Latest

ಕರ್ನಾಟಕದ ಪ್ರಗತಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಅದು ನಿರಂತರ: ಸಿಎಂ ಬಸವರಾಜ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕರ್ನಾಟಕದ ಪ್ರಗತಿಯನ್ನು ನಿಲ್ಲಿಸಲು ಸಾಧ್ಯವಿಲ್ಲ. ಏನೇ ಅಭಿಯಾನ ಮಾಡಿದರೂ ಕರ್ನಾಟಕದ ಪ್ರಗತಿ ನಿರಂತರವಾಗಿ ಮುಂದುವರೆಯುತ್ತದೆ. ಮುಂದುವರೆಯುವ ರೀತಿಯಲ್ಲಿ ಖಂಡಿತವಾಗಿಯೂ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿವಿಧ ರಾಜ್ಯಗಳ ಸಚಿವರು ಬೆಂಗಳೂರಿನ ಮೂಲಭೂತ ಸೌಕರ್ಯಗಳ ಬಗ್ಗೆ ಟ್ವೀಟ್ ಮಾಡಿರುವ ಬಗ್ಗೆ ಅವರು ಇಂದು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ಹೋಲಿಕೆ ಸಲ್ಲದು

ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳು ಬಹಳಷ್ಟು ಹತಾಶವಾಗಿವೆ. ಕರ್ನಾಟಕ ಮತ್ತು ಬೆಂಗಳೂರನ್ನು ಯಾವುದೇ ರಾಜ್ಯದೊಂದಿಗೆ ಹೋಲಿಸಲು ಸಾಧ್ಯವಿಲ್ಲ. ಈಗ ಅಭಿವೃದ್ಧಿಯ ದಿಸೆಯಲ್ಲಿ ಆ ರಾಜ್ಯಗಳು ಪ್ರಯತ್ನ ಮಾಡುತ್ತಿದ್ದಾರೆ. ಅದು ಉತ್ತಮ ಅಭಿರುಚಿಯನ್ನು ಹೊಂದಿಲ್ಲ. ನನ್ನ ರಾಜ್ಯದ ಬಗ್ಗೆ ಉತ್ತಮವಾಗಿರುವುದನ್ನು ಹೇಳಿ ಹೂಡಿಕೆಗೆ ಆಹ್ವಾನ ನೀಡಬೇಕು. ಇನ್ನೊಂದು ರಾಜ್ಯವನ್ನು ತೆಗಳಿ ಆಹ್ವಾನ ನೀಡುವ ಅವಶ್ಯಕತೆ ಇಲ್ಲ. ತಮಿಳುನಾಡು ಹಾಗೂ ತೆಲಂಗಾಣದಲ್ಲಿದ್ದವರನ್ನು ನಾವು ಇಲ್ಲಿ ಬನ್ನಿ ಎಂದು ಹೇಳಿಲ್ಲ. ಅದೇ ನಮ್ಮ ಶಕ್ತಿ. ಅವರು ಪಕ್ಕದ ರಾಜ್ಯದಲ್ಲಿರುವವರನ್ನು ಬನ್ನಿ ಎಂದು ಕರೆದರೆ, ಅಲ್ಲಿಗೆ ಹೂಡಿಕೆ ಮಾಡಲು ಯಾರೂ ಬರುತ್ತಿಲ್ಲ ಎಂದರ್ಥ ಅದು ಅವರ ಅಶಕ್ತತೆ. ಅಂತರರಾಷ್ಟ್ರೀಯ ಜನರು ಇಲ್ಲಿಗೆ ಹೂಡಿಕೆ ಮಾಡಲು ಬರುತ್ತಿದ್ದಾರೆ. ಕರ್ನಾಟಕಕ್ಕೆ ನಿರಂತರವಾಗಿ ಹೂಡಿಕೆಗಳು ಬರುತ್ತಿವೆ. ಕಳೆದ ಮೂರು ತ್ರೈಮಾಸಿಕದಲ್ಲಿ ಅತಿ ಹೆಚ್ಚು ವಿದೇಶಿ ನೇರ ಬಂಡವಾಳ ಬಂದಿರುವುದು ಕರ್ನಾಟಕಕ್ಕೆ. ಸ್ಟಾರ್ಟ್ ಅಪ್ ನಲ್ಲಿ 2.24 ಬಿಲಿಯನ್ ಡಾಲರ್ಸ್ ಮೊತ್ತದ ವ್ಯವಹಾರವಾಗುತ್ತಿದೆ. ನಮ್ಮ ಶಕ್ತಿಯ ಮೇಲೆ, ಮಾನವ ಸಂಪನ್ಮೂಲದ ಆಧಾರದ ಮೇಲೆ ಜನ ಬರುತ್ತಿದ್ದಾರೆ.

ದೊಡ್ಡ ಪ್ರಮಾಣದಲ್ಲಿ ರಸ್ತೆಗಳ ಸುಧಾರಣೆ:
ಮೋಹನ್ ದಾಸ ಪೈ ಅವರು ಬೆಂಗಳೂರಿನ ರಸ್ತೆಗಳು ಸರಿ ಇಲ್ಲ ಎಂದು ಟ್ವೀಟ್ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ರಸ್ತೆಗಳು ಸರಿಯಾಗುತ್ತಿವೆ. ಮಳೆಗಾಲದಲ್ಲಿ ಸ್ವಲ್ಪ ತೊಂದರೆ ಇತ್ತು. ಈಗ ರಸ್ತೆಗಳು ಬಹಳಷ್ಟು ಸುಧಾರಿಸಿದೆ. ಮುಂದೆ ಇನ್ನಷ್ಟು ಸುಧಾರಣೆಯಾಗಲಿದೆ. ಪೈ ಅವರೊಂದಿಗೆ ವೈಯಕ್ತಿಕವಾಗಿ ನಾನು ಮಾತನಾಡುತ್ತೇನೆ. ನಗರೋತ್ಥಾನ ಯೋಜನೆಯಡಿ ಬಿಬಿಎಂಪಿ ಗೆ ಹಣ ಬಿಡುಗಡೆಯಾಗಿದೆ. ಬಿಬಿಎಂಪಿ ಬಜೆಟ್ ಕೂಡ ಆಗಿದೆ. ಬರುವ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ರಸ್ತೆಗಳ ಸುಧಾರಣೆಯಾಗುತ್ತದೆ ಎಂದರು.

ಸಿದ್ದರಾಮಯ್ಯ ನವರು ಹಿಂದಿ ಹೇರಿಕೆಗೆ ಅವಕಾಶ ನೀಡುವುದಿಲ್ಲ ಎಂದು ಟ್ವೀಟ್ ಮಾಡಿರುವು ಬಗ್ಗೆ ಪ್ರತಿಕ್ರಿಯೆ ನೀಡಿ ಸಿದ್ದರಾಮಯ್ಯನವರಿಗೆ ಯಾವಾಗ ಏನು ಜ್ಞಾನೋದಯವಾಗುತ್ತದೆ ಎಂದು ಗೊತ್ತಿಲ್ಲ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button