ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ಒದಗಿಸುವ ಶಕ್ತಿ ಯೋಜನೆಗೆ ಭಾನುವಾರ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಳಗಾವಿ ಅಜ್ಜಿಯೊಬ್ಬರು ಮೆಟ್ಟಿಲುಗಳಿಗೆ ನಮಸ್ಕರಿಸಿ ಬಸ್ ಹತ್ತಿರುವ ಫೋಟೋ ನೋಡಿ ಭಾವುಕರಾಗಿ ಟ್ವೀಟ್ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವುಕರಾಗುವುದು ತೀರಾ ಅಪರೂಪ. ಆದರೆ ಅಜ್ಜಿ ಬಸ್ ಗೆ ನಮಸ್ಕರಿಸುವ ಚಿತ್ರವನ್ನು ನೋಡಿ, ಬಹುಕಾಲ ನೆನಪಿನಲ್ಲಿ ಉಳಿಯುವ ಚಿತ್ರವಿದು ಎಂದು ಟ್ವೀಟ್ ಮಾಡಿದ್ದಾರೆ.
ನಿಂಗವ್ವ ಸಿಂಗಾಡಿ ಎನ್ನುವ ಬೆಳಗಾವಿ ಜಿಲ್ಲೆ ಸಂಗೊಳ್ಳಿ ಗ್ರಾಮದ ಅಜ್ಜಿ ಸವದತ್ತಿಯಲ್ಲಿ ತನ್ನ ಮೊಮ್ಮಗನ ಮನೆ ಗೃಹ ಪ್ರವೇಶಕ್ಕೆ ಹೊರಟಿದ್ದಳು. ಶಕ್ತಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ ಸ್ವಲ್ಪ ಹೊತ್ತಿನಲ್ಲಿ ಉಚಿತ ಪ್ರಯಾಣಕ್ಕೆ ಬಸ್ ಏರುವ ಸಂದರ್ಭದಲ್ಲಿ ಧಾರವಾಡ ಬಸ್ ನಿಲ್ದಾಣದಲ್ಲಿ ಧಾರವಾಡ -ಗೋಕಾಕ ಬಸ್ ನ್ನು ಏರುವಾಗವಾಗ ಅಜ್ಜಿ ಬಸ್ ಮೆಟ್ಟಿಲುಗಳಿಗೆ ನಮಸ್ಕರಿಸಿದ್ದಳು.
“ನಾವು ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಘೋಷಿಸಿದಾಗ ಶ್ರಮಪಡದೆ ಸಮಾಜದ ಎಲ್ಲಾ ವಿಧದ ಸೌಲಭ್ಯಗಳನ್ನು ಕೂತಲ್ಲಿಯೇ ಅನುಭವಿಸುತ್ತಿರುವ ಜನರಿಂದ ತರತರನಾದ ಟೀಕೆಗಳು, ಕುಹಕ, ವ್ಯಂಗ್ಯಗಳು ವ್ಯಕ್ತವಾದವು. ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಇಂದು ಶಕ್ತಿ ಯೋಜನೆಯನ್ನು ಜಾರಿಗೆ ಕೊಟ್ಟೆವು. ನಮ್ಮ ಯೋಜನೆ ಜಾರಿಗೊಂಡ ನಂತರ ತಾಯಿಯೊಬ್ಬರು ಧಾರವಾಡ ಬಸ್ ನಿಲ್ದಾಣದಲ್ಲಿ ಬಸ್ಸಿಗೆ ನಮಸ್ಕರಿಸಿ ಅತ್ಯಂತ ಸಂತೋಷದಿಂದ ಉಚಿತ ಪ್ರಯಾಣ ಬೆಳೆಸಿದರು. ನಾವು ಎಷ್ಟು ಅನುದಾನ ಖರ್ಚು ಮಾಡುತ್ತೇವೆ ಎನ್ನುವುದಕ್ಕಿಂತ ಯಾರಿಗಾಗಿ ಆ ಹಣ ವಿನಿಯೋಗಿಸುತ್ತಿದ್ದೇವೆ ಎಂಬುದು ಮುಖ್ಯ. ಈ ಕ್ಷಣ ಇನ್ನೂ ನೂರು ವಿಧದಲ್ಲಿ ಟೀಕೆಗಳು ಎದುರಾದರೂ ಅದ್ಯಾವುದಕ್ಕೂ ಕುಗ್ಗದಂತೆ ನನ್ನನ್ನು ಗುರಿಯೆಡೆಗೆ ಮತ್ತಷ್ಟು ದೃಢವಾಗಿಸಿದೆ. ಯೋಜನೆ ಜಾರಿಗೆ ಕೊಟ್ಟ ನನಗೆ ಸಂತೃಪ್ತಿ ನೀಡಿದ ಜೊತೆಗೆ ಬಹುಕಾಲ ನೆನಪಿನಲ್ಲಿ ಉಳಿಯುವ ಚಿತ್ರವಿದು” ಎಂದು ಅವರು ಟ್ವೀಟ್ ಮಾಡಿದ್ದಾರೆ. ಒಂದೇ ಗಂಟೆಯಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಟ್ವೀಟ್ ವೀಕ್ಷಿಸಿದ್ದಾರೆ
ವಾರ್ತಾ ಇಲಾಖೆ ಆಯುಕ್ತ ಹೇಮಂತ ನಿಂಬಾಳಕರ್ ಸಹ A picture speaks more than thousand words… ಎಂದು ಅಜ್ಜಿ ಬಸ್ ಗೆ ನಮಸ್ಕರಿಸುವ ಫೋಟೋ ಟ್ವೀಟ್ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ