Latest

ಕಾರ್ಮಿಕ ಇಲಾಖೆಯ ಹಲವು ಯೋಜನೆಗಳಿಗೆ ಸಿಎಂ ಬೊಮ್ಮಾಯಿ ಚಾಲನೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾರ್ಮಿಕರ ಕಲ್ಯಾಣ ನಮ್ಮ ಮೊದಲ ಆದ್ಯತೆ. ಕಾರ್ಮಿಕರ ಏಳಿಗೆಗೆ ಬೇಕಾಗುವ ಎಲ್ಲ ಯೊಜನೆಗಳನ್ನು ನಾವು ಜಾರಿಗೆ ತರುತ್ತೇವೆ. ಅವರ ಶ್ರಮಕ್ಕೆ ಬೆಲೆ ಕೊಡುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಂದು ಕಾರ್ಮಿಕ ಇಲಾಖೆಯ ವತಿಯಿಂದ ವಿಧಾನಸೌಧದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನೂತನ ತಂತ್ರಾಂಶ ಉದ್ಘಾಟನೆ ಹಾಗೂ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ವಿತರಣೆ ಮತ್ತು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಾಲ್ಗೊಂಡು ಮಾತನಾಡಿದರು.

Related Articles

ಕಾರ್ಮಿಕರು ಈ ದೇಶದ ಪ್ರಗತಿಯ ಚಕ್ರದ ರೂವಾರಿಗಳು. ನಾವು ಹಣ ಹೂಡಿಕೆ ಮಾಡಿ ಲೆಕ್ಕ ಹಾಕುತ್ತೇವೆ. ಆದರೆ ಕಾರ್ಮಿಕರ ಶ್ರಮವನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ. ನಿಜವಾದ ಬದಲಾವಣೆ, ಪರಿವರ್ತನೆ ತರುವವರು ಕಾರ್ಮಿಕರು. ಅಂತಹ ಕಾರ್ಮಿಕರಿಗೆ ಬದುಕಿನ ಭರವಸೆ ಕೊಡಬೇಕು. ಕಾರ್ಮಿಕನ ಬದುಕಿಗೆ ಒಂದು ಸ್ಪೂರ್ತಿಯನ್ನು ಕೊಟ್ಟಾಗ ಅವನು ಮತ್ತಷ್ಟು ಉತ್ಸಾಹದಿಂದ ಕೆಲಸ ಮಾಡುತ್ತಾನೆ. ಆತಂಕದಲ್ಲಿ ಯಾರು ನೂರಕ್ಕೆ ನೂರರಷ್ಟು ಶ್ರಮ ಕೊಡಲು ಸಾಧ್ಯವಿಲ್ಲ. ಹೀಗಾಗಿ ಅವನ ಶ್ರಮಕ್ಕೆ ಬೆಲೆ ಬರಬೇಕು ಎನ್ನುವ ದೃಷ್ಠಿಯಿಂದ ಕಾರ್ಮಿಕ ಕಟ್ಟಡ ನಿಧಿ ಕಾರ್ಯಕ್ರಮವನ್ನು ಕಾರ್ಮಿಕ ಇಲಾಖೆ ಸಚಿವರು ಮಾಡುತ್ತಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಕಾರ್ಮಿಕ ಇಲಾಖೆಯಿಂದ ನಿಧಿ ಇಡಲಾಗಿದೆ. ಆ ದುಡ್ಡು ನಮ್ಮ ಕಾರ್ಮಿಕರಿಗೆ ಅನುಕೂಲ ಆಗದಿದ್ದರೆ ಏನು ಪ್ರಯೋಜನ. ಇದನ್ನು ಮನಗಂಡು ನಮ್ಮ ಸಚಿವರಾದ ಶಿವರಾಮ್ ಹೆಬ್ಬಾರ ಅವರು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಕಾರ್ಮಿಕರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯನ್ನು ತಂದಿದ್ದೇವೆ. ನಾನು ಮುಖ್ಯಮಂತ್ರಿಯಾದ ಬಳಿಕ ಮೊದಲಿಗೆ ರೈತರ ಮಕ್ಕಳಿಗೆ ಜಾರಿಗೆ ತಂದಿದ್ದೆ. ರೈತರ ಮಕ್ಕಳು ಮತ್ತು ಕಾರ್ಮಿಕರ ಮಕ್ಕಳು ಬೇರೆಯಲ್ಲ. ಈ ದೇಶಕ್ಕೆ ಮೂರು ಜನರು ಮುಖ್ಯ. ರೈತರು, ಕಾರ್ಮಿಕರು, ಸೈನಿಕರು ಸಂತೋಷವಾಗಿದ್ದರೆ ದೇಶ ಸಮೃದ್ದವಾಗಿರುತ್ತದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Home add -Advt

ಕಾರ್ಮಿಕ ಇಲಾಖೆಯಿಂದ ಮೊಬೈಲ್ ಕ್ಲಿನಿಕ್, ವಿದ್ಯಾರ್ಥಿ ವೇತನ, ಮನೆ ನಿರ್ಮಾಣ ಕೆಲಸ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಇವತ್ತು ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ವಿತರಣೆ ಮಾಡಲಾಗುತ್ತಿದೆ. ಇದರಿಂದ ನನಗೆ ಬಹಳ ಸಂತೋಷ ಆಗಿದೆ. ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಕಟ್ಟಡ ಕಾರ್ಮಿಕರಿಗೆ ಮನೆಯ ಹತ್ತಿರದಲ್ಲಿ ಕೆಲಸ ಸಿಗುವುದಿಲ್ಲ. ಒಂದು ಊರಿನಿಂದ ಇನ್ನೊಂದು ಊರಿಗೆ ಕೆಲಸಕ್ಕೆ ಹೋಗಬೇಕಾಗುತ್ತದೆ. ಹುಬ್ಬಳ್ಳಿಯಲ್ಲಿ ಬೆಳಿಗ್ಗೆ ಬಸ್ ಸ್ಟ್ಯಾಂಡ್ ಹತ್ತಿರ ಹೋದರೆ, ಕನಿಷ್ಟ 30-40 ಸಾವಿರ ಕಾರ್ಮಿಕರು ಬರುತ್ತಾರೆ. ಅವರು ದೂರದ ಊರುಗಳಿಂದ ಬರುತ್ತಾರೆ. ಅವರಿಗೆ ಉಚಿತವಾಗಿ ಬಸ್ ಪಾಸ್ ನೀಡಲಾಗುತ್ತಿದೆ. ಇದು ಅವರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಈಗಾಗಲೇ 70 ಸಾವಿರ ಬಸ್ ಪಾಸ್ ನಿಡಿದ್ದಾರೆ. ಪ್ರತಿ ತಾಲ್ಲೂಕಿನಲ್ಲಿ 20-30 ಸಾವಿರ ಜನರಿರುತ್ತಾರೆ . ಎಲ್ಲ ಊರುಗಳಲ್ಲಿ ಕಟ್ಟಡ ಕಾರ್ಮಿಕರು ಎಷ್ಟು ಜನ ಇದ್ದಾರೆ. ಅವರಿಗೆ ಎಲ್ಲರಿಗೂ ಬಸ್ ಪಾಸ್ ಕೊಡಿಸುವ ಕೆಲಸ ಮಾಡಬೇಕು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಕಾರ್ಮಿಕರ ಬಹಳ ದಿನಗಳ ವ್ಯಾಜ್ಯಗಳ ಬಗೆಹರಿಸುವ ನಿಟ್ಟಿನಲ್ಲಿ ಅದಾಲತ್ ನ್ನು ಮಾಡುತ್ತಿದ್ದೇವೆ. ಈಗಾಗಲೇ ಕಾರ್ಮಿಕ ಇಲಾಖೆಯಿಂದ 91 ಕೋಟಿ ರೂ. 2.90 ಲಕ್ಷ ಕಾರ್ಮಿಕರಿಗೆ ನೀಡಿದ್ದಾರೆ. ಪ್ರತಿಯೊಂದು ದೊಡ್ಡ ಗ್ರಾಮದಲ್ಲಿ ಕಾರ್ಮಿಕರಿಗಾಗಿ ವಿಶ್ರಾಂತಿ ಗೃಹಗಳನ್ನು ಮಾಡುತ್ತಿದ್ದು, ಅದು ಇದೇ ವರ್ಷ ಜಾರಿಗೆ ಬರುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಈ ಸಂದರ್ಭದಲ್ಲಿ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಸೇರಿದಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಉಪಸ್ಥಿತಿದ್ದರು.

ತೀವ್ರತರ ಕಿವುಡುತನಕ್ಕೆ ಕಾಕ್ಲಿಯರ್ ಇಂಪ್ಲಾಂಟ್ ಪರಿಹಾರ

https://pragati.taskdun.com/latest/inaugural-function-cmeadvanced-vestibular-disordershearing-awarenesscochlear-implant/

Related Articles

Back to top button