Belagavi NewsBelgaum NewsKannada News

*ನಮ್ಮ ಹೋರಾಟವನ್ನು ಸಿಎಂ ಅವರು ಅಪಮಾನ ಮಾಡಿದ್ದಾರೆ: ಮೃತ್ಯುಂಜಯ ಶ್ರೀ* 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪಂಚಮಸಾಲಿ ಲಿಂಗಾಯತರ ಹೋರಾಟವನ್ನು ಸಿಎಂ ಸಿದ್ದರಾಮಯ್ಯ ಅಸಂವಿಧಾನಿಕ ಎಂದು ಹೇಳಿ ನಮ್ಮ ಇಡೀ ಸಮಾಜಕ್ಕೆ ಅವಮಾನ ಮಾಡಿದ್ದಾರೆ ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಕಿಡಿಕಾರಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವಾಗ ಲಿಂಗಾಯತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲು ಆದೇಶಿಸಿದ್ರಿ, ಯಾವಾಗ ಲಿಂಗಾಯತರ ಹೋರಾಟವನ್ನು ಸಂವಿಧಾನ ವಿರೋಧಿ, ಅಸಂವಿಧಾನಿಕ ಎಂಬ ಶಬ್ದವನ್ನು ಬಳಸಿದಿರಿ ಆವಾಗಲೇ ನಮಗೆ ಅರಿವಾಯಿತು, ನಿಮಗೆ ನಮ್ಮ ಸಮಾಜದ ಬಗ್ಗೆ ಕಿಂಚಿತ್ತೂ ಕಳಕಳಿ ಇಲ್ಲ ಎಂಬುದು. ಈ ಹೋರಾಟವನ್ನು ಹತ್ತಿಕ್ಕಲು ಎರಡು ವರ್ಷಗಳ ಕಾಲ ಶತ ಪ್ರಯತ್ನ ಮಾಡಿದ್ದೀರಿ. ಉದ್ದೇಶಪೂರ್ವಕವಾಗಿ ನಮ್ಮನ್ನು ಹೊಡೆದಿದ್ದೀರಿ. ಆದರೂ ನಾವು ಎದೆಗುಂದಲ್ಲ ಎಂದು ಹೇಳಿದರು.

ಆದರೆ ನೀವು ಅಧಿವೇಶನದಲ್ಲಿ ಲಿಂಗಾಯತರ ಬಗ್ಗೆ ಅವಮಾನ ಮಾಡುವಂತಹ ಶಬ್ದವನ್ನು ಬಳಸಿದ್ದೀರಿ. ಅದು ಸರಿಯಾದ ಕ್ರಮವಲ್ಲ. ನಮ್ಮ ಹೋರಾಟ ಸಂವಿಧಾನ ವಿರೋಧಿಯಾಗಿದ್ದರೆ, ನಮ್ಮ ಹೋರಾಟದ ವೇದಿಕೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಳ‌ರ್ ಸೇರಿದಂತೆ ನಿಮ್ಮ ಪಕ್ಷದ ಅನೇಕ ನಾಯಕರು ಬಂದಿದ್ದರು. ನಾವು ಮಾಡಿದ ಹೋರಾಟ ಸಂವಿಧಾನ ವಿರೋಧಿಯೇ ಆಗಿದ್ದರೆ ನಮ್ಮ ಹೋರಾಟಕ್ಕೆ ಬಂದಿದ್ದ ಈ ಎಲ್ಲಾ ನಾಯಕರನ್ನು ಅವರ ಸ್ಥಾನಗಳಿಂದ ಅನರ್ಹಗೊಳಿಸಿ. ತಾಕತ್ತಿದ್ದರೆ ಅವರ ರಾಜೀನಾಮೆ ಕೇಳಿ ಎಂದು ಸವಾಲು ಹಾಕಿದರು.

ಪಂಚಮಸಾಲಿ ಹೋರಾಟವನ್ನು ಹತ್ತಿಕ್ಕುವ ಭರದಲ್ಲಿ ಸಂವಿಧಾನದ ಹೆಸರು ಹೇಳಿಕೊಂಡು ಏಳು ಕೋಟಿ ಕನ್ನಡಿಗರ ಸಮ್ಮುಖದಲ್ಲಿ ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು ಎಂದು ರಾಜ್ಯ ಸರ್ಕಾರಕ್ಕೆ ನಾನು ಎಚ್ಚರಿಕೆ ನೀಡುತ್ತೇನೆ. ನೀವು ಮೀಸಲಾತಿ ಕೊಡದೇ ಹೋದರೆ ಏನೂ ಬೇಜಾರಿಲ್ಲ. ಯಾವ ಸರ್ಕಾರ ನ್ಯಾಯ ಕೊಡುತ್ತೋ ಅದನ್ನೇ ಅಧಿಕಾರಕ್ಕೆ ತರುವ ಪ್ರಯತ್ನ ಮಾಡುತ್ತೇವೆ. ಆದರೆ ನಿಮ್ಮ ಹೇಳಿಕೆಯಿಂದ 900 ವರ್ಷ ಇತಿಹಾಸ ಉಳ್ಳ ನಮ್ಮ ಲಿಂಗಾಯತ ಸಮುದಾಯಕ್ಕೆ ಬಹಳ ಅವಮಾನ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button