
ಪ್ರಗತಿವಾಹಿನಿ ಸುದ್ದಿ; ಚಾಮರಾಜನಗರ: ಕಾಡಿನ ಮಧ್ಯೆ ವಾಸಿಸುವ ಎಸ್ ಟಿ ಸಮುದಾಯಗಳಿಗೆ ಪ್ರಾಣಿಗಳ ಹಾವಳಿಯಿರುವುದರಿಂದ ,ಅವರಿಗೆ ಕಾಡಂಚಿನಲ್ಲಿ ಜಮೀನು ಒದಗಿಸಿ ಪುನರ್ವಸತಿಯ ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ವಿಜಯ ಸಂಕಲ್ಪ ರಥ ಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಚಾಲನೆ ನೀಡಿದರು.
ಕಾಡಂಚಿನಲ್ಲಿರುವ ಜನರಿಗಾಗಿ ಪಿಹೆಚ್ ಸಿ :
ಕಾಡಂಚಿನ ಸಮುದಾಯಗಳ ಬಗ್ಗೆ ಈ ವರ್ಷದ ಆಯವ್ಯಯದಲ್ಲಿ ವಿಶೇಷ ಗಮನ ನೀಡಲಾಗಿದೆ. ಅರಣ್ಯದಲ್ಲಿ ಬದುಕು ನಡೆಸುತ್ತಿರುವ ಜನರಿಗೆ ಜಮೀನುಗಳನ್ನು ಒದಗಿಸಲು ಕಾನೂನು ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುತ್ತಿದೆ. ಈ ಪ್ರದೇಶದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂಖ್ಯೆ ಹೆಚ್ಚಿಸುವ ಬೇಡಿಕೆ ಇದೆ. ಈ ವರ್ಷ ಹೊಸದಾಗಿ 68 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಪ್ರಾರಂಭಿಸಲು ಯೋಜನೆ ರೂಪಿಸಲಾಗಿದೆ. ಈ ಯೋಜನೆಯಡಿ ಜಿಲ್ಲೆಯ ಈ ಭಾಗದ ಕಾಡಂಚಿನಲ್ಲಿರುವ ಜನರಿಗಾಗಿ ಪಿಹೆಚ್ ಸಿ ಗಳನ್ನು ಮಂಜೂರು ಮಾಡಲಾಗುವುದು ಎಂದರು.
ಸ್ವಯಂ ಉದ್ಯೋಗ :
ಸ್ತ್ರೀಸಾಮರ್ಥ್ಯ ಯೋಜನೆಯಡಿ ಪ್ರತಿ ಗ್ರಾಮದ 2 ಸ್ತ್ರೀಶಕ್ತಿ ಸಂಘಗಳಿಗೆ 5 ಲಕ್ಷದವರೆಗೆ ಅನುದಾನ ನೀಡಿ, ಉತ್ಪಾದನೆಗಳಿಗೆ ಮಾರುಕಟ್ಟೆ ಜೋಡಣೆ ಮಾಡಲಾಗುವುದು. ಅರಣ್ಯ ಉತ್ಪನ್ನಗಳ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಅವಕಾಶವಿದೆ. ಸ್ತ್ರೀಸಾಮರ್ಥ್ಯ ಯೋಜನೆಯಡಿ ಇದೇ ತಿಂಗಳು ಆರ್ಥಿಕ ನೆರವು, ತರಬೇತಿ ನೀಡಿ ಸ್ವಯಂ ಉದ್ಯೋಗ ಕಲ್ಪಿಸಲಾಗುವುದು .. ಬೇಡರ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.ಮಹಿಳೆಯರಿಗೆ ಹಾಗೂ ಯುವಕರಿಗೆ ಸ್ವಯಂಉದ್ಯೋಗದ ಮೂಲಕ ಸ್ವಾವಲಂಬಿ ಬದುಕು ನೀಡಲಾಗುತ್ತಿದೆ.ಎಂದರು.
ದುರ್ಬಲ ವರ್ಗದವರ ಶಿಕ್ಷಣ ಮತ್ತು ಉದ್ಯೋಗಕ್ಕೆ ಆದ್ಯತೆ :
ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ, ಪ್ರಧಾನಮಂತ್ರಿ ಆವಾಸ್ ಯೋಜನೆ, ಉಜ್ವಲ ಯೋಜನೆ, ಆತ್ಮನಿರ್ಭರ ಯೋಜನೆ, ಆಯುಷ್ಮಾನ್ ಭಾರತ ಯೋಜನೆಗಳು ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ಎಸ್ ಸಿ ಎಸ್ ಟಿ ಗಳ ಮೀಸಲಾತಿಯನ್ನು ಹೆಚ್ಚಿಸಲಾಗಿದೆ. ಈ ಸಮುದಾಯಗಳಿಗೆ 75 ಯೂನಿಟ್ ಉಚಿತ ವಿದ್ಯುತ್, ಮನೆ ನಿರ್ಮಾಣ ಹಾಗೂ ಜಮೀನು ಖರೀದಿಗೆ ಧನಸಹಾಯ, ಅಂಬೇಡ್ಕರ್ ಹಾಗೂ ಕನಕದಾಸ ಹಾಸ್ಟೆಲ್ ನಿರ್ಮಾಣ, ಹೀಗೆ , ದುರ್ಬಲ ವರ್ಗದವರ ಶಿಕ್ಷಣ ಮತ್ತು ಉದ್ಯೋಗಕ್ಕೆ ಆದ್ಯತೆ ನೀಡಲಾಗುತ್ತಿದೆ. ಕೃಷಿ ಕಾರ್ಮಿಕರಾಗಿ ದುಡಿಯುವ ಹೆಣ್ಣುಮಕ್ಕಳಿಗೆ ಗೃಹಿಣಿ ಶಕ್ತಿ ಯೋಜನೆಯ ಮೂಲಕ ಪ್ರತಿ ಮಾಹೆ 1000 ರೂ.ಗಳನ್ನು ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪಾಸ್, ಪಿಯುಸಿ ಯಿಂದ ಡಿಗ್ರಿವರೆಗೆ ಉಚಿತ ಶಿಕ್ಷಣ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ರೂಪಿಸಲಾಗಿದೆ. ರೈತ ವಿಮಾ ಯೋಜನೆ , ರೈತ ವಿದ್ಯಾನಿಧಿ ಯಂತಹ ರೈತಪರ ಯೋಜನೆಗಳನ್ನು ರೂಪಿಸಲಾಗಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್ ಧ್ಯೇಯದೊಂದಿಗೆ ರಾಜ್ಯದಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದರು.
ವಿಜಯಸಂಕಲ್ಪ ಯಾತ್ರೆಯಿಂದ ಆತ್ಮವಿಶ್ವಾಸ :
ವಿಜಯಸಂಕಲ್ಪ ಯಾತ್ರೆಯನ್ನು ಮಲೆಮಹದೇಶ್ವರ ಕ್ಷೇತ್ರದಿಂದ ಭಾಜಪದ ರಾಷ್ಟ್ರೀಯ ಅಧ್ಯಕ್ಷರು ಪ್ರಾರಂಭಿಸಿದ್ದಾರೆ. ಇಲ್ಲಿಂದ ಪ್ರಾರಂಭವಾಗಿರುವ ವಿಜಯಸಂಕಲ್ಪ ಯಾತ್ರೆ ದಾವಣಗೆರೆ ಜಿಲ್ಲೆಯ ಸಂಪೂರ್ಣಗೊಳ್ಳಲಿದೆ. ಜನಸಂಕಲ್ಪ ಯಾತ್ರೆಯಿಂದ ಹೆಚ್ಚಿನ ಪ್ರೇರಣೆ ದೊರೆತಿದ್ದು, ಪಕ್ಷದ ಆತ್ಮವಿಶ್ವಾಸ ಹೆಚ್ಚಿದೆ. ಎಸ್ ಟಿ ಸಮುದಾಯದವರನ್ನು ಗೌರವಾನ್ವಿತ ರಾಷ್ಟ್ರಪತಿಗಳಾಗಿರುವ ಮೂಲಕ ಈ ಜನಾಂಗದವರಲ್ಲಿ ಆತ್ಮವಿಶ್ವಾಸ ಮೂಡಿದೆ. ಕೇಂದ್ರ ಮತ್ತು ರಾಜ್ಯದ ಡಬಲ್ ಇಂಜಿನ್ ಸರ್ಕಾರದಿಂದ ಜನಕಲ್ಯಾಣ ಕಾರ್ಯಕ್ರಮಗಳನ್ನು ಸಾಕಾರಗೊಳಿಸಲಾಗುತ್ತಿದೆ ಎಂದರು.ಕರ್ನಾಟಕದಲ್ಲಿ ಭಾಜಪ ಸ್ಪಷ್ಟ ಬಹುಮತ ಪಡೆಯಲಿದೆ. ಭಾಜಪ ದಿಗ್ವಿಜಯ ಸಾಧಿಸಲಿದೆ ಎಂಬ ವಿಶ್ವಾಸವಿದೆ.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಹಾಗೂ ಮತ್ತಿತರರು ಹಾಜರಿದ್ದರು.
https://pragati.taskdun.com/d-k-shivakumarhasanapressmeet/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ