Breaking News.. ಬೆಳಗಾವಿಯಲ್ಲಿ ಮೋಡ ಬಿತ್ತನೆ ಆರಂಭ


ಬೆಳಗಾವಿಯಲ್ಲಿ ಮೋಡ ಬಿತ್ತನೆಗೆ ಸಚಿವ ಸತೀಶ್ ಜಾರಕಿಹೊಳಿ ಚಾಲನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ರೈತರ ಅನುಕೂಲಕ್ಕಾಗಿ ಹುದಲಿಯ ಬೆಳಗಾಂ ಶುಗರ್ಸ್ ಪ್ರೈ.ಲಿಮಿಟಡ್ ಮೋಡ ಬಿತ್ತನೆಗೆ ಮುಂದಾಗಿದ್ದು, ಮೋಡ ಬಿತ್ತನೆ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಚಾಲನೆ ನೀಡಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶುಕ್ರವಾರ(ಸೆ.29) ಮೋಡ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಿದರು.

ಮೋಡ ಬಿತ್ತನೆ ಕಾರ್ಯಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯದ ಮಹಾನಿರ್ದೇಶಕರ(ಡಿಜಿಸಿಎ) ಕಚೇರಿಯು ಗ್ರೀನ್ ಸಿಗ್ನಲ್ ನೀಡಿದೆ.
ಸೆ.29 ಹಾಗೂ 30 ರಂದು ಎರಡು ದಿನಗಳ ಕಾಲ ಬೆಳಗಾವಿ ಜಿಲ್ಲೆಯಲ್ಲಿ ಮೋಡ ಬಿತ್ತನೆ ಕಾರ್ಯ ನಡೆಯಲಿದೆ.
ಕ್ಯಾಪ್ಟನ್ ವೀರೇಂದ್ರ ಸಿಂಗ್ ಹಾಗೂ ಕ್ಯಾಪ್ಟನ್ ಆದರ್ಶ ಪಾಂಡೆ ನೇತೃತ್ವದಲ್ಲಿ ವಿಟಿ-ಕೆಸಿಎಂ ವಿಮಾನವು ಮೋಡ ಬಿತ್ತನೆ ಮಾಡಲಿದೆ.
ಕಡಿಮೆ ಎತ್ತರದಲ್ಲಿರುವ ಮೋಡಗಳ ಆಕರ್ಷಣೆಗೆ ಸಿಎಸಿಎಲ್-2 ಅಯೋಡೈಡ್ ಹಾಗೂ 20 ಸಾವಿರ ಅಡಿ ಮೇಲೆ ಎತ್ತದರದಲ್ಲಿರುವ ಮೋಡಗಳ ಆಕರ್ಷಣೆಗೆ ಸಿಲ್ವರ್ ಐಯೋಡೈಡ್ ರಾಸಾಯನಿಕ ಸಿಂಪಡಿಸಲಾಗುತ್ತದೆ.

ಒಂದು ವೇಳೆ ನಿರ್ದಿಷ್ಟ ಪ್ರದೇಶದ ವ್ಯಾಪ್ತಿಯಲ್ಲಿ ಮೋಡಗಳು ಇದ್ದರೆ ರಾಸಾಯನಿಕ ಸಿಂಪಡಣೆ ಮಾಡಿದ ಐದು ನಿಮಿಷಗಳಲ್ಲಿ ಮಳೆ ಬರಬಹುದು.
ಒಂದು ವೇಳೆ ಮೋಡಗಳು ಇರದಿದ್ದಲ್ಲಿ ಹಾಗೇ ಹಿಂದಿರುಗಲಾಗುತ್ತದೆ ಎಂದು ಮೋಡ ಬಿತ್ತನೆ ವಿಮಾನದ ತಾಂತ್ರಿಕ ಸಿಬ್ಬಂದಿ ತಿಳಿಸಿದರು.
ಬೆಳಗಾವಿಯಲ್ಲಿ ಮೋಡಗಳು ಕಂಡುಬಂದಿರುವುದರಿಂದ ಮೋಡ ಬಿತ್ತನೆಗೆ ಪೂರಕ ವಾತಾವರಣವಿದೆ ಎಂದು ಹೇಳಿದರು.
5 ರಿಂದ 10 ಸಾವಿರ ಅಡಿಗಳ ಮೇಲೆ ಮೋಡಗಳನ್ನು ಆಕರ್ಷಿಸಲು ಸಿಲ್ವರ್ ಐಯೋಡೈಡ್ ರಾಸಾಯನಿಕವನ್ನು ಆಗಸದಲ್ಲಿ ಸಿಂಪಡಣೆ ಮಾಡಲಾಗುತ್ತದೆ ಎಂದು ಸಂಸ್ಥೆಯ ಅಧಿಕಾರಿಗಳು ವಿವರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಶಾಸಕ ಆಸಿಫ್ ಸೇಠ್, ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ, ರಾಹುಲ್ ಜಾರಕಿಹೊಳಿ, ಲಕ್ಷ್ಮಣರಾವ್ ಚಿಂಗಳೆ, ವಿನಯ ನಾವಲಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ