ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕಳೆದ ಒಂದು ವಾರದಲ್ಲಿ ದೇಶದಲ್ಲಿ ಕೊರೊನಾ ಹಾಗೂ ಒಮಿಕ್ರಾನ್ ಸೋಂಕು ಹೆಚ್ಚುತ್ತಿದೆ. ಮಹರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ವ್ಯಾಪಕವಾಗಿ ಹೆಚ್ಚುತ್ತಿದೆ. ಹಾಗಾಗಿ ಬೆಳಗಾವಿ ಜಿಲ್ಲೆಯಾದ್ಯಂತ ಕಠಿಣ ನಿಯಮ ಜಾರಿ ಅನಿವಾರ್ಯ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿಎಂ, ಮಹಾರಾಷ್ಟ್ರ ಅದರಲ್ಲೂ ಮುಂಬೈನಲ್ಲಿ ಕೋವಿಡ್ ಕೇಸ್ ಉಲ್ಬಣಗೊಳ್ಳುತ್ತಿದೆ. ಮುಂಬೈ ಹಾಗೂ ಕರ್ನಾಟಕ ಜನರ ವಹಿವಾಟು ಹೆಚ್ಚಿರುವುದರಿಂದ ಗಡಿ ಭಾಗಗಳಲ್ಲಿ ವಿಶೇಷವಾಗಿ ಬೆಳಗಾವಿಯಲ್ಲಿ ಕಟ್ಟುನಿಟ್ಟುನಿಟ್ಟಿನ ಕ್ರಮ ಅಗತ್ಯ ಎಂದರು.
ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಇತರ ಜಿಲ್ಲೆಗಳಲ್ಲಿ 11 ಚೆಕ್ ಪೋಸ್ಟ್ ಗಳನ್ನು ತೆರೆದು ತಪಾಸಣೆ ನಡೆಸುತ್ತಿದ್ದಾರೆ. ಬೆಳಗಾವಿಯಲ್ಲಿ ಕೂಡ ಈ ಕ್ರಮ ಕೈಗೊಳ್ಳಬೇಕಿದೆ. ಚೆಕ್ ಪೋಸ್ಟ್ ಗಳ ಸಂಖ್ಯೆ, ಕೋವಿಡ್ ಟೆಸ್ಟ್ ಸಂಖ್ಯೆ ಹೆಚ್ಚಿಸಬೇಕು. ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸುವವರಿಗೆ 2 ಡೋಸ್ ಲಸಿಕೆ ಕಡ್ಡಾಯ. ಕೋವಿಡ್ ನೆಗೆಟಿವ್ ವರದಿ ಕಡ್ಡಾಯವಾಗಿದೆ. ಟಫ್ ರೂಲ್ಸ್ ನಿಂದ ಪ್ರಯಾಣಿಕರಿಗೆ ತೊಂದರೆಯಾಗಬಹುದು. ಆದರೆ ರಾಜ್ಯದ ಜನರ ಆರೋಗ್ಯ ವಿಶೇಷವಾಗಿ ಬೆಳಗಾವಿ ಭಾಗದ ಜನರ ಹಿತದೃಷ್ಟಿಯಿಂದ ಇನ್ನಷ್ಟು ಬಿಗಿ ಕ್ರಮ ಅನಿವಾರ್ಯವಾಗಿದೆ.
ಈಗಾಗಲೇ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್, ವ್ಯಾಕ್ಸಿನೇಷನ್, ಕೋವಿಡ್ ಉಪಕರಣಗಳ ಸಿದ್ಧತೆಗೆ ಸೂಚಿಸಲಾಗಿದೆ. ಎರಡನೆ ಅಲೆಯಲ್ಲಿ ಆದಂತಹ ಪರಿಸ್ಥಿತಿ ಮತ್ತೆ ಮರುಕಳಿಸಬಾರದು ಎಂಬ ಕಾರಣಕ್ಕೆ ತಕ್ಷಣಕ್ಕೆ ಎಚ್ಚೆತ್ತು ಮುಂಜಾಗೃತಾ ಕ್ರಮ, ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಇನ್ನು ರಾಜ್ಯದಲ್ಲಿ ಲಾಕ್ ಡೌನ್ ಸುಳಿವು ನೀಡಿದ್ದ ಸಚಿವ ಆರ್.ಅಶೋಕ್ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ ಸಿಎಂ, ರಾಜ್ಯದಲ್ಲಿ ಕೋವಿಡ್ ಕೇಸ್ ಹೆಚ್ಚುತ್ತಿರುವುದರಿಂದ ಟಫ್ ರೂಲ್ಸ್ ಜಾರಿ ಮಾಡಲಾಗುತ್ತಿದೆ. ಟಫ್ ರೂಲ್ಸ್ ಗೆ ಜನ ಸಹಕರಿಸದಿದ್ದರೆ ಅನಿವಾರ್ಯವಾಗಿ ಲಾಕ್ ಡೌನ್ ಜಾರಿಮಾಡಬೇಕಾಗುತ್ತದೆ. ಸಚಿವ ಆರ್.ಅಶೋಕ್ ಹೇಳಿದ ಮಾತಿನ ಅರ್ಥವೂ ಇದೇ ಆಗಿದೆ. ಕಠಿಣ ನಿಯಮಕ್ಕೆ ಜನರು ಸಹಕರಿಸದಿದ್ದರೆ ಲಾಕ್ ಡೌನ್ ಜಾರಿಯಾಗುತ್ತೆ ಎಂದರು.
ರಾಜ್ಯದಲ್ಲಿ ಮತ್ತೆ ಜಾರಿಯಾಗುತ್ತಾ ಲಾಕ್ ಡೌನ್?; ರಾಜಧಾನಿಯಲ್ಲಿ ಟಫ್ ರೂಲ್ಸ್ ಖಚಿತ ಎಂದ ಆರ್.ಅಶೋಕ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ