*ನಾಳೆ ಬೆಳಗಾವಿಗೆ ಸಿಎಂ ಡಿ.ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅ.25ರಂದು ಬೆಳಗಾವಿ ಜಿಲ್ಲೆಗೆ ಭೇಟಿ ನೀಡಲಿದ್ದು, ಕಿತ್ತೂರು ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಅ.26ರಂದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಕಬ್ಬು ಬೆಳೆಗಾರರೊಂದಿಗೆ ಪ್ರತ್ಯೇಕ ಸಭೆ ನಡೆಸಲಿದ್ದಾರೆ.
ಅ.25ರಂದು ಮೈಸೂರಿನಿಂದ ವಿಶೇಷ ವಿಮಾನದ ಮೂಲಕ ಪ್ರಯಾಣ ಬೆಳೆಸಲಿರುವ ಮುಖ್ಯಮಂತ್ರಿ, ಸಂಜೆ 4.40ಕ್ಕೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಕಿತ್ತೂರಿಗೆ ತೆರಳಿ ಸಂಜೆ 5.20ಕ್ಕೆ ಕಿತ್ತೂರು ಉತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಬಳಿಕ ಬೆಳಗಾವಿಯಲ್ಲಿ ವಾಸ್ತವ್ಯ ಮಾಡಲಿದ್ದಾರೆ.
ಅ.26ರಂದು ಬೆಳಗ್ಗೆ 10ಕ್ಕೆ ಬೆಳಗಾವಿಯಲ್ಲಿ ನಡೆಯಲಿರುವ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಹಾಗೂ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ನಂತರ ಬೆಳಗ್ಗೆ 11ಕ್ಕೆ ಸುವರ್ಣ ವಿಧಾನಸೌಧದಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಸಭೆ ನಡೆಸಲಿದ್ದಾರೆ.
ಮಧ್ಯಾಹ್ನ 1.30ಕ್ಕೆ ಯಲ್ಲಮ್ಮನ ಗುಡ್ಡಕ್ಕೆ ತೆರಳಲಿರುವ ಅವರು, ಅಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬಳಿಕ ಮಧ್ಯಾಹ್ನ 3.30ಕ್ಕೆ ಮತ್ತೆ ಸುವರ್ಣ ವಿಧಾನಸೌಧಕ್ಕೆ ಆಗಮಿಸಿ ಕಬ್ಬು ಬೆಳೆಗಾರರೊಂದಿಗೆ ಸಭೆ ನಡೆಸಲಿದ್ದಾರೆ.
ಕಬ್ಬಿನ ಬೆಲೆ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರೈತರು ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳೊಂದಿಗೆ ನಡೆಯಲಿರುವ ಈ ಸಭೆ ಮಹತ್ವ ಪಡೆದುಕೊಂಡಿದೆ. ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗಿನ ಚರ್ಚೆಯಲ್ಲಿ ಯಾವ ನಿರ್ಧಾರ ಹೊರಬೀಳಲಿದೆ ಎಂಬ ಕುತೂಹಲ ಮೂಡಿದೆ.
ಸಭೆಗಳು ಮುಕ್ತಾಯಗೊಂಡ ಬಳಿಕ ಸಂಜೆ 6.30ಕ್ಕೆ ವಿಶೇಷ ವಿಮಾನದ ಮೂಲಕ ಮುಖ್ಯಮಂತ್ರಿ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




