ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಜೆಟ್ ಮಂಡನೆಗೆ ರಾಜ್ಯ ಸರ್ಕಾರಕ್ಕೆ ನೈತಿಕತೆ ಇಲ್ಲ ಎಂದು ಹೇಳಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಜೆಟ್ ಮಂಡನೆ ವೇಳೆ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಜನವರಿ 27 ರಂದು ಬಿಎಸ್ ವೈ ಹಾಗೂ ನಿರಾಣಿ ವಿರುದ್ಧ ಪ್ರಕರಣ ದಾಖಲಾಗಿದೆ. ತಮ್ಮ ವಿರುದ್ಧದ ಪ್ರಕರಣ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದರು. ಆದರೆ ಹೈಕೋರ್ಟ್ ಇಬ್ಬರ ವಿರುದ್ಧ ತನಿಖೆಗೆ ಆದೇಶಿಸಿತು. ಇದನ್ನು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿ ನಿರೀಕ್ಷಣಾ ಜಾಮೀನಿನ ಮೇಲೆ ಇಬ್ಬರೂ ಹೊರಗಿದ್ದಾರೆ. ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿ ಮುಂದುವರೆಯುವ ನೈತಿಕತೆ ಇಲ್ಲ ಎಂದರು.
ರಾಜ್ಯ ಸರ್ಕಾರ ಅನೈತಿಕತೆಯ ಮೂಟೆಯನ್ನೇ ಹೊತ್ತಿದೆ. ರಮೇಶ್ ಜಾರಕಿಹೊಳಿ ಸಿದಿ ಪ್ರಕರಣ ನಡೆದಿದೆ. ಅದಾದ ಬಳಿಕ ಭಯದಿಂದ 6 ಸಚಿವರು ಕೋರ್ಟ್ ಮೊರೆ ಹೋಗಿದ್ದಾರೆ. ತಮ್ಮ ವಿರುದ್ಧ ಸುದ್ದಿ ಪ್ರಸಾರಕ್ಕೆ ತಾತ್ಕಾಲಿಕ ನಿರ್ಬಂಧ ತಂದಿದ್ದಾರೆ. ಸಚಿವರು ಏನೋ ತಪ್ಪು ಮಾಡಿದ್ದಾರೆ. ಅದಕ್ಕೇ ಕೋರ್ಟ್ ಮೊರೆ ಹೋಗಿದ್ದಾರೆ. ಒಟ್ಟಾರೆ ಇಡೀ ಸರ್ಕಾರಕ್ಕೆ ನೈತಿಕತೆ ಎಂಬುದು ಇಲ್ಲ. ಬಜೆಟ್ ಮಂಡನೆ ವೇಳೆ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
ಎರಡುವರೆ ಲಕ್ಷ ಕೋಟಿ ರೂಪಾಯಿಗಳ ಸರ್ಕಾರ ಇದಾಗಿದ್ದು, ಅನೈತಿಕ ಸರ್ಕಾರ ವೆಚ್ಚ ಮಾಡುವುದು ತಪ್ಪಾಗಿದೆ. ಸಂವಿಧಾನ ಬಾಹಿರ ಕೆಲಸಕ್ಕೆ ಕಾಂಗ್ರೆಸ್ ಬೆಂಬಲ ನೀಡಲ್ಲ. ಬಜೆಟ್ ಮಂಡನೆಗೆ ವಿರೋಧಿಸಿ ಕಾಂಗ್ರೆಸ್ ನಿಂದ ಧರಣಿ ನಡೆಸಲಾಗುವುದು. ಮೊದಲ ಭಾರಿಗೆ ಬಜೆಟ್ ನಿಂದ ವಾಕೌಟ್ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ