Latest

ಉದ್ಯೋಗ ಸೃಷ್ಟಿಸುವ ಉದ್ಯಮಗಳಿಗೆ ಪ್ರೋತ್ಸಾಹ : ಬಸವರಾಜ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ಉದ್ಯೋಗ ಸೃಷ್ಟಿ ಮಾಡುವ ಉದ್ಯಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ದಾವಣಗೆರೆಯಲ್ಲಿ ಮಹಾತ್ಮಾಗಾಂಧಿ ನಗರ ವಿಕಾಸ ಯೋಜನೆಯ ಕಾಮಗಾರಿಗಳಿಗೆ ಇಂದು ಶಿಲ್ಯಾನ್ಯಾಸ ನೆರವೇರಿಸಿ ಮುಖ್ಯಮಂತ್ರಿಗಳು ಮಾಧ್ಯಮದವರೊಂದಿಗೆ ಮಾತನಾಡಿದರು.

ಪಿಎಲ್ ಐ ಯೋಜನೆಯಡಿ ಕೇಂದ್ರ ಸರ್ಕಾರ ಜವಳಿ ಹಾಗೂ ಆಟೋಮೊಬೈಲ್ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ನೀಡಲು ಉದ್ದೇಶಿಸಿದೆ. ಉದ್ಯೋಗ ಸೃಷ್ಟಿಸುವ ಶ್ರೇಷ್ಠ ಯೋಜನೆ ಇದಾಗಿದೆ. ಈ ನಿಟ್ಟಿನಲ್ಲಿ ಮೆಗಾ ಟೆಕ್ಸ್ಟೈಲ್ ಪಾರ್ಕ್ ಮತ್ತು ಆಟೋಮೊಬೈಲ್ ಸೆಕ್ಟರ್ ಗಳ ಕ್ಲಸ್ಟರ್ ಗಳನ್ನು ಮಾಡಲಾಗುವುದು. ರಾಜ್ಯಕ್ಕೆ ಕನಿಷ್ಟ ಮೂರು ಟೆಕ್ಸ್ಟೈಲ್ ಪಾರ್ಕ್ ಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಮಹಾತ್ಮಾಗಾಂಧಿ ನಗರ ವಿಕಾಸ ಯೋಜನೆಯಡಿ 125 ಕೋಟಿ ರೂ.ಗಳ ವೆಚ್ಚದಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಇಡೀ ರಾಜ್ಯದಲ್ಲಿ ಈ ಯೋಜನೆಯಡಿ ಒಟ್ಟು 1500 ಕೋಟಿ ರೂ.ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಯೊಂದಿಗೆ ಈ ಯೋಜನೆಯೂ ಸೇರಿ ದಾವಣಗೆರೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.

ಅಮೃತ ಗ್ರಾಮ ಯೋಜನೆಯಡಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ಪ್ರತಿಯೊಂದು ಗ್ರಾಮ ಪಂಚಾಯತಿಗೂ ಗ್ರಾಮಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ 25 ಲಕ್ಷ ರೂ.ಗಳನ್ನು ಹೆಚ್ಚುವರಿಯಾಗಿ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕದಲ್ಲಿ ರೇಷ್ಮೆ ಕೃಷಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕರ್ನಾಟಕದ ರೇಷ್ಮೆ ಬೆಳೆ ಶ್ರೇಷ್ಠ ಗುಣಮಟ್ಟದ್ದಾಗಿದ್ದು ವಿದೇಶದಿಂದ ಆಮದಾಗುವ ರೇಷ್ಮೆಯ ಗುಣಮಟ್ಟಕ್ಕೆ ಸರಿಸಮಾನವಾಗಿದೆ. ರೇಷ್ಮೆ ಬೆಳೆ ಪ್ರಮುಖವಾಗಿರುವ 8 -10 ಜಿಲ್ಲೆಗಳಲ್ಲಿ ರೇಷ್ಮೆ ಕೃಷಿಯನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಗೊಳಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಉದ್ದೇಶಿಸಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಜಿಲ್ಲಾಉಸ್ತುವಾರಿ ಹಾಗೂ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ, ಲೋಕಸಭಾ ಸದಸ್ಯ ಜಿ.ಎಂ.ಸಿದ್ಧೇಶ್ವರ, ಶಾಸಕ ಎಸ್.ಎ.ರವೀಂದ್ರನಾಥ್ ಮತ್ತಿತರು ಉಪಸ್ಥಿತರಿದ್ದರು.
ನಿಪ್ಪಾಣಿ ನಗರದಲ್ಲಿ ಶುದ್ಧ ನೀರಿನ ಘಟಕವನ್ನು ಉದ್ಘಾಟಿಸಿದ ಸಂಸದ ಅಣ್ಣಾಸಾಹೇಬ ಜೊಲ್ಲೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button