*ಸಿಎಂ ಸಿದ್ದರಾಮಯ್ಯ ಗೃಹಸಚಿವರ ರಾಜೀನಾಮೆ ಪಡೆಯಬೇಕು: ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಆಗ್ರಹ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪರಪ್ಪನ ಅಗ್ರಹಾರದಲ್ಲಿದ್ದಾಗ ಹುಷಾರಿಲ್ಲದ ನನಗೆ ಒಂದು ಸಿಂಗಲ್ ಇಡ್ಲಿ ಕೇಳಿದ್ರೆ ಕೊಡಲಿಲ್ಲ. ಚಿತ್ರನಟ ದರ್ಶನನಂತ ಹಣವಂತರಿಗೆ ಎಲ್ಲ ವ್ಯವಸ್ಥೆಯನ್ನೂ ಕೊಡ್ತಾರೆ ಎಂದು ಪರಪ್ಪನ ಅಗ್ರಹಾರದ ಕರಾಳ ವ್ಯವಸ್ಥೆ ವಿರುದ್ಧ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಕೆಂಡಕಾರಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೈಲಿನ ತಾರತಮ್ಯ ವ್ಯವಸ್ಥೆ ಎಳೆ ಎಳೆಯಾಗಿ ಬಿಚ್ಚಿಟ್ಟ ನಾರಾಯಣಗೌಡ ನಾನು ಕನ್ನಡ ನಾಡು ನುಡಿಗಾಗಿ 16 ದಿನಗಳ ಕಾಲ ಜೈಲಿನಲ್ಲಿದ್ದೆ, ಆಗ ಹುಷಾರಿರಲಿಲ್ಲ. ಜೈಲಿನ ಅಧೀಕ್ಷಕರಿಗೆ ಒಂದು ಪ್ಲೇಟ್ ಇಡ್ಲಿ ಕೊಡಿ ಎಂದು ಮನವಿ ಮಾಡಿದ್ದೆ. ಇಲ್ಲ ಗೌಡ್ರೆ ನಿಮಗೆ ಹೊರಗಿಂದ ತಂದು ಕೊಡಲು ಆಗಲ್ಲ, ಜೈಲಿನ ಆಹಾರವನ್ನೇ ಸ್ವೀಕರಿಸಬೇಕೆಂದರು.
ಜೈಲಿನ ಸಿಬ್ಬಂದಿ ಹಣ ಇದ್ದವರಿಗೆ ಬೀಡಿ, ಸಿಗರೇಟ್, ಎಣ್ಣೆ, ಡ್ರಗ್ಸ್, ಗಾಂಜಾ ಎಲ್ಲವನ್ನೂ ಕೊಡ್ತಾರೆ. ನೂರು ರಾಪಾಯಿಗೆ ಬೀಡಿ ಕಟ್, ಸಾವಿರಕ್ಕೆ ಸಿಗರೇಟ್ ಕಟ್, 90 ಸಾವಿರಕ್ಕೆ ಮೊಬೈಲ್ ಕೊಡ್ತಾರೆ. ಬಡ ಕೈದಿಗಳಿಗೆ ಔಷಧ ಮಿಶ್ರಿತ ಆಹಾರ ನೀಡ್ತಾರೆ, ಹಣ ಇದ್ದವರಿಗೆ ಹೊರಗಿನ ಆಹಾರ ಕೊಡ್ತಾರೆ. ಕೊಲೆಗಡುಕರಿಗೆ, ಹಣವಂತರಿಗೆ ಪರಪ್ಪನ ಅಗ್ರಹಾರದಲ್ಲಿ ಹೆಚ್ಚಿನ ಗೌರವ ಇದೆ. ಕೊಲೆಗಡುಕರು, ಕ್ರಿಮಿನಲ್ಸ್‌ಗಳಿಗೆ ಎಲ್ಲಿಲ್ಲದ ರಕ್ಷಣೆ, ಆತಿಥ್ಯ ಪರಪ್ಪನ ಅಗ್ರಹಾರದಲ್ಲಿದೆ. ಪರಪ್ಪನ ಅಗ್ರಹಾರ ಕೆಟ್ಟ ವ್ಯವಸ್ಥೆ ಬಗ್ಗೆ ನಾನೇ ಒಂದು ಪುಸ್ತಕ ಬರೆದಿರುವೆ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಕಾಲೇಜು ವಿದ್ಯಾರ್ಥಿಗಳಿಗೂ ಡ್ರಗ್ಸ್, ಗಾಂಜಾ ಸಿಗುತ್ತದೆ. ಜೈಲಿನ ಅವ್ಯವಸ್ಥೆ ಬೆಳಕಿಗೆ ಬಂದಿದ್ದು ತಕ್ಷಣವೇ ಮುಖ್ಯಮಂತ್ರಿಗಳು, ಗೃಹ ಸಚಿವರ ರಾಜೀನಾಮೆ ಪಡೆಯಬೇಕು. ಕಾನೂನು ಎಲ್ಲರಿಗೂ ಒಂದೇ, ಹಣ ಇದ್ದವರಿಗೊಂದು, ಇಲ್ಲದವರಿಗೊಂದು ವ್ಯವಸ್ಥೆ ಇರಬಾರದು. ಆದರೆ ಜೈಲಿನಲ್ಲಿ ಹಣ ಇದ್ದವರಿಗೆ ಒಂದು, ಬಡವರಿಗೆ ಒಂದು ಎಂಬಂತಿದೆ.ಜೈಲುಗಳು ಪರಿವರ್ತನಾ ಕೇಂದ್ರಗಳಾಗಿ ಉಳಿದಿಲ್ಲ, ಸವಲತ್ತುಗಳ ತಾಣಗಳಾಗಿವೆ ಎಂದು ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ