ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ರಾಜ್ಯ ಪುನರ್ವಿಂಗಡಣಾ ಕಾಯ್ದೆ ಮತ್ತು ಸಂವಿಧಾನ 3ನೇ ವಿಧಿ ಅನುಸಾರ ಮಹಾರಾಷ್ಟ್ರ ಗಡಿ ವಿವಾದ ಹಿನ್ನಲೆಯಲ್ಲಿ 2004 ರಲ್ಲಿ ಹೂಡಿದ ದಾವೆಗೆ ಯಾವುದೇ ಕಾನೂನು ಮಾನ್ಯತೆ ಇಲ್ಲ. ಈ ವಾದಕ್ಕೆ ಹೆಚ್ಚಿನ ಒತ್ತು ನೀಡಿ ರಾಜ್ಯ ಸರ್ಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಸಮರ್ಥವಾದ ಕಾನೂನು ಹೋರಾಟಕ್ಕೆ ಸಿದ್ದತೆ ಮಾಡಿಕೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶಾಸಕ ಎಸ್.ವಿ.ರವಿಂದ್ರನಾಥ್ ಹುಟ್ಟು ಹಬ್ಬದ ಸಮಾರಂಭದಲ್ಲಿ ಭಾಗವಹಿಸಲು ದಾವಣಗೆರೆಗೆ ಆಗಮಿಸಿದ ಮುಖ್ಯಮಂತ್ರಿಗಳ ಜಿ.ಎಂ. ಐ.ಟಿ ಹೆಲಿಪ್ಯಾಡ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಹಿರಿಯ ನ್ಯಾಯವಾದಿಗಳಾದ ಮುಕುಲ್ ರೊಹಟಗಿ, ಉದಯಹೊಳ್ಳ ನೇತೃತ್ವದಲ್ಲಿ ಸರ್ವೋಚ್ಛ ನ್ಯಾಯಾಲಯದಲ್ಲಿ ಗಂಭೀರವಾಗಿ ವಾದ ಮಂಡಿಸಲಿದ್ದೇವೆ. ಕಾನೂನು ಹೋರಾಟಕ್ಕೆ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರನ್ನು ಸಹ ಸರ್ಕಾರ ನೇಮಿಸಿದೆ. ನಾವು ಸಂವಿಧಾನ ಹಾಗೂ ಕಾನೂನು ಬದ್ದವಾಗಿ ಇದ್ದೇವೆ. ಕರ್ನಾಟಕದ ರಾಜ್ಯದ ಭೂ ಪ್ರದೇಶದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ಬೇಡಿಕೆ ಹಾಗೂ ನಿಲುವುಗಳನ್ನು ವಿಚಾರಣೆ ಸಂದರ್ಭದಲ್ಲಿ ಮಂಡಿಸಲಾಗುವುದು. ಈ ಸಂಬಂಧವಾಗಿ ಮುಂದಿನ ವಾರ ಸರ್ವಪಕ್ಷ ಹಾಗೂ ಕಾನೂನು ತಜ್ಞರ ಸಭೆ ಕರೆದಿದ್ದೇನೆ. ಯಾವ ವಿಚಾರವನ್ನು ಮಂಡಿಸಬೇಕು ಎಂಬುದರ ಕುರಿತು ಕೂಲಂಕುಷವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಾಗುವುದು ಎಂದರು.
ಮಹಾರಾಷ್ಟ್ರ ಹಿರಿಯ ರಾಜಕಾರಣಿ ಶರದ್ ಪವಾರ್ ಬೆಳಗಾವಿ ಗಡಿ ವಿವಾದ ಇಟ್ಟುಕೊಂಡು ಇದುವರೆಗೂ ರಾಜಕೀಯ ಮಾಡಿದ್ದಾರೆ. ಹಿಂದಿನಿಂದಲೂ ಶರದ್ ಪವಾರ್ ಗೆ ಬೆಳಗಾವಿ ಬಗ್ಗೆ ಸೆಳೆತವಿತ್ತು. ಆದರೆ ಬೆಳಗಾವಿ ಬಗೆಗಿನ ಅವರ ಕನಸು ನನಸಾಗಿಲ್ಲ, ಮುಂದೆಯೂ ನನಸಾಗುವುದಿಲ್ಲ. ರಾಜ್ಯದ ಒಂದಿಂಚು ಜಾಗವನ್ನೂ ಬಿಟ್ಟುಕೊಡುವ ಮಾತೇ ಇಲ್ಲ. ನೆಲ, ಜಲ, ಭಾಷೆ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಮಹಾರಾಷ್ಟ್ರದ ಜತ್ತ ಭಾಗದ ಜನರು ಕರ್ನಾಟಕದಲ್ಲಿ ವಿಲೀನವಾಗಲು ಬಹುದಿನಗಳಿಂದ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ,ಸಂಸದ ಜಿ.ಎಂ.ಸಿದ್ದೇಶ್ವರ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಜಿಲ್ಲಾಧಿಕಾರಿ ಶಿವಾನಂದ ಕಪಾಶಿ, ಜಿ.ಪಂ.ಸಿಇಓ ಡಾ.ಚೆನ್ನಪ್ಪ, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮತ್ತಜ್ಜಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಉಪವಿಭಾಗಧಿಕಾರಿ ದುರ್ಗಶ್ರೀ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.
ಬೆಳಗಾವಿ ಮಹಾರಾಷ್ಟ್ರದಲ್ಲಿದ್ದರೇನು? ಕರ್ನಾಟಕದಲ್ಲಿದ್ದರೇನು?; ಹೆಚ್.ಡಿ.ಕೆ.ಪ್ರಶ್ನೆ
https://pragati.taskdun.com/h-d-kumaraswamykarnataka-maharashtra-border-issuereaction/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ