*ಯೋಜನೆಗಳ ಅನುಮತಿ ನೀಡಿ: ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವರಿಗೆ ಮನವಿ ಸಲ್ಲಿಸಿದ ಸಿಎಂ*

ಪ್ರಗತಿವಾಹಿನಿ ಸುದ್ದಿ: ಸಿಎಂ ಡಿ ಕೆ ಶಿವಕುಮಾರ್ ಅವರು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಮನೋಹರಲಾಲ್ ಖಟ್ಟರ್ ಅವರನ್ನು ದೆಹಲಿಯಲ್ಲಿ ಬುಧವಾರ ಭೇಟಿ ಮಾಡಿ ಅಹವಾಲು ಸಲ್ಲಿಸಿದರು.
ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಖಟ್ಟರ್ ಅವರಿಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ಬುಧವಾರ ಸಲ್ಲಿಸಿದ ಪ್ರಸ್ತಾವನೆ ಮುಖ್ಯಾಂಶಗಳು ಇಂತಿದೆ.
ಡಬಲ್ ಡೆಕ್ಕರ್ ಯೋಜನೆಗೆ ಅನುಮತಿ
ಮೆಟ್ರೋ ಮೂರನೇ ಹಂತ ಯೋಜನೆಯಲ್ಲಿ 44.65 ಕಿ.ಮೀ ಉದ್ದದ ಡಬಲ್ ಡೆಕ್ಕರ್ ಮೆಲ್ಸೇತುವೆ ನಿರ್ಮಾಣಕ್ಕೆ ಬಿಎಂಆರ್ ಸಿಎಲ್ ಮುಂದಾಗಿದ್ದು, ದಿನಾಂಕ 13-09-2024ರಂದು ಕೇಂದ್ರ ಸರ್ಕಾರ ಇದಕ್ಕೆ ಅನುಮತಿ ನೀಡಿತ್ತು. ಈ ಯೋಜನೆಯ ವೆಚ್ಚ 9,700 ಕೋಟಿ ರೂ. ಅನ್ನು ಕರ್ನಾಟಕ ಸರ್ಕಾರವೇ ಭರಿಸಲಿದೆ. 19-01-2026ರಂದು ಬಿಎಂಆರ್ ಸಿಎಲ್ ಮಂಡಳಿಯ 118ನೇ ಸಭೆಯಲ್ಲಿ ಸಣ್ಣ ಬದಲಾವಣೆ ಪ್ರಸ್ತಾಪ ಮಾಡಿದ್ದು, ಕೇಂದ್ರ ಸರ್ಕಾರ ಈ ಯೋಜನೆಯನ್ನು ಆರಂಭಿಸಲು ಬಿಎಂಆರ್ ಸಿಎಲ್ ಗೆ ಅನುಮತಿ ನೀಡಬೇಕು.
ಮೆಟ್ರೋ ಎರಡನೇ ಹಂತದ ಪರಿಷ್ಕೃತ ಯೋಜನಾ ವೆಚ್ಚಕ್ಕೆ ಅನುಮತಿ
ಈ ಯೋಜನೆಗೆ ಕೇಂದ್ರ ಸರ್ಕಾರ 21-02-2014ರಂದು 26,405.14 ಕೋಟಿ ರೂ. ಅಂದಾಜು ವೆಚ್ಚಕ್ಕೆ ಅನುಮತಿ ನೀಡಿತ್ತು. 72.095 ಕಿ.ಮೀ ಉದ್ದ ಹಾಗೂ 61 ನಿಲ್ದಾಣಗಳನ್ನು ಒಳಗೊಂಡಿರುವ ಈ ಯೋಜನೆ ಅಂದಾಜು ವೆಚ್ಚ ಈಗ 40,425.02 ಕೋಟಿ ರೂ.ಗೆ ಅಂದರೆ 14,019.88 ಕೋಟಿ ರೂ. ಏರಿಕೆ ಮಾಡಲಾಗಿದ್ದು, ಆದಷ್ಟು ಬೇಗ ಈ ಪರಿಷ್ಕೃತ ಯೋಜನಾ ವೆಚ್ಚಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕು.
ಮೆಟ್ರೋ ಮೂರನೇ ಎ ಹಂತಕ್ಕೆ ಅನುಮತಿ
ಈ ಯೋಜನೆ ಸರ್ಜಾಪುರದಿಂದ ಹೆಬ್ಬಾಳದವರೆಗೆ ಒಟ್ಟು 37.804 ಕಿ.ಮೀ (14.28 ಕಿ.ಮೀ ಸುರಂಗ ಹಾಗೂ 23.524 ಕಿ.ಮೀ ಮೇಲ್ಸೇತುವೆ) ಉದ್ದವಿದ್ದು, ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಕೆಲವು ಮಾರ್ಪಾಡು ಮಾಡಲಾಗಿದ್ದು, 25,999 ಕೋಟಿ ರೂ. ಅಂದಾಜು ವೆಚ್ಚದ ಪರಿಷ್ಕೃತ ಡಿಪಿಆರ್ ಅನ್ನು 29-04-2026ರಂದು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದ್ದು, ಆದಷ್ಟು ಬೇಗ ಇದಕ್ಕೆ ಅನುಮತಿ ನೀಡಬೇಕು.
ಪ್ರಾದೇಶಿಕ ಕ್ಷಿಪ್ರ ರೈಲು ಸಾರಿಗೆ ವ್ಯವಸ್ಥೆ (RRTS) ಜಾರಿಗೆ ಅನುಮತಿ
ಬೆಂಗಳೂರು- ಮೈಸೂರು, ಬೆಂಗಳೂರು- ಕನಕಪುರ, ಬೆಂಗಳೂರು- ತುಮಕೂರು, ಬೆಂಗಳೂರು- ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು- ಕೋಲಾರ ನಡುವೆ ಪ್ರಾದೇಶಿಕ ಕ್ಷಿಪ್ರ ರೈಲು ಸಾರಿಗೆ ವ್ಯವಸ್ಥೆ (RRTS) ಜಾರಿಗೆ ಅನುಮತಿ ನೀಡಬೇಕು.
ಈ ವೇಡ ಕರ್ನಾಟಕ ಸರಕಾರದ ವಿಶೇಷ ಪ್ರತಿನಿಧಿ ಟಿ ಬಿ ಜಯಚಂದ್ರ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಎಲ್ ಕೆ ಅತೀಕ್, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಕಾರ್ಯದರ್ಶಿ ರಾಜೇಂದ್ರ ಚೋಳನ್ ಉಪಸ್ಥಿತರಿದ್ದರು.



