ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ 2ನೇ ಅಲೆ ನಿಯಂತ್ರಿಸಲು ರಾಜ್ಯ ಸರ್ಕಾರ ಕೈಗೊಂಡ ಕಠಿಣ ಕ್ರಮಗಳಿಂದಾಗಿ ಕೊರೊನಾ ಪ್ರಕರಣಗಳು ಇಳಿಕೆಯಾಗುತ್ತಿವೆ ಎಂದಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಯಾವುದೇ ಆರ್ಥಿಕ ಪ್ಯಾಕೇಜ್ ಘೋಷಿಸದೇ ಸರ್ಕಾರ ಕೈಗೊಂಡ ಕ್ರಮಗಳನ್ನಷ್ಟೇ ವಿವರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಿಎಂ ಯಡಿಯೂರಪ್ಪ, ಲಾಕ್ ಡೌನ್ ನಿಂದ ಸಂಕಷ್ಟಕ್ಕೀಡಾಗಿರುವ ಬಡ ಜನರಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸುವ ನಿರೀಕ್ಷೆಯಿತ್ತು. ಆದರೆ ಯಾವುದೇ ಆರ್ಥಿಕ ಪ್ಯಾಕೇಜ್ ಘೋಷಿಸದ ಸಿಎಂ ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಕೈಗೊಂದ ಕ್ರಮಗಳ ಬಗ್ಗೆ ಮಾತ್ರ ಮಾಹಿತಿ ನೀಡಿದ್ದಾರೆ.
ಕೊರೊನಾ ಎರಡನೇ ಅಲೆ ಆರಂಭದ ದಿನಗಳಲ್ಲಿ ರಾಜ್ಯದಲ್ಲಿ 50,112 ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗುತ್ತಿದ್ದವು. ನಿನ್ನೆ 39 ಸಾವಿರಕ್ಕೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಮೇ 5ರಂದು 23,106 ಪ್ರಕರಣ ಪತ್ತೆಯಾಗಿದ್ದವು. ನಿನ್ನೆ 16 ಸಾವಿರಕ್ಕೆ ಇಳಿಮುಖವಾಗಿದೆ. ರಾಜ್ಯದಲ್ಲಿ ಕೈಗೊಂಡ ಕಠಿಣ ಕ್ರಮದಿಂದಾಗಿ ಕೋವಿಡ್ ಪ್ರಕರಣಗಳು ಇಳಿಮುಖವಾಗಿವೆ ಎಂಬುದು ಸಮಾಧಾನಕರ ಸಂಗತಿ ಎಂದು ಹೇಳಿದರು.
ರಾಜ್ಯದಲ್ಲಿ 120 ಆಕ್ಸಿಜನ್ ಉತ್ಪಾದನಾ ಘಟಕ ನಿರ್ಮಿಸಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸಲಾಗಿದ್ದು, 10,000 ಆಕ್ಸಿಜನ್ ಸಿಲಿಂಡರ್ ಖರೀದಿಗೆ ತೀರ್ಮಾನಿಸಲಾಗಿದೆ. ಇನ್ನೂ 7,೦೦೦ ಆಕ್ಸಿಜನ್ ಕಾನ್ಸಂಟ್ರೇಟರ್ ಹೆಚ್ಚಿಸಲಾಗುವುದು. 3 ಕೋಟಿ ಲಸಿಕೆ ಖರೀದಿಗೆ ಆರ್ಡರ್ ನೀಡಲಾಗಿದೆ. 1.10 ಕೋಟಿ ಡೋಸ್ ಲಸಿಕೆಯನ್ನು ಕೇಂದ್ರ ಸರ್ಕಾರ ನೀಡಿದೆ. 18-44 ವರ್ಷದ ವರೆಗಿನವರಿಗಿನವರಿಗೆ ಲಸಿಕೆ ನೀಡಿಕೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಹೇಳಿದರು.
ಹೋಂ ಐಸೋಲೇಷನ್ ನಲ್ಲಿರುವ ಸೋಂಕಿತರ ಅನುಕೂಲಕ್ಕಾಗಿ ಓಲಾ ಮತ್ತು ಗಿವ್‍ಇಂಡಿಯಾ ಸಂಸ್ಥೆಯವರು ಒಂದು ಸಾವಿರ ಆಕ್ಸಿಜನ್ ಕಾನ್ಸಂಟ್ರೇಟರುಗಳನ್ನು ಉಚಿತವಾಗಿ ಎರವಲು ನೀಡಲು ಮುಂದಾಗಿರುವುದು ಹರ್ಷದಾಯಕ ಸಂಗತಿ. ಇದೇ ರೀತಿ ಸಂಚಾರಿ ಆಕ್ಸಿಜನ್ ಸೇವೆ ಒದಗಿಸುವ ಆಕ್ಸಿಬಸ್‍ಗಳಿಗೆ ಚಾಲನೆ ನೀಡಲಾಗಿದ್ದು, ಸರ್ಕಾರಿ ಆಸ್ಪತ್ರೆಗಳು ಮತ್ತು ಟ್ರಯೇಜ್ ಸೆಂಟರುಗಳ ಬಳಿ ತುರ್ತು ಅಗತ್ಯವಿರುವವರಿಗೆ ನೆರವಾಗುತ್ತಿವೆ ಎಂದರು.
ಸುದ್ದಿಗೋಷ್ಠಿ ಪ್ರಮುಖಾಂಶಗಳು:
* ಭಾರತ ಸರ್ಕಾರವು 45 ವರ್ಷ ಮೇಲ್ಪಟ್ಟ ನಾಗರಿಕರಿಗೆ, ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಮುಂಚೂಣಿಯ ಕಾರ್ಯಕರ್ತರಿಗೆ ಲಸಿಕೆ ಪೂರೈಕೆ ಮಾಡುತ್ತಿದೆ. ಈ ವರೆಗೆ 1.10 ಕೋಟಿ ಡೋಸ್‍ಗಳನ್ನು ಭಾರತ ಸರ್ಕಾರ ಒದಗಿಸಿದ್ದು, ಅದರಲ್ಲಿ 99.5 ಲಕ್ಷ ಕೋವಿಶೀಲ್ಡ್ ಹಾಗೂ 10.9 ಲಕ್ಷ ಕೋವ್ಯಾಕ್ಸಿನ್ ಲಸಿಕೆಗಳು.
* ರಾಜ್ಯ ಸರ್ಕಾರವು 18 ರಿಂದ 44 ವರ್ಷದೊಳಗಿನವರಿಗೆ ಲಸಿಕೆ ನೀಡಲು 3 ಕೋಟಿ ಡೋಸ್ ಲಸಿಕೆಗಳ ಖರೀದಿಗೆ ಆದೇಶ ನೀಡಿದೆ. ಅದರಲ್ಲಿ 2 ಕೋಟಿ ಡೋಸ್ ಕೋವಿಶೀಲ್ಡ್ ಹಾಗೂ 1 ಕೋಟಿ ಡೋಸ್ ಕೊವ್ಯಾಕ್ಸಿನ್ ಸೇರಿದೆ. ಅಲ್ಲದೆ ಹೆಚ್ಚುವರಿಯಾಗಿ 2 ಕೋಟಿ ಡೋಸ್ ಇಂಜೆಕ್ಷನ್ ಸರಬರಾಜು ಮಾಡಲು ಜಾಗತಿಕ ಟೆಂಡರು ಕರೆಯಲಾಗಿದೆ.
* ಈ ವರೆಗೆ 7.5 ಲಕ್ಷ ಕೋವಿಶೀಲ್ಡ್ ಹಾಗೂ 1.44 ಲಕ್ಷ ಕೊವ್ಯಾಕ್ಸಿನ್ ಸೇರಿದಂತೆ 8.94 ಲಕ್ಷ ಡೋಸ್‍ಗಳು ಲಭ್ಯವಾಗಿದೆ.
* ಕೋವಿಶೀಲ್ಡ್ ಲಸಿಕೆ ಪಡೆದ 14.87 ಲಕ್ಷ ಫಲಾನುಭವಿಗಳು ಆರು ವಾರ ಪೂರೈಸಿದ್ದು, ಎರಡನೇ ಡೋಸ್‍ಗೆ ಅರ್ಹತೆ ಹೊಂದಿದ್ದಾರೆ. ಕೊ-ವ್ಯಾಕ್ಸಿನ್ ಮೊದಲ ಡೋಸ್ ಪಡೆದ 5.10 ಲಕ್ಷ ಫಲಾನುಭವಿಗಳು 4 ವಾರ ಪೂರೈಸಿದ್ದು, ಎರಡನೇ ಡೋಸ್ ಪಡೆಯಲು ಅರ್ಹತೆ ಹೊಂದಿದ್ದಾರೆ. ಅಂದರೆ ಇಂದಿನ ಅಂಕಿ ಅಂಶಗಳ ಪ್ರಕಾರ 19.97 ಲಕ್ಷ ಮಂದಿ ಎರಡನೇ ಡೋಸ್ ಲಸಿಕೆ ಪಡೆಯಲು ಅರ್ಹತೆ ಹೊಂದಿದ್ದಾರೆ.
* ಮೊದಲ ಡೋಸ್ ಪಡೆದವರು ಸಂಪೂರ್ಣ ಸುರಕ್ಷತೆ ಹೊಂದಲು ಎರಡನೇ ಡೋಸ್ ಲಸಿಕೆ ನೀಡುವುದು ಅತಿ ಅಗತ್ಯ. ಆದ್ದರಿಂದ ಲಭ್ಯವಿರುವ ಲಸಿಕೆಯ ದಾಸ್ತಾನನ್ನು ಎರಡನೇ ಡೋಸ್ ಪಡೆಯಲು ಅರ್ಹತೆ ಹೊಂದಿರುವವರಿಗೆ ನೀಡಲು ನಿರ್ಧರಿಸಿದ್ದೇವೆ. ಈ ಕಾರಣಕ್ಕಾಗಿ 18 ರಿಂದ 44 ವರ್ಷದೊಳಗಿನವರಿಗೆ ಲಸಿಕೆ ನೀಡುವ ಕಾರ್ಯಕ್ರಮವನ್ನು ನಾವು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ.
* ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ಮೈಕ್ರೋ ಬಯಾಲಜಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರೊ. ಗಗನ್‍ದೀಪ್ ಕಾಂಗ್ ಅವರನ್ನು ರಾಜ್ಯದ ವ್ಯಾಕ್ಸಿನೇಷನ್ ಕಾರ್ಯತಂತ್ರದ ಸಲಹೆಗಾರರಾಗಿ ರಾಜ್ಯ ಸರ್ಕಾರವು ನೇಮಕ ಮಾಡುತ್ತಿದೆ. ಇವರು ವ್ಯಾಕ್ಸಿನ್‍ಗಳ ಸಂಶೋಧನೆ ಮತ್ತು ಅವುಗಳ ಬಳಕೆ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆಯು ರಚಿಸಿರುವ ಸಲಹಾ ಸಮಿತಿಗಳ ಸದಸ್ಯರಾಗಿರುತ್ತಾರೆ.
ರೆಮ್‍ಡಿಸಿವಿರ್ ಇಂಜೆಕ್ಷನ್
* ಭಾರತ ಸರ್ಕಾರವು ರಾಜ್ಯಕ್ಕೆ ಏಪ್ರಿಲ್ 21 ರಿಂದ ಮೇ 9 ರ ಅವಧಿಗೆ 3.01 ಲಕ್ಷ ರೆಮ್‍ಡಿಸಿವಿರ್ ಹಂಚಿಕೆ ಮಾಡಿದ್ದು, ಈ ಅವಧಿಯಲ್ಲಿ 2.72 ಲಕ್ಷ ಡೋಸ್ ರೆಮ್‍ಡಿಸಿವಿರ್ ಪೂರೈಕೆಯಾಗಿದೆ. ಇಂಜೆಕ್ಷನ್ ಪೂರೈಕೆಯಲ್ಲಿ ವಿಳಂಬ ಮಾಡಿದ ಕಂಪೆನಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮೇ 10 ರಿಂದ 16ರ ಅವಧಿಗೆ 2.74 ಲಕ್ಷ ಇಂಜೆಕ್ಷನ್‍ಗಳು ಹಂಚಿಕೆಯಾಗಿದೆ. ಇವು ಸಕಾಲದಲ್ಲಿ ಪೂರೈಕೆಯಾಗುವ ಕುರಿತು ನಿರಂತರ ಪರಿಶೀಲನೆ ಹಾಗೂ ಸಮನ್ವಯ ನಡೆಸಲಾಗುತ್ತಿದೆ.
* ರಾಜ್ಯದಲ್ಲಿ ರೆಮ್‍ಡಿಸಿವಿರ್‍ಗೆ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಇತರ ರಾಜ್ಯಗಳ ಕೋಟಾದಲ್ಲಿ ಬಳಕೆಯಾಗದೆ ಉಳಿದ ಇಂಜೆಕ್ಷನ್‍ಗಳನ್ನು ಪೂರೈಸುವಂತೆಯೂ ಭಾರತ ಸರ್ಕಾರಕ್ಕೆ ಮನವಿ ಮಾಡಲಾಗಿದೆ.
* ಖಾಸಗಿ ಆಸ್ಪತ್ರೆಗಳ ಬೇಡಿಕೆ ಪರಿಶೀಲಿಸಿ, ಸಮಾನವಾಗಿ ಹಂಚಿಕೆ ಮಾಡಲು ಪಾರದರ್ಶಕ ವ್ಯವಸ್ಥೆಯನ್ನು ರೂಪಿಸಲಾಗಿದೆ.
* ರಾಜ್ಯದಲ್ಲಿ ಕೋವಿಡ್ 19ರ ಸಂಭವನೀಯ ಮೂರನೇ ಅಲೆಯನ್ನು ಎದುರಿಸಲು ಸಿದ್ಧತೆಗಾಗಿ ನಾರಾಯಣ ಹೆಲ್ತ್‍ನ ಛೇರ್‍ಮನ್ ಡಾ. ದೇವಿ ಪ್ರಸಾದ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಪಡೆಯನ್ನು ರಚಿಸಲಾಗುವುದು.
* ಕಠಿಣ ನಿಯಮಾವಳಿಗಳನ್ನು ಜಾರಿಗೆ ತಂದ ನಂತರ ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸಿದೆ. ಎಸ್.ಎಸ್.ಎಲ್.ಸಿ ಪರೀಕ್ಷೆ ಮುಂದೂಡಿಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ