ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ರಾಜ್ಯಕ್ಕೆ ತೆರಿಗೆ ಇಲಾಖೆ ಅಧಿಕಾರಿಗಳನ್ನು ಕಳುಹಿಸಿ ಐಟಿ, ಇಡಿಯಿಂದ ಕಾಂಗ್ರೆಸ್ ನವರನ್ನು ಟಾರ್ಗೆಟ್ ಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಚುನಾವಣಾ ಆಯೋಗವೇ ಐಟಿ ಅಧಿಕಾರಿಗಳನ್ನು ನೇಮಕ ಮಾಡಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಐಟಿ ಅಧಿಕಾರಿಗಳನ್ನು ನಾವು ನೇಮಕ ಮಾಡಿಲ್ಲ. ಚುನಾವಣಾ ಆಯೋಗವೇ ಎಲ್ಲಾ ಜಿಲ್ಲೆಗಳಿಗೂ ಐಟಿ ಅಧಿಕಾರಿಗಳನ್ನು ನೇಮಕ ಮಾಡಿದೆ ಎಂದರು.
ಬ್ಲ್ಯಾಕ್ ಮನಿ ಇಲ್ಲದಿದ್ದರೆ ಕಾಂಗ್ರೆಸ್ ನವರಿಗೆ ಭಯ ಯಾಕೆ? ಕಾಂಗ್ರೆಸ್ ನವರು ಚುನಾವಣಾ ಭಯದಿಂದ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಅನಗತ್ಯ ಗೊಂದಲ ಸೃಷ್ಟಿಸುವ ಉದ್ದೇಶಕ್ಕೆ ಹೇಳಿಕೆ ಕೊಡುತ್ತಿದ್ದಾರೆ ಎಂದು ತಿಳಿಸಿದರು.
ಚುನಾವಣಾ ಆಯೋಗ, ಐಟಿ ಅಧಿಕಾರಿಗಳು ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದು, ಯಾರು ಕಳ್ಳರಿದ್ದಾರೆ, ಅವರು ಸಿಗುತ್ತಾರೆ. ಕಾಂಗ್ರೆಸ್ ನವರು ಯಾಕೆ ಭಯ ಪಡಬೇಕು. ಅವರು ಇಷ್ಟು ದಿನ ಅಕ್ರಮವಾಗಿ ಗಳಿಸಿರುವ ಕಪ್ಪು ಹಣ ಹೊರಗೆ ಬರುತ್ತದೆ ಎಂಬ ಭಯ ಇರುವ ಕಾರಣಕ್ಕೆ ಈ ರೀತಿಯ ತಂತ್ರ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಚುನಾವಣಾ ಆಯೋಗ ಎಲ್ಲ ಪಕ್ಷದವರ ಮೇಲೆ ದಾಳಿ ಮಾಡಿ ವಸ್ತುಗಳನ್ನು ವಶ ಪಡಿಸಿಕೊಳ್ಳುತ್ತಿದೆ. ನಿಷ್ಪಕ್ಷಪಾತವಾಗಿ ನಡೆಯುತ್ತಿರುವ ದಾಳಿಯನ್ನು ತಡೆಯಲು, ಅಧಿಕಾರಿಗಳ ಮೇಲೆ ಒತ್ತಡ ತರುವ ಕೆಲಸ ಮಾಡಲಾಗುತ್ತಿದೆ. ಕುಂಬಳಕಾಯಿ ಕಳ್ಳ ಎಂದರೆ ಇವರು ಬೆನ್ನು ಮುಟ್ಟಿಕೊಳ್ಳುತ್ತಿದ್ದಾರೆ. ಈಗಾಗಲೇ ಪ್ರತಿಯೊಂದು ಜಿಲ್ಲೆಗೂ ಐಟಿ ಅಧಿಕಾರಿಗಳು ಇದ್ದಾರೆ ಎಂದರು.
ಚುನಾವಣಾ ಆಯೋಗಕ್ಕೂ ಬಿಜೆಪಿ ಸೋಲುವುದಕ್ಕೂ ಸಂಬಂಧವಿಲ್ಲ. ಕಾಂಗ್ರೆಸ್ ಈ ಬಾರಿ ಸೋಲುವುದು ನಿಶ್ಚಿತ. ನಮಗೆ ಗೆಲ್ಲುವ ಆತ್ಮವಿಶ್ವಾಸವಿದೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ