ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿಗೊಂಡ ಫಲಾನುಭವಿಗಳ ಕುಟುಂಬದ ಸದಸ್ಯರುಗಳಿಗೆ ಅಪಘಾತ ಮರಣದ ಧನ ಸಹಾಯದ ಚೆಕ್ ತಲಾ ೫ ಲಕ್ಷ ಮತ್ತು ಅಂತ್ಯಕ್ರಿಯೆ & ಅನುಗ್ರಹರಾಶಿ ರೂ.೫೪,೦೦೦ ಗಳ ಚೆಕ್ಗಳನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಶಂಕರಗೌಡ ಪಾಟೀಲ್ ಅವರು ಫಲಾನುಭವಿಗಳಿಗೆ ವಿತರಿಸಿದರು.
ಉಪ ಕಾರ್ಮಿಕ ಆಯುಕ್ತರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶುಕ್ರವಾರ (ಏ.೧೭) ಅರ್ಹ ಫಲಾನುಭವಿಗಳಿಗೆ ಚೆಕ್ ವಿತರಿಸಿದರು.
ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಗೌಂಡಿ, ಮೇಸ್ತ್ರೀ, ಬಾರಬೆಂಡರ್, ಇಲೆಕ್ಟ್ರೆಷಿಯನ್, ಫ್ಲಂಬರ್, ಕಾಪೆಂಟರ್, ಪೇಂಟರ್, ಟೈಲ್ಸ್ ಫಿಟ್ಟರ್, ಇತರೇ ಕಾರ್ಮಿಕರು ಈ ಮಂಡಳಿಯಲ್ಲಿ ೧೮ ರಿಂದ ೬೦ ವರ್ಷ ಒಳಗಿನ ಕಾರ್ಮಿಕರು ಸದಸ್ಯತ್ವ ಪಡೆಯಬಹುದಾಗಿದ್ದು, ಮೂರು ಪಾಸ್ ಪೋರ್ಟ ಅಳತೆಯ ಭಾವಚಿತ್ರ, ವಯಸ್ಸಿನ ದೃಢೀಕರಣ ಪತ್ರ ಮತ್ತು ನೊಂದಣಿ ಶುಲ್ಕ ಹಾಗೂ ವಂತಿಕೆ ಶುಲ್ಕ ಸೇರಿ ರೂ. ೫೦ ಪಾವತಿಸಿ ನಿಗದಿತ ನಮೂನೆ ೦೫-೦೧ ರಲ್ಲಿಆನ್ಲೈನ್ ಮೂಲಕ ಸೇವಾ ಕೇಂದ್ರ ಹಾಗೂ ಕಾರ್ಮಿಕ ಇಲಾಖೆ ಕಛೇರಿಗಳಲ್ಲಿ ಅರ್ಜಿ ಸಲ್ಲಿಸಿ ಸದಸ್ಯತ್ವ ಪಡೆಯಬಹುದಾಗಿದೆ.
ಈಗಾಗಲೇ ಬೆಳಗಾವಿ ಜಿಲ್ಲೆಯಲ್ಲಿ ೮೨,೬೭೮ ಫಲಾನುಭವಿಗಳು ಸದಸ್ಯತ್ವದ ಗುರುತಿನ ಚೀಟಿ ಹೊಂದಿದ್ದು, ಈ ಮಂಡಳಿಯಿಂದ ಮದುವೆ ಸಹಾಯ ಧನ ರೂ. ೫೦,೦೦೦, ಮಹಿಳಾ ಫಲಾನುಭವಿಗೆ ಹೆರಿಗೆ ಸೌಲಭ್ಯ ರೂ. ೩೦,೦೦೦, ವೈದ್ಯಕೀಯ ಸಹಾಯ ಧನ ರೂ. ೧೦,೦೦೦ ವರೆಗೆ, ಶೈಕ್ಷಣಿಕ ಧನ ಸಹಾಯ ೦೧ ನೇ ತರಗತಿಯಿಂದ ಸ್ನಾತಕೋತ್ತರವರೆಗೆ ಫಲಾನುಭವಿಯ ೦೨ ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ಅಪಘಾತ ಮರಣ ಧನ ಸಹಾಯ ರೂ ೫,೦೦,೦೦೦ ಅಂತ್ಯಕ್ರಿಯೆ ಅನುಗ್ರಹ ರಾಶಿ, ೫೪,೦೦೦ ಪಿಂಚಣಿ ಮಾಸಿಕ ೨೦೦೦ ಹೀಗೆ ಒಟ್ಟು ೧೩ ಸೌಲಭ್ಯಗಳನ್ನು ನೀಡಲಾಗುತ್ತದೆ.
ಮಂಡಳಿ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಒಟ್ಟು ೧೭,೧೩೨/- ಫಲಾನುಭವಿಗಳಿಗೆ ೧೮ ಕೋಟಿ ರೂಪಾಯಿಗಳ ಧನಸಹಾಯವನ್ನು ಫಲಾನುಭವಿಗಳ ಖಾತೆಗೆ ನೇರವಾಗಿಜಮೆ ಮಾಡಲಾಗಿರುತ್ತದೆ.
ಈ ಕಾರ್ಯಕ್ರಮದಲ್ಲಿ ಅಪಘಾತ ಮರಣ ಹೊಂದಿದ ನಾಮ ನಿರ್ದೇಶಿತರ ಹೆಸರಿನಲ್ಲಿ ರೂ. ೫,೦೦,೦೦೦ (ಪ್ರತಿ ಫಲಾನುಭವಿಗೆರೂ. ಐದು ಲಕ್ಷರಂತೆ) ಧನ ಸಹಾಯವನ್ನು ಒಟ್ಟು ೦೫ ಜನ ಫಲಾನುಭವಿಗಳಿಗೆ, ಸ್ವಾಭಾವಿಕ ಮರಣ ಹೊಂದಿದ ಫಲಾನುಭವಿಗಳ ನಾಮ ನಿರ್ದೇಶಿತರ ಹೆಸರಿನಲ್ಲಿ ರೂ. ೫೪,೦೦೦ ಧನ ಸಹಾಯವನ್ನು ಒಟ್ಟು ೦೨ ಜನ ಫಲಾನುಭವಿಗಳಿಗೆ ವಿತರಿಸಲಾಗಿದೆ.
ಬೆಳಗಾವಿ ಪ್ರಾದೇಶಿಕ ಕಛೇರಿಯ ಉಪ ಕಾರ್ಮಿಕ ಆಯುಕ್ತರಾದ ವೆಂಕಟೇಶ ಶಿಂಧಿಹಟ್ಟಿ, ಬೆಳಗಾವಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರಾದ ಮಲ್ಲಿಕಾರ್ಜುನ ಎಸ್. ಜೋಗೂರ, ಬೆಳಗಾವಿ ಉಪ ವಿಭಾಗ-೧ರ ಬೆಂಗಾಲಿ ಕಾರ್ಮಿಕ ಅಧಿಕಾರಿಗಳಾದ ತರನಂ, ಜಿಲ್ಲಾ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷರಾದ ಎನ್.ಆರ್ ಲಾತೂರ (ವಕೀಲರು), ಮತ್ತು ಸಿಂಬ್ಬಂದಿ ವರ್ಗದವರು ಉಪಸ್ಥಿತರಿದ್ದರು ಎಂದು ವಾರ್ತಾ ಇಲಾಖೆಯ ಪ್ರಕಟಣೆ ತಿಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ