Karnataka NewsPolitics

*ಸಿಎಂ ಸಿದ್ದರಾಮಯ್ಯಗೆ ಸಂಪೂರ್ಣ ಬೆಂಬಲ: ಶಾಸಕಾಂಗ ಸಭೆ ನಿರ್ಧಾರ*

ಪ್ರಗತಿವಾಹಿನಿ ಸುದ್ದಿ: “ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ, ಮುಖ್ಯಮಂತ್ರಿಗಳ ವಿರುದ್ಧ ವಿಚಾರಣೆಗೆ ಅನುಮತಿ ನೀಡಿರುವ ರಾಜ್ಯಪಾಲರ ತೀರ್ಮಾನವನ್ನು ಖಂಡಿಸಲಾಯಿತು ಹಾಗೂ ಎಲ್ಲಾ ಶಾಸಕರು ಸರ್ವಾನುಮತದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಂಬಲಕ್ಕೆ ನಿಲ್ಲುವ ನಿರ್ಣಯ ತೆಗೆದುಕೊಳ್ಳಲಾಯಿತು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಕಾಂಗ್ರೆಸ್ ಶಾಸಕಾಂಗ ಸಭೆ ನಂತರ ವಿಧಾನಸೌಧದಲ್ಲಿ ನಡೆದ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಯಾವುದೇ ಪ್ರಾಥಮಿಕ ತನಿಖೆ ನಡೆಯದೇ ಮುಖ್ಯಮಂತ್ರಿಗಳ ವಿರುದ್ಧ ಸೆಕ್ಷನ್ 17 (ಎ) ಅಡಿಯಲ್ಲಿ ವಿಚಾರಣೆ ನಡೆಸಲು ಅನುಮತಿ ನೀಡಿರುವ ರಾಜ್ಯಪಾಲರ ತೀರ್ಮಾನವನ್ನು ಖಂಡಿಸುವ ಬಗ್ಗೆ ಹಿರಿಯ ಶಾಸಕರಾದ ಆರ್.ವಿ.ದೇಶಪಾಂಡೆ ಅವರು ನಿರ್ಣಯಗಳನ್ನು ಸೂಚಿಸಿದರು. ತನ್ವೀರ್ ಸೇಠ್ ಅವರು ಇವುಗಳಿಗೆ ಅನುಮೋದನೆ ನೀಡಿದರು” ಎಂದು ತಿಳಿಸಿದರು.

“ಪಕ್ಷದ ಎಲ್ಲಾ ಶಾಸಕರು ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದ್ದೇವೆ. ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು ಭಾಗವಹಿಸಿದ್ದರು. ಸ್ಪೀಕರ್ ಆದೇಶದಂತೆ ಆರು ಶಾಸಕರು ದೆಹಲಿಯಲ್ಲಿ ನಡೆಯುತ್ತಿರುವ ತರಬೇತಿಗೆ ತೆರಳಿದ್ದು, ಉಳಿದ ಎಲ್ಲಾ ಶಾಸಕರು ಈ ಸಭೆಯಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್ ಕಾರ್ಯಕರ್ತರು ರಾಜ್ಯದೆಲ್ಲೆಡೆ ಪ್ರತಿಭಟನೆ ಮಾಡುತ್ತಿದ್ದಾರೆ. ಅವರಿಗೆ ನಾವು ಅಭಿನಂದನೆ ಸಲ್ಲಿಸುತ್ತೇವೆ” ಎಂದು ಹೇಳಿದರು.

“ಕರ್ನಾಟಕದ ಜನತೆ 136 ಸ್ಥಾನಗಳನ್ನು ನೀಡಿ ನಮ್ಮ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಜನರ ಆಶೀರ್ವಾದದಿಂದ ರಚಿಸಲಾಗಿರುವ ಈ ಕಾಂಗ್ರೆಸ್ ಸರ್ಕಾರವನ್ನು ಅಭದ್ರಗೊಳಿಸಲು ಪ್ರಯತ್ನಿಸುತ್ತಿವೆ. ಅವರು ಏನೇ ಪ್ರಯತ್ನಿಸಿದರು ಸರ್ಕಾರವನ್ನು ಜಗ್ಗಿಸಲು ಅವರಿಂದ ಸಾಧ್ಯವಿಲ್ಲ. ಇಡೀ ಕಾಂಗ್ರೆಸ್ ಶಾಸಕಾಂಗ ಪಕ್ಷ ಸಿದ್ದರಾಮಯ್ಯ ಅವರ ಪರವಾಗಿ ಇದೆ” ಎಂದರು.

“ಶುಕ್ರವಾರ (ಆ.23) ಹೈಕಮಾಂಡ್ ನಾಯಕರ ಭೇಟಿಗೆ ಸಮಯ ಪಡೆದಿದ್ದು, ನಾನು ಹಾಗೂ ಮುಖ್ಯಮಂತ್ರಿಗಳು ರಾಜ್ಯದ ವಿದ್ಯಮಾನಗಳ ಬೆಳವಣಿಗೆ ಕುರಿತು ಚರ್ಚೆ ಮಾಡಲಿದ್ದೇವೆ. ರಾಜ್ಯಪಾಲರ ನಡವಳಿಕೆ ವಿರುದ್ಧ ನ್ಯಾಯಾಲಯದಲ್ಲೂ ಮೇಲ್ಮನವಿ ಸಲ್ಲಿಸಿದ್ದೇವೆ. ನಮಗೆ ನ್ಯಾಯಾಲಯದಲ್ಲಿ ನಂಬಿಕೆ ಇದೆ. ಕಾನೂನು ಹಾಗೂ ಸಂವಿಧಾನ ವಿರುದ್ಧವಾಗಿ ನೀಡಿರುವ ಆದೇಶದಿಂದ ನಮಗೆ ರಕ್ಷಣೆ ಸಿಗುವ ನಿರೀಕ್ಷೆಯಿದೆ. ಒಂದು ಭಾಷಣದ ನೆಪ ಇಟ್ಟುಕೊಂಡು ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿ ಅವರು 6 ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ತಡೆಯುವ ಷಡ್ಯಂತ್ರ ರೂಪಿಸಲಾಗಿತ್ತು. ಈಗ ಅದೇ ರೀತಿ ನಮ್ಮ ಮುಖ್ಯಮಂತ್ರಿಗಳ ವಿರುದ್ಧವೂ ಸಂಚು ರೂಪಿಸಲಾಗುತ್ತಿದೆ” ಎಂದು ತಿಳಿಸಿದರು.

“ನಮ್ಮ ಮುಖ್ಯಮಂತ್ರಿ ಹಾಗೂ ಸರ್ಕಾರದ ವಿರುದ್ಧ ಸಂಚು ನಡೆಯುತ್ತಿದ್ದು, ನಮಗೆ ಜನಬೆಂಬಲವಿದೆ. ನಾವು ಇದಕ್ಕೆ ಜಗ್ಗುವುದಿಲ್ಲ. ಸಂವಿಧಾನ ರಕ್ಷಣೆ ಮಾಡುವ ಕೆಲಸಕ್ಕೆ ನಾವು ಬದ್ಧರಾಗಿರುತ್ತೇವೆ” ಎಂದು ತಿಳಿಸಿದರು.

“ಇಂಡಿಯಾ ಮೈತ್ರಿಕೂಟ ಬೆಂಬಲ ಇದೆಯೇ ಎಂದು ಕೇಳಿದಾಗ, “ಇಂಡಿಯಾ ಮೈತ್ರಿಕೂಟ ಹುಟ್ಟಿದ್ದೇ ಇಲ್ಲಿ. ಇಲ್ಲಿ ಹುಟ್ಟಿ 234 ಸೀಟುಗಳನ್ನು ದೇಶದಲ್ಲಿ ಪಡೆದಿದೆ. ಸದ್ಯ ನಮ್ಮ ರಾಜ್ಯದಲ್ಲಿ ಒಗ್ಗಟ್ಟಿನಿಂದ ಹೋರಾಟ ಮಾಡಲಿದ್ದೇವೆ. ನಾಳೆ ದೆಹಲಿಗೆ ಭೇಟಿ ನೀಡಿ ಚರ್ಚೆ ಮಾಡಿದ ನಂತರ ಉಳಿದ ವಿಚಾರ ತಿಳಿಸುತ್ತೇವೆ” ಎಂದು ತಿಳಿಸಿದರು. 

“ರಾಜ್ಯಪಾಲರ ನಿರ್ಣಯವನ್ನು ಸಚಿವ ಸಂಪುಟ ಸಭೆ ಖಂಡಿಸಿರುವುದು ಯಾವ ಸಂದೇಶ ರವಾನಿಸಲಿದೆ ಎಂದು ಕೇಳಿದಾಗ, “ಕರ್ನಾಟಕದ ಘನವೆತ್ತ ರಾಜ್ಯಪಾಲರಲ್ಲಿ ನಾವು ಮಾಡಿಕೊಳ್ಳುವ ಮನವಿ, ಆಗ್ರಹ ಎಂದರೆ, ರಾಜ್ಯಪಾಲರು ತಮ್ಮ ಅನುಮತಿಯನ್ನು ಹಿಂಪಡೆಯಬೇಕು. ಆಗ ಸಂವಿಧಾನ ರಕ್ಷಣೆ ಮಾಡಿ, ಕಾನೂನಿಗೆ ಗೌರವ ನೀಡಿದಂತಾಗುತ್ತದೆ. ಈ ವಿಚಾರವಾಗಿ ನಾವು ಕಾನೂನು ಹೋರಾಟಕ್ಕೂ ಮುಂದಾಗಿದ್ದು, ರಾಜ್ಯಪಾಲರು ಮುಖಭಂಗದಿಂದ ಪಾರಾಗಬೇಕಾದರೆ ಈಗಲೂ ತಮ್ಮ ನಿರ್ಣಯವನ್ನು ಹಿಂಪಡೆಯಬೇಕು” ಎಂದು ತಿಳಿಸಿದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button