ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ಬಾದಾಮಿಯಿಂದ ಆಯ್ಕೆಯಾಗಿ ಜನರ ಸಮಸ್ಯೆ ಆಲಿಸಲು ಆಗದ ಸಿದ್ದರಾಮಯ್ಯನವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಕೊಪ್ಪಳ ಏತನೀರಾವರಿ ಯೋಜನೆಯ ಮೊದಲ ಹಂತದ ಮುಖ್ಯಸ್ಥಾವರವನ್ನು ಉದ್ಘಾಟನೆ ಮಾಡಿ ಮಾತನಾಡಿದ ಸಿಎಂ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಾವು ಜಾತಿ, ಧರ್ಮವನ್ನು ನೋಡಿ ಯೋಜನೆಗಳನ್ನು ಜಾರಿ ಮಾಡಲ್ಲ. ನಮ್ಮದು ಶಾಶ್ವತವಾದ ಜನಪರ ಯೋಜನೆಗಳು. ಆದರೆ ಕಾಂಗ್ರೆಸ್ ನವರದ್ದು ಬೋಗಸ್ ಯೋಜನೆಗಳು ಎಂದು ಕಿಡಿಕಾರಿದರು.
ಕಾಂಗ್ರೆಸ್ ನ ಗ್ಯಾರಂಟಿ ಕಾರ್ಡ್ ಗಳು ಯಾವುದೇ ಉಪಯೋಗಕ್ಕೆ ಬರುವುದಿಲ್ಲ, ಎಲ್ಲವನ್ನು ಉಪ್ಪಿನಕಾಯಿ ಹಾಕಬೇಕಷ್ಟೇ ಎಂದು ಲೇವಡಿ ಮಾಡಿದರು.
25 ಲಕ್ಷ ಮನೆಗಳಿಗೆ ಕುಡಿಯುವ ನೀರು ಪೂರೈಸಿದ್ದೇವೆ. ಇದು ಅಭಿವೃದ್ಧಿ, ಇದು ಸರ್ಕಾರದ ಸಾಧನೆ. ಪಿಯುಸಿ ಪದವಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲು ನಿರ್ಧರಿಸಿದ್ದೇವೆ. 4 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಿದ್ದೇವೆ. ದುಡಿಯುವ ಜನರಿಂದ ರಾಜ್ಯ ಕಟ್ಟುತ್ತಿದ್ದೇವೆ ಹೊರತು ಶ್ರೀಮಂತರಿಂದಲ್ಲಾ ಎಂದು ಹೇಳಿದರು.
ಕೆಲವೇ ದಿನಗಳಲ್ಲಿ ಬಿಜೆಪಿ ಪಟ್ಟಿ ಬಿಡುಗಡೆ
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ ಎಂದರು.
ನಿರುದ್ಯೋಗ ಭತ್ಯೆ ರಾಹುಲ್ ಗಾಂಧಿಯಿಂದ ಪ್ರಾರಂಭಿಸಬೇಕು
ನಿರುದ್ಯೋಗಿಗಳಿಗೆ ಮೂರು ಸಾವಿರ ನೀಡುವುದಾಗಿ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅವರಿಂದಲೇ ಪ್ರಾರಂಭವಾಗಬೇಕು ಎಂದರು. ನಿರುದ್ಯೋಗಿಗಳಿಗೆ ಭತ್ಯೆ ಬಗ್ಗೆ ರಾಜಸ್ತಾನ, ಛತ್ತೀಸ್ ಗಡ ದಲ್ಲಿಯೂ ಹೇಳಿದ್ದರು. ಆದರೆ ಅನುಷ್ಠಾನ ವಾಗಿಲ್ಲ. ಅವರು ಹತಾಶರಾಗಿದ್ದಾರೆ. ಅವರಿಗೆ ಆಂತರಿಕ ಸಮೀಕ್ಷೆಯಲ್ಲಿ ಗೆಲ್ಲುವುದಿಲ್ಲ ಎಂದು ತಿಳಿದಿದೆ. ಶೇ 3-4 ರಷ್ಟು ಮತ ಗೆಲ್ಲಲು ಈ ರೀತಿಯ ಆಗಲಾರದ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಕರ್ನಾಟಕ ರಾಜಸ್ತಾನ ಅಥವಾ ಛತ್ತೀಸ್ ಗಡ ಅಲ್ಲ. ಕರ್ನಾಟಕದ ಜನ ಬಹಳ ಪ್ರಬುದ್ಧರಿದ್ದಾರೆ. ಯಾರು ಯಾಕೆ ಮಾತನಾಡುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬೇಕು ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ