
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡದೇ ಮಗನ ಮದುವೆಯನ್ನು ಸರಳವಾಗಿ ಮಾಡಿದ್ದಕ್ಕೆ ಕುಮಾರಸ್ವಾಮಿಯವರಿಗೆ ಧನ್ಯವಾದ ತಿಳಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಕೊರೊನಾ ಲಾಕ್ ಡೌನ್ ಇದ್ದಾಗ್ಯೂ ಕುಮಾರಸ್ವಾಮಿಯವರು ಮಗ ನಿಖಿಲ್ ಮದುವೆಯನ್ನು ಬೆಂಗಳೂರಿನಿಂದ ರಾಮನಗರದ ತೋಟದ ಮನೆಗೆ ಶಿಫ್ಟ್ ಮಾಡಿದ್ದಲ್ಲದೇ ವಿವಾಹ ಸಮರಂಭಕ್ಕೆ ಹಲವು ಜನರನ್ನು ಕರೆದುಕೊಂಡು ಹೋಗಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿದ ಸಿಎಂ ಯಡಿಯೂರಪ್ಪ, ಕುಮಾರಸ್ವಾಮಿ ಅವರು ಸರಳವಾಗಿ ಮದುವೆ ಮಾಡಿದ್ದಾರೆ. ಅವರ ಕುಟುಂಬ ದೊಡ್ಡದಿದ್ದರೂ ಹೆಚ್ಚು ಜನರನ್ನು ಸೇರಿಸದೆ ಮದುವೆ ಕಾರ್ಯ ಮುಗಿಸಿದ್ದಾರೆ. ಹೀಗಾಗಿ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಕುಮಾರಸ್ವಾಮಿಯವರು ಮಗನ ಮದುವೆಗೆ ಅನುಮತಿ ಕೇಳಿದ್ದರು, ರಾಜ್ಯ ಸರ್ಕಾರದಿಂದ ಅನುಮತಿ ಪಡೆದುಕೊಂಡೇ ಸರಳವಾಗಿ ವಿವಾಹ ಮಾಡಿದ್ದಾರೆ. ಈ ಬಗ್ಗೆ ಹೆಚ್ಚಿನ ಚರ್ಚೆ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ