*ಪ್ರಾಸಿಕ್ಯೂಷನ್ ಪ್ರಶ್ನಿಸಿ ಇಂದು ಹೈಕೋರ್ಟ್ ಮೊರೆ ಹೋಗಲಿರುವ ಸಿಎಂ ಸಿದ್ದರಾಮಯ್ಯ*
ಪ್ರಗತಿವಾಹಿನಿ ಸುದ್ದಿ : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದು ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿರುವ ಹಿನ್ನೆಲೆ, ಇದನ್ನು ಪ್ರಶ್ನಿಸಿ ರಾಜ್ಯಪಾಲರು ನೀಡಿರುವ ಅನುಮತಿಯನ್ನ ರದ್ದುಗೊಳಿಸಬೇಕು ಎಂದು ಸಿದ್ದರಾಮಯ್ಯ ಇಂದು ಹೈಕೋರ್ಟ್ ಮೊರೆ ಹೋಗಲಿದ್ದಾರೆ.
ಇಂದು ದೆಹಲಿಯಿಂದ ಬೆಂಗಳೂರಿಗೆ ಖ್ಯಾತ ಹಿರಿಯ ವಕೀಲರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಆಗಿರುವ ಅಭಿಷೇಕ್ ಮನು ಸಿಂಫ್ಟಿ ಮತ್ತು ಕಪಿಲ್ ಸಿಬಲ್ ಆಗಮಿಸುತ್ತಿದ್ದು, ಸಿಎಂ ಸಿದ್ದರಾಮಯ್ಯ ವಕೀಲರ ಜೊತೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ವಿಚಾರ ಮತ್ತು ಮುಂದಿನ ಕಾನೂನು ಹೋರಾಟಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಿದ್ದಾರೆ. ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ನೋಟಿಸ್ ನ ಎಲ್ಲಾ ಕಾನೂನಾತ್ಮಕ ಅಂಶಗಳನ್ನು ಕೂಲಂಕಶವಾಗಿ ಪರಿಶೀಲಿಸಿದ ನಂತರ ಮುಂದಿನ ಕಾನೂನು ಹೋರಾಟ ಹೇಗಿರಬೇಕು, ಯಾವ ರೀತಿ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಬೇಕು ಎಂಬುದನ್ನು ವಕೀಲರು ನಿರ್ಧರಿಸಲಿದ್ದಾರೆ.
ಮತ್ತೊಂದೆಡೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲೂ ಸಿಎಂ ವಿರುದ್ಧ ದೂರು ದಾಖಲಿಸಲು ಅರ್ಜಿ ಸಲ್ಲಿಸಲಾಗಿದ್ದು,ಇದರ ಆದೇಶವನ್ನ ವಿಶೇಷ ನ್ಯಾಯಾಲಯ ಆಗಸ್ಟ್ 20ಕ್ಕೆ ಕಾಯ್ದಿರಿಸಿದೆ. ಆದರೆ ಇದಕ್ಕೂ ಮುನ್ನವೇ ತಮ್ಮವಾದವನ್ನು ಆಲಿಸಬೇಕು ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಿಎಂ ಸಿದ್ದರಾಮಯ್ಯ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ