ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿದ್ಯಾರ್ಥಿಗಳಿಗೆ ಅಸಾಧ್ಯ ಎನ್ನುವುದು ಯಾವುದು ಇಲ್ಲ. ಮನೋಬಲದಿಂದ ತಮ್ಮ ಕನಸುಗಳನ್ನು ಸಾಧಿಸಿಕೊಳ್ಳಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಬಿಜಿಎಸ್ ಸಂಸ್ಥಾಪಕರ ದಿನಾಚರಣೆ ಹಾಗೂ ಬಿಜಿಎಸ್ ಜಿಮ್ಸ್ ಗ್ರಂಥಾಲಯದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ತಾರ್ಕಿಕ ಚಿಂತನೆಯೇ ವಿದ್ಯಾರ್ಥಿಗಳ ಯಶಸ್ಸಿನ ಮೆಟ್ಟಿಲು. ಒಮ್ಮೆ ವಿದ್ಯಾರ್ಥಿಯಾದರೆ ಜೀವನದಲ್ಲಿ ಎಂದೆಂದಿಗೂ ವಿದ್ಯಾರ್ಥಿಯೇ. ಶಿಕ್ಷಣದಲ್ಲಿ ಮೊದಲು ಪಾಠ ನಂತರ ಪರೀಕ್ಷೆ, ಆದರೆ ಬದುಕಿನಲ್ಲಿ ಮೊದಲು ಪಾಠ , ನಂತರ ಪರೀಕ್ಷೆ. ತಮ್ಮ ಗುರಿಗಳನ್ನು ಸಾಧಿಸಲು ಶ್ರಮಿಸಬೇಕು ಎಂದರು.
ಯುವಜನರು ಜಾಗೂರಾಗಿರಬೇಕು :
ಇಂದಿನ ಕಾರ್ಯಕ್ರಮ ನೋಡಿದ ಮೇಲೆ ನನ್ನ ಕಾಲೇಜು ಜೀವನ ನೆನಪಾಯಿತು. ಕಾಲೇಜು ದಿನಗಳು ಎಲ್ಲ ವಿದ್ಯಾರ್ಥಿಗಳ ಸುಂದರ ದಿನಗಳು. ನೀವು ಶಕ್ತಿ, ಗುರಿ, ಕನಸು ಹಾಗೂ ಗುರಿಯನ್ನು ಸಾಧಿಸುವ ಛಲವನ್ನು ಹೊಂದಿರುವ ಸುರ್ವಣ ಸಮಯವಾಗಿದ್ದು, ಯುವಜನರು ಬಹಳ ಜವಾಬ್ದಾರಿಯಿಂದ , ಜಾಗೂರಾಗಿರಬೇಕು. ವಿದ್ಯಾರ್ಥಿಗಳು ಇಂದು ಕಾಣುವ ಕನಸು ನಾಳೆ ನನಸಾಗುತ್ತದೆ ಎಂದರು.
ಬಿಜಿಎಸ್ ನಿಂದ ಕಲಿತ ಸಂಸ್ಕಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ :
ಬಾಲಗಂಗಾಧರ ನಾಥ ಸ್ವಾಮಿಜಿ ಶಿಕ್ಷಣ ಸಂಸ್ಥೆಯಲ್ಲಿ ಇರುವುದು ನಿಮ್ಮ ಪುಣ್ಯ. ಈ ಸಂಸ್ಥೆಯಿಂದ ಸಂಸ್ಕೃತಿಯೂ ಸಿಕ್ಕುತ್ತದೆ. ನೀವು ಯಾವುದೇ ಹುದ್ದೆಯಲ್ಲಿ ಇದ್ದರೂ ಈ ಸಂಸ್ಥೆಯನ್ನು ಯಾವತ್ತೂ ಮರೆಯಬಾರದು.ಇಲ್ಲಿಯ ಸಂಸ್ಕಾರವನ್ನು ಸದಾಕಾಲ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಂಸ್ಥೆಯನ್ನು ಗೌರವ ನೀಡಬೇಕು ಎಂದರು.
ವಿದ್ಯೆ ವಿನಯ ಮುಖ್ಯ :
ಎಷ್ಟೇ ವಿದ್ಯೆಯಿದ್ದರೂ ವಿನಯ ಬಹಳ ಮುಖ್ಯ. ಈ ಗುಣವನ್ನು ಬಾಲಗಂಗಾಧರ ನಾಥ ಸ್ವಾಮೀಜಿಗಳು ಕಲಿಸಿಕೊಟ್ಟಿದ್ದಾರೆ. ವಿದ್ಯಾಸಂಸ್ಥೆಗಳು ಸರಸ್ವತಿಯ ವಾಹನ. ಪರಮಹಂಸ ಇದ್ದ ಹಾಗೆ ಅದು ಅತಿ ಎತ್ತರಕ್ಕೆ ಹಾರುವ ಪಕ್ಷಿ. ಅದು ಪವಿತ್ರವಾದ ಪಕ್ಷಿ ಆ ಮಟ್ಟದ ಎತ್ತರಕ್ಕೆ ವಿದ್ಯಾರ್ಥಿಗಳು ಬೆಳೆಯಬೇಕು. ವಿದ್ಯಾರ್ಥಿಗಳು ಸಮಾಜಕ್ಕೆ , ಕುಟುಂಬಕ್ಕೆ, ವಿದ್ಯೆ ಕಲಿತ ಸಂಸ್ಥೆಗೆ ಉತ್ತಮ ಕೊಡುಗೆಯನ್ನು ನೀಡಬೇಕು. ಎಂದು ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿಗಳು ಕಿವಿಮಾತು ತಿಳಿಸಿದರು.
ಗ್ರಾಮೀಣ ಮಕ್ಕಳಿಗೆ ಶಿಕ್ಷಣ:
ಬಾಲಗಂಗಾಧರ ನಾಥ ಸ್ವಾಮಿಜಿ 1973 ರಲ್ಲಿ ಆದಿಚುಂಚನಗಿರಿ ಸಂಸ್ಥೆ ಆರಂಭಿಸಿ ,ಈ ಭಾಗದಲ್ಲಿ ಶಾಲೆ ಕಾಲೇಜು ತೆರೆದು ಶಿಕ್ಷಣ ಸೇವೆ ಮಾಡಿದ್ದಾರೆ. ಗ್ರಾಮೀಣ ಮಕ್ಕಳಿಗೆ ವಿದ್ಯೆ ನೀಡುವ ಮೂಲಕ ಶಿಕ್ಷಣ ಕ್ರಾಂತಿಯನ್ನು ಮಾಡಿದ್ದಾರೆ. ಸಂಸ್ಥೆಯನ್ನು ಕಟ್ಟುವಾಗ ಸಾಕಷ್ಟು ಸವಾಲು ಅಡಚಣೆ ಬಂದರೂ ಸ್ವಾಮೀಜಿ ಜಗ್ಗಲಿಲ್ಲ ಎಂದರು.
ಜೀವನಕ್ಕೆ ಆಧ್ಯಾತ್ಮ ಹಾಗೂ ವಿಜ್ಞಾನ ಮುಖ್ಯ
ನಿರ್ಮಲಾನಂದನಾಥ ಸ್ವಾಮೀಜಿ ದೊಡ್ಡ ಗುರುಗಳ ಪರಂಪರೆ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಅವರು ಕೇವಲ ಆಧ್ಯಾತ್ಮ ಬೋಧನೆ ಮಾಡದೇ ವಿಜ್ಞಾನವನ್ನೂ ಬೋಧಿಸುತ್ತಾರೆ. ವಿಜ್ಞಾನ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಇವೆರಡರ ಸಂಗಮವೇ ನಿರ್ಮಲಾನಂದನಾಥ ಸ್ವಾಮೀಜಿ . ಸುಧಾರಿತ ಜೀವನಕ್ಕಾಗಿ ಆಧ್ಯಾತ್ಮ ಹಾಗೂ ವಿಜ್ಞಾನ ಬಹಳ ಮುಖ್ಯ ಎಂದರು.
ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ. ನಿರ್ಮಲಾನಂದನಾಥ ಸ್ವಾಮೀಜಿ, ಸಚಿವರಾದ ಆರ್.ಅಶೋಕ್, ಎಸ್.ಟಿ. ಸೋಮಶೇಖರ್, ಚಲನಚಿತ್ರ ನಟಿ ರಮ್ಯಾ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಿಎಂ ಬೊಮ್ಮಾಯಿ ಹೇಳಿಕೆಗೆ ಮಹಾರಾಷ್ಟ್ರ ಡಿಸಿಎಂ, ಅಜಿತ್ ಪವಾರ್ ಹೇಳಿದ್ದೇನು?
https://pragati.taskdun.com/what-did-maharashtra-dcm-ajit-pawar-say-about-cm-bommais-statement/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ