Latest

ಬಜೆಟ್ ಘೋಷಣೆಗಳಿಗೆ ಏಪ್ರಿಲ್ 30ರೊಳಗೆ ಕಾರ್ಯಾದೇಶ ನೀಡಲು ಸೂಚನೆ

ಪ್ರಗತಿವಾಹಿನಿ ಸುದ್ದಿ; ಹಾವೇರಿ: 2022-23ರ ಆಯವ್ಯಯದಲ್ಲಿ ಘೋಷಿಸಲಾಗಿರುವ ಯೋಜನೆಗಳ ಶೀಘ್ರದಲ್ಲಿ ಅನುಷ್ಠಾನಕ್ಕಾಗಿ ಏಪ್ರಿಲ್ 30 ರೊಳಗೆ ಕಾರ್ಯಾದೇಶ ಗಳನ್ನು ನೀಡಬೇಕೆಂದು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಂದು ಸವಣೂರಿನ ಹೆಸ್ಕಾಂ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,  2022-23ರ ಆಯವ್ಯಯದ ಯೋಜನೆಗಳು ಶೀಘ್ರ ಅನುಷ್ಠಾನಕ್ಕಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಬಜೆಟ್ ಅನುಷ್ಠಾನ ಸಮಿತಿಯನ್ನು ರಚಿಸಲಾಗಿದೆ. ಪ್ರತಿ ತಿಂಗಳು ಯೋಜನೆಗಳ ಅನುಷ್ಟಾನದ ಪ್ರಗತಿ ಪರಿಶೀಲನೆ ಖುದ್ದು ಮುಖ್ಯಮಂತ್ರಿಗಳೇ ಮಾಡುವುದಾಗಿ ತಿಳಿಸಿದರು.

ಸರ್ವಸ್ಪರ್ಶಿ, ಸರ್ವವ್ಯಾಪಿ ಬಜೆಟ್ :
2022-23ರ ಆಯವ್ಯಯವನ್ನು ವ್ಯಾಪಾರಸ್ಥರು, ಉದ್ಯಮಿಗಳು,ಕೂಲಿಕಾರರು, ಮಹಿಳೆಯರು ಸೇರಿದಂತೆ ಸಮಾಜದ ಎಲ್ಲ ವರ್ಗದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸರ್ವಸ್ಪರ್ಶಿ, ಸರ್ವವ್ಯಾಪಿ ಬಜೆಟ್ ಆಗಿದ್ದು, ಶಿಕ್ಷಣ,ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಪೌಷ್ಠಿಕತೆ, ನಿರ್ಲಕ್ಷ್ಯಕ್ಕೊಳಗಾಗಿದ್ದ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಮತ್ತು ರಾಜ್ಯದ ಆರ್ಥಿಕತೆಯ ಬೆಳವಣಿಗೆಗೆ ಪೂರಕವಾದ ರಸ್ತೆ, ರೈಲು, ಬಂದರು, ವಿಮಾನ ನಿಲ್ದಾಣ ಮತ್ತು ಕೈಗಾರಿಕೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಸಾಮಾಜಿಕ ವಲಯದಲ್ಲಿ ವಿಶೇಷ ಕಾರ್ಯಕ್ರಮದ ಮೂಲಕ ಕರ್ನಾಟಕಕ್ಕೆ ಹೊಸ ದಿಕ್ಸೂಚಿಯನ್ನು ನೀಡಲಾಗಿದೆ. ನವಕರ್ನಾಟಕದಿಂದ ನವಭಾರತ ನಿರ್ಮಾಣ ಎನ್ನುವ ಧ್ಯೇಯದೊಂದಿಗೆ ಬಜೆಟ್ ಮಂಡನೆ ಮಾಡಲಾಗಿದೆ ಎಂದು ತಿಳಿಸಿದರು.

ಉತ್ತರ ಕರ್ನಾಟಕದ ಅಭಿವೃದ್ಧಿ :
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕೃಷಿ, ನೀರಾವರಿಕೈಗಾರಿಕೆ. ಹಾವೇರಿ ಜಿಲ್ಲೆಗೆ ಕೈಗಾರಿಕಾ ಟೌನ್ ಶಿಪ್, ಮೆಗಾ ಡೈರಿ, ಹಾಲು ಒಕ್ಕೂಟ ಏಪ್ರಿಲ್ 1 ರಿಂದ ಪ್ರಾರಂಭ, ಜಿಲ್ಲೆಯ ಎಲ್ಲ ತಾಲ್ಲೂಕಿನಲ್ಲಿ ಆಕಳು ಕೊಡುವ ವಿಶೇಷ ಕಾರ್ಯಕ್ರಮ, ಬ್ಯಾಡಗಿಯಲ್ಲಿ ಮೆಣಸಿನಕಾಯಿ ಸಂಸ್ಕರಣಾ ಘಟಕ, ಹಿರೇಕೆರೂರಿನಲ್ಲಿ ಗೋವಿನ ಜೋಳ ಸಂಸ್ಕರಣಾ ಘಟಕ, ರಾಣೇಬೆನ್ನೂರಿನಲ್ಲಿ ರೇಷ್ಮೆ ಮಾರುಕಟ್ಟೆ, ಹಾನಗಲ್ ನಲ್ಲಿ ಮಾವು ಸಂಸ್ಕರಣಾ ಘಟಕ ಮಂಜೂರು ಮಾಡಲಾಗಿದೆ. ಶಿಗ್ಗಾಂವಿಯಲ್ಲಿ ಜಿಟಿಟಿಸಿ ಹಾಗೂ ಸವಣೂರಿನಲ್ಲಿ ಆಯುರ್ವೇದ ಕಾಲೇಜು, ಹೀಗೆ ಎಲ್ಲ ರಂಗಗಳಲ್ಲಿಯೂ ಸಮಗ್ರ ಅಭಿವೃದ್ಧಿಯನ್ನು ಸಾಧಿಸುವ ದೂರದೃಷ್ಟಿಯ ಸಂಕಲ್ಪವನ್ನು ಮಾಡಲಾಗಿದೆ ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button