ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿರುವ ರಾಜ್ಯ ಸರಕಾರ, ಒಂದು ವಾರಗಳ ಕಾಲ ರಾಜ್ಯದಲ್ಲಿರುವ ಎಲ್ಲಾ ಕ್ಲಬ್, ಮಾಲ್, ಸಿನಿಮಾ ಮಂದಿರ, ಶಾಲಾ – ಕಾಲೇಜುಗಳನ್ನು ಮುಚ್ಚಲು ಆದೇಶಿಸಿದೆ.
ಕೊರೊನಾ ವೈರಸ್ ಹಬ್ಬುತ್ತಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಜ್ಞರ ಜೊತೆ ಎರಡು ಸುತ್ತಿನ ಸಭೆ ನಡೆಸಿದರು. ನಂತರ ಮಾತನಾಡಿದ ಸಿಎಂ, ಶನಿವಾರದಿಂದ ಒಂದು ವಾರ ಕಾಲ ಮಾಲ್ , ಸಿನಿಮಾ ಥಿಯೇಟರ್, ಪಬ್ ಅಂಡ್ ನೈಟ್ ಕ್ಲಬ್ಸ್, ಮೇಳಗಳು, ವಿಚಾರ ಸಂಕಿರಣಗಳು, ಕ್ರೀಡಾಕೂಟಗಳು, ಮದುವೆ – ನಿಶ್ಚಿತಾರ್ಥ ಸಮಾರಂಭಗಳು ಸೇರಿದಂತೆ ಯಾವುದೇ ರೀತಿಯ ಜನ ಸೇರುವ ಕಾರ್ಯಕ್ರಮಗಳನ್ನು ರಾಜ್ಯದೆಲ್ಲೆಡೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದರು.
ಅಲ್ಲದೇ ದೊಡ್ಡ ಮಟ್ಟದಲ್ಲಿ ಮದುವೆ ನಡೆಸುವುದನ್ನೂ ನಿಷೇಧಿಸಲಾಗಿದೆ. ಒಂದು ವಾರಗಳ ಬಳಿಕ ಪರಿಸ್ಥಿತಿ ಪರಾಮರ್ಶಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ಎಲ್ಲಾ ವಿಶ್ವವಿದ್ಯಾಲಯಗಳು ಕೂಡ ಒಂದು ವಾರ ಕಾಲ ಬಂದ್ ಆಗಲಿವೆ. ಆದರೆ ಶಾಲೆ – ಕಾಲೇಜುಗಳ ಪರೀಕ್ಷೆಗಳು ಮಾತ್ರ ನಿಗದಿಯಂತೆ ನಡೆಯಲಿವೆ. ಸಾಧ್ಯವಾದಷ್ಟು ಪ್ರವಾಸ ಮಾಡಬಾರದು ಎಂದು ಸೂಚಿಸಲಾಗಿದೆ. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು. ಒಂದು ವಾರದ ನಂತರ ಪರಿಸ್ಥಿತಿ ನೋಡಿಕೊಂಡು ಮುಂದೆ ಏನು ಮಾಡಬೇಕು ಎಂದು ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ