ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸ್ವಾತಂತ್ರ್ಯ ಹೋರಾಟ ಹಾಗೂ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿರುವ ಬೆಳಗಾವಿ ಜಿಲ್ಲೆಯ ಸುವರ್ಣ ವಿಧಾನಸೌಧದ ಎದುರು ಡಾ.ಬಿ.ಆರ್.ಅಂಬೇಡ್ಕರ್, ಕಿತ್ತೂರು ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣನವರ ಪುತ್ಥಳಿ ಸ್ಥಾಪಿಸಿರುವುದು ಎಲ್ಲರಿಗೂ ಸ್ಫೂರ್ತಿ ಹಾಗೂ ಪ್ರೇರಣಾದಾಯಕವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದ ಪಶ್ಚಿಮ ದ್ವಾರದ ಮುಂಭಾಗದ ಆವರಣದಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ವೀರರಾಣಿ ಕಿತ್ತೂರು ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಪುತ್ಥಳಿಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ (ಮಾ.28) ಅನಾವರಣಗೊಳಿಸಿ ಮಾತನಾಡಿದರು
ಬೆಳಗಾವಿ ಕರ್ನಾಟಕದ ಕಿರೀಟ. ಬೆಳಗಾವಿಯ ಕಿರೀಟ ಸುವರ್ಣಸೌಧ. ಸುವರ್ಣಸೌಧದ ಕಿರೀಟವಾಗಿ ಕಿತ್ತೂರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಡಾ. ಬಿ.ಆರ್ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿ ಅವರು ರಾರಾಜಿಸಲಿದ್ದಾರೆ ಎಂದು ಹೇಳಿದರು
ಬೆಳಗಾವಿಯು ಯಾವಾಗಲೂ ಐತಿಹಾಸಿಕ ಪ್ರಸಿದ್ಧವಾಗಿರುವ ಜಿಲ್ಲೆ. ಸ್ವಾತಂತ್ರ್ಯದ ಮೊದಲ ಕಹಳೆಯನ್ನು ಬ್ರಿಟಿಷರ ವಿರುದ್ಧ ಕಿತ್ತೂರಾಣಿ ಚೆನ್ನಮ್ಮ ಅವರು ಊದಿದರು. ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟ ಸ್ವಾತಂತ್ರ್ಯಕ್ಕಾಗಿ ಹೋರಾಟಗಳನ್ನು ಮಾಡುತ್ತಾ ನೇಣುಗಂಬಕ್ಕೆ ಶರಣಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ.
ಅದೇ ರೀತಿ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಾಂಧೀಜಿಯವರುವ ಬೆಳಗಾವಿಗೆ ಭೇಟಿ ಕೊಟ್ಟಿದ್ದು, ಡಾ.ಅಂಬೇಡ್ಕರ್ ಅವರು ಚಿಕ್ಕೋಡಿಗೆ ಭೇಟಿ ಕೊಟ್ಟಿರುವುದು ಮತ್ತು ಕರ್ನಾಟಕದಲ್ಲಿ ಅತೀ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರು ಇರುವುದು ಕೂಡಾ ಬೆಳಗಾವಿ ಜಿಲ್ಲೆಯಲ್ಲಿ. ಹೀಗೇ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಬೆಳಗಾವಿ ಜಿಲ್ಲೆಯು ತನ್ನದೇ ಆದಂತಹ ಮಹತ್ವದ ಪಾತ್ರ ವನ್ನು ಹೊಂದಿದೆ.
ಇಂತಹ ಪರಂಪರೆ ಇರುವಂತಹ ಜಿಲ್ಲೆಯ ಜನರಿಗೆ ಸದಾ ಸ್ಪೂರ್ತಿಯಾಗಿ ನಿಲ್ಲಲು ಈ ಪ್ರತಿಮೆಗಳನ್ನು ಇಲ್ಲಿ ಸ್ಥಾಪನೆ ಮಾಡಲಾಗಿದೆ.
ಸುವರ್ಣಸೌಧದ ಈ ಶಕ್ತಿ ಕೇಂದ್ರದ ಮುಂದೆ ಇರುವಂತದ್ದು ಎಲ್ಲ ಮಹನೀಯರ ಹೋರಾಟ, ತ್ಯಾಗ, ಬಲಿದಾನ, ಅದರ ಜೊತೆಗೆ ಆಧ್ಯಾತ್ಮಿಕ ಚಿಂತನೆ ಎಲ್ಲವೂ ಕೂಡಾ ವಿಧಾನಸೌಧದ ಒಳಗಡೆ ತಮ್ಮ ಪ್ರಭಾವವನ್ನು ಬೀರಿ ಬರುವಂತ ದಿನಗಳಲ್ಲಿ ರಾಜ್ಯ ಕಲ್ಯಾಣ ರಾಜ್ಯವಾಗಲಿ. ಎಲ್ಲರ ದೃಷ್ಟಿಯಿಂದ ಸುಖ ಶಾಂತಿ ನೆಮ್ಮದಿ, ರಾಜ್ಯಕ್ಕೆ ನೆಮ್ಮದಿಯ ಮತ್ತು ಅಭಿವೃದ್ಧಿ ರಾಜ್ಯವಾಗಲಿ ಎಂದು ಪ್ರೇರಣೆದಾಯಕವಾದ ಈ ಪ್ರತಿಮೆಗಳನ್ನು ಸರಕಾರ ಸ್ಥಾಪಿಸಿದೆ ಎಂದರು.
ಕಿತ್ತೂರು ಕರ್ನಾಟಕ ಭಾಗದ ಕೃಷಿ, ನೀರಾವರಿ ಹಾಗೂ ಕೃಷಿ ಆಧಾರಿತ ಉದ್ಯಮಗಳಿಗೆ, ಸಕ್ಕರೆ ಕಾರ್ಖಾನೆಗಳಿಗೆ, ಇತರ ಉದ್ಯೋಗಗಳಿಗೆ, ವಾಣಿಜ್ಯ ವ್ಯವಹಾರಗಳಿಗೆ, ಶೈಕ್ಷಣಿಕ ಕೇಂದ್ರಗಳಿಗೆ, ಅತ್ಯಂತ ಹೆಸರುವಾಸಿಯಾಗಿದೆ. ಇಂತಹ ಸಮೃದ್ಧವಾದಂತಹ ನಾಡನ್ನು ಯೋಜನೆಗಳ ಮೂಲಕ ಇನ್ನಷ್ಟು ಅಭಿವೃದ್ಧಿಯನ್ನು ಮಾಡಲು ಬೃಹತ್ ಯೋಜನೆಗಳ ಮುಖಾಂತರ ನಿರಂತರವಾಗಿ ಅಭಿವೃದ್ಧಿಯಾಗಲಿ ಎಂದು ಹತ್ತು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ ಎಂದು ಮುಖ್ಯಮಂತ್ರಿ ಬೊಮ್ನಾಯಿ ಹೇಳಿದರು.
ಇದೇ ಸುವರ್ಣಸೌಧ ಅಧಿವೇಶನ ನಡೆಯುವ ವೇಳೆ ಐದೂವರೆ ಸಾವಿರ ಕೋಟಿಗಿಂತ ಹೆಚ್ಚು ನೀರಾವರಿ ಯೋಜನೆ ಗಳಿಗೆ ಅನುಮೋದನೆಯನ್ನು ನೀಡಲಾಗಿದೆ.
ಅವುಗಳಿಗೆಲ್ಲವೂ ಸಹ ಚಾಲನೆಯನ್ನು ಕೊಟ್ಟಿದ್ದು, ಅದೇ ರೀತಿ ಈ ಬಾರಿ ಬಜೆಟ್ ನಲ್ಲಿ ಕಿತ್ತೂರು ಕರ್ನಾಟಕದ ಅಭಿವೃದ್ಧಿ ಪ್ರಾಧಿಕಾರವನ್ನು, ಮತ್ತು ಅಭಿವೃದ್ಧಿ ಮಂಡಳಿಯನ್ನು ಮಾಡಬೇಕೆಂದು ತೀರ್ಮಾನಗಳನ್ನು ಮಾಡಿದ್ದೇವೆ. ಈ ಅಭಿವೃದ್ಧಿ ಮಂಡಳಿ ಈ ಭಾಗದ ಜನರಿಗೆ ಬೇಕಾಗಿರುವಂತಹ ಬೃಹತ್ ಯೋಜನೆಗಳು ಮತ್ತು ವಿಶೇಷವಾಗಿರುವಂತಹ ಅನುದಾನ ಮತ್ತು ಕಾರ್ಯನೀತಿಯನ್ನು ರೂಪಿಸಲು ಈ ಮಂಡಳಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಕಿತ್ತೂರು ಕರ್ನಾಟಕ ಎಂದು ಹೆಸರಿಡುವ ಭಾಗ್ಯ ನನಗೆ ಸಿಕ್ಕಿದ್ದು ಮತ್ತು ಅದರ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸುವ ಭಾಗ್ಯವು ಕೂಡ ಸಿಕ್ಕಿದೆ. ಇವತ್ತು ಕಿತ್ತೂರು ರಾಣಿ ಚೆನ್ನಮ್ಮ ಸಂಗೊಳ್ಳಿ ರಾಯಣ್ಣ ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ಮೂರ್ತಿ ಸ್ಥಾಪಿಸಲು ಅವಕಾಶ ಸಿಕ್ಕಿದ್ದು ನನಗೆ ಹೆಮ್ಮೆಯ ವಿಷಯವಾಗಿದೆ.
ಮೂರ್ತಿಗಳ ಸ್ಥಾಪನೆಯಾಗಲು ಕಾರಣರಾದ ಇಲಾಖೆಯವರಿಗೆ ಮತ್ತು ಸಚಿವರಾದ ಸಿ.ಸಿ.ಪಾಟೀಲ್ ಅವರಿಗೆ ಮತ್ತು ತಾಂತ್ರಿಕ ಹಿರಿಯ ಅಧಿಕಾರಿಗಳಿಗೆ ವಿಶೇಷವಾದ ಧನ್ಯವಾದಗಳು ತಿಳಿಸಿದರು.
ಮಹಾತ್ಮಾ ಗಾಂಧೀಜಿಯವರ ಪ್ರತಿಮೆ ದೊಡ್ಡದಿರುವ ಕಾರಣಕ್ಕೆ ಅನಾವರಣ ತಡವಾಗಿದ್ದು, ಇನ್ನೂ ಎರಡು ಮೂರು ತಿಂಗಳಲ್ಲಿ ಸ್ಥಾಪನೆ ಆಗಲಿದೆ ಎಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಇದೇ ಸಂದರ್ಭದಲ್ಲಿ ವಿಧಾನಸಭೆ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾತನಾಡಿ, ಅತೀ ಕಡಿಮೆ ಅವಧಿಯಲ್ಲಿ ಯಶಸ್ವಿಯಾಗಿ ಈ ಮೂರು ಮಹಾನ್ ವ್ಯಕ್ತಿಗಳ ಮೂರ್ತಿ ಪ್ರತಿಷ್ಠಾಪನೆ ಮಾಡಲು ಕಾರಣರಾದ ಲೋಕೋಪಯೋಗಿ ಇಲಾಖೆ ಸಚಿವರಾದ ಸಿಸಿ ಪಾಟೀಲ್ ಅವರಿಗೆ ಧನ್ಯವಾದಗಳನ್ನು ತಿಳಿಸಿದರು.
ಸುವರ್ಣ ಸೌಧದ ಇತಿಹಾಸದಲ್ಲಿ ಇವತ್ತು ಸುವರ್ಣ ಅಕ್ಷರದಲ್ಲಿ ಬರೆದಿಡುವಂತಹ ಮಹತ್ವದ ದಿನ. ನಮ್ಮ ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಭಾಗದ ಜನರ ಅಪೇಕ್ಷಗಳನ್ನು ಈಡೇರಿಸುವ ಹಿನ್ನೆಲೆಯಲ್ಲಿ ಸರ್ಕಾರ ಇಲ್ಲಿ ಸುವರ್ಣ ಸೌಧವನ್ನು ಸ್ಥಾಪನೆ ಮಾಡಿತು ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ