ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಲಾಕ್ ಡೌನ್ ನಿಂದಾಗಿ ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿರುವ ರಾಜ್ಯದ ಜನತೆಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು 500 ಕೋಟಿ ಮೌಲ್ಯದ 3ನೇ ಪ್ಯಾಕೇಜ್ ಘೋಷಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಮೆಕ್ಕೆಜೋಳ ಬೆಳೆದ ರೈತರಿಗೆ, ಆಶಾ ಕಾರ್ಯಕರ್ತೆಯರಿಗೆ ಭರ್ಜರಿ ಕೊಡುಗೆ ನೀಡಿದ್ದಾರೆ. ರಾಜ್ಯದಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ಮೆಕ್ಕೆಜೋಳ ರೈತರಿದ್ದಾರೆ. ಇವರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿ ಸರ್ಕಾರವೇ ಖರೀದಿಸಲು ಮುಂದಾಗಿದೆ. ಮೆಕ್ಕೆಜೋಳ ಬೆಳೆಗಾರರಿಗೆ ತಲಾ 5 ಸಾವಿರ ರೂ ನೀಡಲಾಗುವುದು ಎಂದು ಘೋಷಿಸಿದರು.
ಈ ಹಿಂದೆ ನೈಸರ್ಗಿಕ ವಿಕೋಪ ಮತ್ತು ಅಪಘಾತದಿಂದ ಕುರಿ ಮೇಕೆ ಸತ್ತರೆ ರೈತರಿಗೆ 5,000 ರೂ ಪರಿಹಾರ ನೀಡಲಾಗುತ್ತಿತ್ತು. ಈ ಯೋಜನೆಯನ್ನು ಹಾಗೆ ಮುಂದುವರಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.
ಎಪಿಎಂಸಿ ಕಾಯ್ದೆ ತಿದ್ದುಪಡಿ ಬಗ್ಗೆ ತಪ್ಪು ಅಭಿಪ್ರಾಯಗಳು ಕೇಳಿ ಬರುತ್ತಿವೆ. ನಾನು ರೈತಪರ ಬಜೆಟ್ ಮಂಡಿಸಿದವನು. ನನ್ನಿಂದ ರೈತರಿಗೆ ಅನ್ಯಾಯ ಆಗಲ್ಲ. ಶಿಕಾರಿಪುರದಲ್ಲಿ 45 ವರ್ಷಗಳ ಹಿಂದೆ ಎಪಿಎಂಸಿ ಮುಂದೆ ರೈತರು ಬೆಳೆದ ಬೆಳೆಗೆ ನಾನು ಹೋರಾಟ ಮಾಡಿದ್ದೆ. ರೈತ ತನ್ನ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡುವ ಅವಕಾಶ ಕಲ್ಪಿಸಿದ್ದೇವೆ. ಈ ಕಾಯ್ದೆಯಿಂದ ಎಪಿಎಂಸಿ ಸಮಿತಿಗಳಿಗೆ ಯಾವುದೇ ದಕ್ಕೆ ಆಗಲ್ಲ ಎಂದು ಭರವಸೆ ನೀಡಿದರು.
ಇನ್ನು ಕೊರೋನಾ ಪರಿಸ್ಥಿತಿಯಲ್ಲಿ ರಾಜ್ಯಾದ್ಯಂತ ಸೇವೆ ಸಲ್ಲಿಸಿರುವ ಆಶಾ ಕಾರ್ಯಕರ್ತೆಯರಿಗೆ 3,000 ಮಾಸಿಕ ಧನ ನೀಡಲು ಮುಂದಾಗಿದ್ದಾರೆ. ರಾಜ್ಯದಲ್ಲಿ ಸುಮಾರು 40,260 ಜನ ಆಶಾ ಕಾರ್ಯಕರ್ತೆಯರಿದ್ದು ಎಲ್ಲರಿಗೂ ಹಣ ತಲುಪಿಸಲಾಗುವುದು. ಇದಕ್ಕೆಂದು 12.5 ಕೋಟಿ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ