುವ ಹೊಸ ವಿಶ್ವ ವಿದ್ಯಾಲಯಗಳನ್ನು ಮುಚ್ಚಲು ಹೋಗುತ್ತಿರುವುದು ನಿಜವಾಗಲು ಉನ್ನತ ಶಿಕ್ಷಣಕ್ಕೆ ದೊಡ್ಡ ಕೊಡಲಿ ಪೆಟ್ಟು ನೀಡಿದಂತಾಗುತ್ತದೆ, ಎನ್‌ಇಪಿ ವಿಚಾರದಲ್ಲಿಯೂ ರಾಜ್ಯ ಸರ್ಕಾರ ಇದೇ ರೀತಿ ಮಾಡಿತ್ತು. ಇದರ ವಿರುದ್ಧ ಬುದ್ದಿ ಜೀವಿಗಳಿಂದ ಹಿಡಿದು ಎಲ್ಲ ಜನರೂ ಹೋರಾಟ ಮಾಡಬೇಕು. ಕಾನೂನು ಸಮರ ಮಾಡಬೇಕು ಎಂದು ಹೇಳಿದರು.

ಗೋದಾವರಿ ಕಾವೇರಿ ನದಿ ಜೋಡಣೆ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿರುವ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ದೇವೇಗೌಡರಿಗೆ ಯಾವ ಮಾಹಿತಿ ಇದೆಯೋ ಗೊತ್ತಿಲ್ಲ. ಖಂಡಿತವಾಗಿಯೂ ರಾಜ್ಯಕ್ಕೆ ಅನ್ಯಾಯವಾಗಿದ್ದರೆ ನಾವು ಯಾವಾಗಲೂ ಪಕ್ಷಾತೀತವಾಗಿಯೇ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಇದೇ ವೇಳೆ, ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕಾಲುಳಿತದಿಂದ ಕುಂಭಮೇಳಕ್ಕೆ ತೆರಳುವ ಭಕ್ತರು ಸಾವಿಗೀಡಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಯಾರೋ ತಪ್ಪು ಮಾಹಿತಿ ನೀಡಿದ್ದರಿಂದ ಅಲ್ಲಿ. ದುರ್ಘಟನೆ ಸಂಭವಿಸಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಲಿ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button