ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ನಾಳೆ ಸಂಸದೀಯ ಮಂಡಳಿ ಸಭೆ ಜರುಗಲಿದ್ದು, ದೆಹಲಿಗೆ ತೆರಳುತ್ತಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಈಗಾಗಲೇ ಕ್ಷೇತ್ರ ಹಾಗೂ ಜಿಲ್ಲಾ ಮಟ್ಟದಲ್ಲಿ ಅಭಿಪ್ರಾಯ ಸಂಗ್ರಹವಾಗಿದೆ. ರಾಜ್ಯ ಮಟ್ಟದಲ್ಲಿ ಚರ್ಚೆ ನಡೆದಿದೆ. ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆ. ಪ್ರತಿ ಕ್ಷೇತ್ರಕ್ಕೆ ಎರಡು-ಮೂರು ಜನರ ಹೆಸರು ಶಾರ್ಟ್ ಲಿಸ್ಟ್ ಮಾಡಲಾಗಿದ್ದು ಅಂತಿಮವಾಗಿ ಸಂಸದೀಯ ಮಂಡಳಿ ಸಭೆಯಲ್ಲಿ ತೀರ್ಮಾನವಾಗಲಿದೆ ಎಂದರು.
ವಿಶ್ಲೇಷಣೆ ಮಾಡುವುದಿಲ್ಲ
ನಾಗರಾಜ್ ಛಬ್ಬಿ ಇದುವರೆಗೆ ನನ್ನ ಸಂಪರ್ಕ ಮಾಡಿಲ್ಲ. ಆ ಬಗ್ಗೆ ನನಗೆನೂ ಗೊತ್ತಿಲ್ಲ. ಆಕಾಂಕ್ಷಿ ಮಧ್ಯೆ ಆಣೆ-ಪ್ರಮಾಣ ಮಾಡಿಸುತ್ತಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಆಣೆ ಪ್ರಮಾಣ ಹೊಸದೇನಲ್ಲ. ಆಯಾ ಕ್ಷೇತ್ರದ ಹಂತದಲ್ಲಿ ಆಣೆ ಪ್ರಮಾಣ ನಡೆಯುತ್ತದೆ. ಅದರ ಬಗ್ಗೆ ನಾನು ವಿಶ್ಲೇಷಣೆ ಮಾಡುವುದಿಲ್ಲ ಎಂದರು.
ವರುಣಾ ಕ್ಷೇತ್ರದ ಬಗ್ಗೆ ಚರ್ಚೆ
ಸಿದ್ದರಾಮಯ್ಯ ವಿರುದ್ದ ಸೋಮಣ್ಣ ಸ್ಪರ್ಧಿಸುವ ಬಗ್ಗೆ ಮಾತನಾಡಿ, ಈ ಬಗ್ಗೆ ಯಾವುದೇ ವಿಚಾರ ತೀರ್ಮಾನ ಆಗಿಲ್ಲ, ನಾಳೆ ಎಲ್ಲ ಕ್ಷೇತ್ರದ ಜೊತೆ ವರುಣಾ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದರು.
ನಟರು ರಾಜಕೀಯ ಪಕ್ಷಕ್ಕೆ ಬೆಂಬಲ ನೀಡುವುದು ಹೊಸದೇನಲ್ಲ
ಮುಖ್ಯಮಂತ್ರಿಗಳಿಗೆ ನಟ ಸುದೀಪ್ ಬೆಂಬಲ ನೀಡಿರುವ ಕುರಿತು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಮಾಡಿರುವ ಟೀಕೆಗೆ ತಿರುಗೇಟು ನೀಡಿದ ಮುಖ್ಯಮಂತ್ರಿಗಳು, ಕುಮಾರಸ್ವಾಮಿ ಹಿಂದೆ ಯಾವ ಸ್ಟಾರ್ ನಟರನ್ನು ನಿಲ್ಲಿಸಿರಲಿಲ್ವಾ..? 1996 ರಾಮನಗರ ಉಪಚುನಾವಣೆಯಲ್ಲಿ ಅಂಬರೀಶ್ ಕರೆದುಕೊಂಡು ಬಂದು ಪ್ರಚಾರ ಮಾಡಿದ್ದು ಮರೆತಿದ್ದಾರಾ? ನಟರು ರಾಜಕೀಯ ಪಕ್ಷಕ್ಕೆ ಬೆಂಬಲ ನೀಡುವುದು ಹೊಸದೇನಲ್ಲ. ಎಲ್ಲ ಪಕ್ಷಗಳಿಗೂ ಬೆಂಬಲ ಕೊಟ್ಟಿದ್ದಾರೆ. ಇಡೀ ದೇಶದಲ್ಲಿ ಇದೆ, ಹಾಗೆ ಕರ್ನಾಟಕದಲ್ಲೂ ಇದೆ . ನಮ್ಮ ಜೊತೆಗೆ ಸೂಪರ್ ಸ್ಟಾರ್ ಬಂದರೆ ಇವರಿಗೆ ಯಾಕೆ ತಳವಳ. ಅವರಿಗೆ ಆತಂಕ ಇದೆ ಹಾಗಾಗಿ ಟೀಕೆ ಮಾಡುತ್ತಿದ್ದಾರೆ ಎಂದರು.
ಗೋಡೆ ಮೇಲಿನ ಬರಹದ ರೀತಿ ಅವರಿಗೆ ಸೋಲು ಕಾಣುತ್ತಿದೆ. ನಮಗೆ ಗೆಲುವಿನ ವಿಶ್ವಾಸ ಇದೆ, ಅವರಿಗೆ ಸೋಲಿನ ವಿಶ್ವಾಸ ಇದೆ ಎಂದು ಟಾಂಗ್ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ