
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಿಎಂ ಬಿ ಎಸ್ ಯಡಿಯೂರಪ್ಪ ದಾವೋಸ್ ನಿಂದ ವಾಪಸ್ ಆದ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಹೇಳಲಾಗಿತ್ತು. ಆದರೀಗ ಸಂಪುಟ ವಿಸ್ತರಣೆ ಮತ್ತೆ ವಿಳಂಬವಾಗಲಿದೆ ಎನ್ನಲಾಗಿದೆ.
ಸಿಎಂ ಯಡಿಯೂರಪ್ಪ ಕೂಡ ಇನ್ನು ಮೂರ್ನಾಲ್ಕು ದಿನಗಳಲ್ಲಿ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ನಿನ್ನೆ ಹೇಳಿದ್ದರು. ಆದರೆ ಈಗ ಇನ್ನೂ ಮೂರ್ನಾಲ್ಕು ದಿನಗಳ ಕಾಲ ಯಡಿಯೂರಪ್ಪನವರಿಗೆ ಬಿಡುವಿಲ್ಲದ ಪೂರ್ವನಿಯೋಜಿತ ಕಾರ್ಯಕ್ರಮಗಳಿರುವ ಹಿನ್ನೆಲೆಯಲ್ಲಿ ಮೂರು ದಿನ ಸಂಪುಟ ವಿಸ್ತರಣೆಯ ಕುರಿತಂತೆ ಯಾವುದೇ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವುದಿಲ್ಲ ಎನ್ನಲಾಗಿದೆ.
ಯಡಿಯೂರಪ್ಪ ದಾವೋಸ್ ನಿಂದ ರಾಜಧಾನಿಗೆ ಮರಳುತ್ತಿದ್ದಂತೆ ಸಚಿವಾಕಾಂಕ್ಷಿಗಳ ಒತ್ತಡ ಕೂಡ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಇನ್ನ ಮೂರು ದಿನದಲ್ಲಿ ಸಂಪುಟ ವಿಸ್ತರಣೆ ಮಾಡಲಾಗುವುದು. ಗೆದ್ದ ಅಭ್ಯರ್ಥಿಗಳಿಗೆ ಮಾತ್ರ ಸಂಪುಟದಲ್ಲಿ ಸ್ಥಾನ ನೀಡಲಾಗುತ್ತದೆ ಎಂದು ತಿಳಿಸಿದ್ದರು.
ಆದರೆ, ಮೂಲಗಳ ಪ್ರಕಾರ ಸಂಪುಟ ವಿಸ್ತರಣೆ ಸಿಎಂ ಹೇಳಿದ್ದ ಈ ಅವಧಿಯಲ್ಲಿ ನಡೆಯುವುದು ಅಸಾಧ್ಯ. ಇನ್ನು 4 ದಿನ ಮುಖ್ಯಮಂತ್ರಿಗಳು ಜಿಲ್ಲಾ ಪ್ರವಾಸ ನಡೆಸುತ್ತಿದ್ದಾರೆ. ನಾಳೆ ಮೈಸೂರಿಗೆ ತೆರಳುತ್ತಿದ್ದು ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಕೆಆರ್ನಗರದಲ್ಲಿ ಜನಜಾಗೃತಿ ಸಮ್ಮೇಳನದಲ್ಲಿಯೂ ಹಾಜರಾಗಲಿದ್ದಾರೆ. ಇನ್ನು ನಾಡಿದ್ದು ಮಡಿಕೇರಿಯಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಅಡಿಗಲ್ಲು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. 29ರಂದು ಬೆಳಗಾವಿ ಜಿಲ್ಲಾ ಪ್ರವಾಸ ನಡೆಸಲಿದ್ದಾರೆ.
ಸೋಮವಾರ ಅಥವಾ ಮಂಗಳವಾರ ಯಡಿಯೂರಪ್ಪ ದೆಹಲಿಗೆ ತೆರಳುವ ಸಾಧ್ಯತೆ ಇದೆ ಎನ್ನಲಾಗಿತ್ತಾದರೂ ದೆಹಲಿ ಭೇಟಿಯೂ ಇದುವರೆಗೂ ಖಚಿತವಾಗಿಲ್ಲ. ಒಟ್ಟಾರೆ ಸಂಪುಟ ವಿಸ್ತರಣೆ ಇನ್ನಷ್ಟು ತಡವಾಗಲಿದೆ ಎನ್ನಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ