ಬೆಳಗಾವಿ ಜಿಲ್ಲೆಯಲ್ಲಿ 47 ರಸ್ತೆ ಸಂಚಾರ ಸ್ಥಗಿತ, 51 ಗ್ರಾಮಗಳು ಜಲಾವೃತ : ಜಿಲ್ಲಾಧಿಕಾರಿಗಳ ಜತೆ ಸಿಎಂ ವಿಡಿಯೋ ಸಂವಾದ
ಜೀವಹಾನಿ ತಡೆಯಲು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಎಲ್ಲೆಡೆ ವ್ಯಾಪಕ ಮಳೆಯಾಗುತ್ತಿರುವುದರಿಂದ ಯಾವುದೇ ಸಾವು-ನೋವುಗಳಾಗದಂತೆ ಅಧಿಕಾರಿಗಳು ೨೪ ಗಂಟೆಯೂ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ತುರ್ತು ಪರಿಹಾರ ಕಾರ್ಯಕ್ಕೆ ಹಣಕಾಸಿನ ಕೊರತೆಯಿಲ್ಲ; ಯಾವುದೇ ರೀತಿಯ ನೆರವಿನ ಅಗತ್ಯವಿದ್ದರೆ ತಕ್ಷಣವೇ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಅತಿವೃಷ್ಟಿ ಹಿನ್ನೆಲೆಯಲ್ಲಿ ಪ್ರವಾಹ ಸನ್ನದ್ಧತೆಗಳ ಕುರಿತು ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಶುಕ್ರವಾರ (ಜು.೨೩) ನಡೆದ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು.
ಮಳೆಯಿಂದ ಸ್ಥಗಿತಗೊಂಡಿರುವ ರಸ್ತೆಗಳನ್ನು ದುರಸ್ತಿಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಬೇಕು.
ಜನರ ಸಂಚಾರಕ್ಕೆ ಆದ್ಯತೆ ಮೇರೆಗೆ ಮೊದಲು ರಸ್ತೆಗಳನ್ನು ಮುಕ್ತಗೊಳಿಸಬೇಕು. ಯಾವುದೇ ಸಾವು-ನೋವು ಉಂಟಾಗದಂತೆ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳುಗೆ ಸೂಚನೆ ನೀಡಿದರು.
ವಿಡಿಯೋ ಸಂವಾದದಲ್ಲಿ ಬೆಳಗಾವಿಯಿಂದ ಭಾಗವಹಿಸಿದ್ದ ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು, ಬೆಳಗಾವಿ ಜಿಲ್ಲೆಯಲ್ಲಿ ೪೭ ರಸ್ತೆ ಸಂಚಾರ ಸ್ಥಗಿತಗೊಂಡಿದ್ದು, ೫೧ ಗ್ರಾಮಗಳು ಜಲಾವೃತಗೊಂಡಿವೆ; ೨೨೪ ಮನೆಗಳು ಭಾಗಶಃ ಹಾಗೂ ಒಂದು ಮನೆ ಸಂಪೂರ್ಣ ಕುಸಿದಿದ್ದು, ಯಾವುದೇ ಜೀವಹಾನಿಯಾಗಿರುವುದಿಲ್ಲ ಎಂದು ವಿವರಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ ವಾಡಿಕೆಗಿಂತ ಜಾಸ್ತಿ ಮಳೆಯಾಗಿರುವುದರಿಂದ ಜಿಲ್ಲಾ ಮುಖ್ಯ ರಸ್ತೆಗಳು ಸೇರಿ ೪೭ ರಸ್ತೆ ಸಂಚಾರ ಸ್ಥಗಿತಗೊಂಡಿರುತ್ತದೆ. ಇದಲ್ಲದೇ ೩೬ ಸೇತುವೆ ಮುಳುಗಡೆಯಾಗಿವೆ.
ಅದೇ ರೀತಿ ಭೂಕುಸಿತದಿಂದ ನಿಪ್ಪಾಣಿಯ ಯಮಗರ್ಣಿ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿರುತ್ತದೆ.
ಕಳೆದ ೨೪ ಗಂಟೆಗಳಲ್ಲಿ ೬ ಮಿ.ಮಿ. ವಾಡಿಕೆ ಮಳೆಯಾಗಬೇಕಿತ್ತು. ಆದರೆ ೬೬ ಮಿ.ಮೀ. ಮಳೆಯಾಗಿರುವುದರಿಂದ ತೊಂದರೆಯಾಗಿದೆ.
ಜಿಲ್ಲೆಯ ಐದು ತಾಲ್ಲೂಕುಗಳ ೫೧ ಗ್ರಾಮಗಳಲ್ಲಿ ನೀರು ನುಗ್ಗಿದೆ. ೨೬ ಕಾಳಜಿ ಕೇಂದ್ರ ೨೦೦೦ ಜನರಿಗೆ ಆಶ್ರಯ ನೀಡಲಾಗಿದೆ.
ಖಾನಾಪುರ ತಾಲ್ಲೂಕಿನಲ್ಲಿ ವಿದ್ಯುತ್ ಅಪಘಾತದಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಸೂಕ್ತ ಪರಿಹಾರ ನೀಡಲು ಕ್ರಮಕೈಗೊಳ್ಳಲಾಗುವುದು.
ಅದೇ ರೀತಿ ೨೨೩ ಮನೆಗಳಿಗೆ ಭಾಗಶಃ ಹಾನಿ; ಒಂದು ಮನೆ ಸಂಪೂರ್ಣ ಕುಸಿತವಾಗಿದೆ. ಮನೆಹಾನಿಗೂ ಸೂಕ್ತ ಪರಿಹಾರಕ್ಕೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳಿಗೆ ತಿಳಿಸಿದರು.
ರಸ್ತೆ ದುರಸ್ತಿಗೆ ೫೦ ಕೋಟಿ ಬಿಡುಗಡೆಗೆ ಮನವಿ:
ರಸ್ತೆ, ಕಟ್ಟಡಗಳು ಸೇರಿದಂತೆ ಮೂಲಸೌಕರ್ಯಗಳ ದುರಸ್ತಿಗೆ ಬೆಳಗಾವಿ ಉತ್ತರ ಕನ್ನಡ ಸೇರಿ ಲೋಕೋಪಯೋಗಿ ಇಲಾಖೆಗೆ ತಕ್ಷಣವೇ ೫೦ ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಬೇಕು ಎಂದು ಸಚಿವ ಗೋವಿಂದ ಕಾರಜೋಳ ಒತ್ತಾಯಿಸಿದರು.
ತುರ್ತು ಪರಿಸ್ಥಿತಿಯನ್ನು ಸಮರ್ಪಕವಾಗಿ ಬೆಳಗಾವಿ ಹಾಗೂ ಬಾಗಲಕೋಟೆಗೆ ತಲಾ ಇನ್ನೊಂದು ಎನ್.ಡಿ.ಆರ್.ಎಫ್ ತಂಡ ನಿಯೋಜಿಸಬೇಕು.
ಸದ್ಯಕ್ಕೆ ೯೫ ಸಾವಿರ ಕ್ಯುಸೆಕ್ ನೀರು ಘಟಪ್ರಭಾ ನದಿಗೆ ಹರಿದುಬರುತ್ತಿದ್ದು, ಇದರಿಂದ ಬಾಗಲಕೋಟೆಗೂ ಕೂಡ ಪ್ರವಾಹ ಭೀತಿ ಎದುರಾಗಿದೆ.
ಅತಿವೃಷ್ಟಿಯಿಂದ ಹಾನಿಗೊಳಗಾದ ರಸ್ತೆ ಮತ್ತಿತರ ಮೂಲಸೌಕರ್ಯಗಳ ದುರಸ್ತಿಗಾಗಿ ಲೋಕೋಪಯೋಗಿ ಇಲಾಖೆಗೆ ಸಾವಿರ ಕೋಟಿ ರೂಪಾಯಿ ಅನುದಾನದ ಅಗತ್ಯವಿದೆ ಎಂದು ಹೇಳಿದರು.
ಕಲ್ಲೋಳ ಬ್ಯಾರೇಜ್ ಕಾಮಗಾರಿಗೆ ಮಂಜೂರಾತಿ ನೀಡಲು ಮನವಿ:
ನಲವತ್ತು ವರ್ಷಗಳಷ್ಟು ಹಳೆಯದಾಗಿರುವ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬ್ಯಾರೇಜ್ ನಿರ್ಮಾಣಕ್ಕೆ ೩೫ ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಅನುಮೋದನೆ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು.
ನೀರಾವರಿ ನಿಗಮದ ಮಂಡಳಿ ಸಭೆಯಲ್ಲಿ ಈಗಾಗಲೇ ಕಲ್ಲೋಳ ಬ್ಯಾರೇಜ್ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದ್ದು, ಹಣಕಾಸು ಇಲಾಖೆಯ ಅನುಮೋದನೆ ಬಾಕಿ ಉಳಿದಿದೆ ಎಂದು ಅಧಿಕಾರಿಗಳು ವಿವರಿಸಿದರು.
ಹಣಕಾಸು ಇಲಾಖೆಯ ವತಿಯಿಂದ ಕೂಡ ತಕ್ಷಣವೇ ಮಂಜೂರಾತಿ ನೀಡಬೇಕು. ಅನುಮೋದನೆ ದೊರೆತರೆ ಅಕ್ಟೋಬರ್ ನಿಂದ ಕಾಮಗಾರಿ ಆರಂಭಿಸಲಾಗುವುದು ಎಂದು ಸಚಿವ ಕಾರಜೋಳ ತಿಳಿಸಿದರು.
ಬೆಳಗಾವಿ ಪ್ರವಾಹ ನಿರ್ವಹಣೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಳೆ ಕಡಿಮೆಯಾದರೆ ಸದ್ಯಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಒಂದು ವೇಳೆ ಮಳೆ ಮುಂದುವರಿದರೆ ಸ್ವಲ್ಪಮಟ್ಟಿಗೆ ತೊಂದರೆಯಾಗಲಿದೆ ಎಂದು ಸಚಿವ ಗೋವಿಂದ ಕಾರಜೋಳ ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಆಲಮಟ್ಟಿ ಜಲಾಶಯಕ್ಕೆ ಸದ್ಯಕ್ಕೆ ೧.೫೦ ಲಕ್ಷ ಕ್ಯೂಸೆಕ್ ಒಳಹರಿವು ಇದ್ದು, ಪ್ರವಾಹ ಪರಿಸ್ಥಿತಿ ಉದ್ಭವಿಸದಂತೆ ತಡೆಗಟ್ಟುವ ಉದ್ಧೇಶದಿಂದ ಮುಂಜಾಗ್ರತಾ ಕ್ರಮವಾಗಿ ೩ ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ.
ಮಹಾರಾಷ್ಟ್ರದಲ್ಲಿ ಮುಂದಿನ ಮೂರು ದಿನಗಳವರಗೆ ಮಳೆಯಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ವಿವರಿಸಿದರು.
ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಬೆಳಗಾವಿ ಪೊಲೀಸ್ ಆಯುಕ್ತರಾದ ಡಾ.ಕೆ.ತ್ಯಾಗರಾಜನ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆಯ ಆಯುಕ್ತರಾದ ಜಗದೀಶ್ ಮತ್ತಿತರರು ವಿಡಿಯೋ ಸಂವಾದದಲ್ಲಿ ಉಪಸ್ಥಿತರಿದ್ದರು.
ವ್ಯಾಪಕ ಮಳೆ: ಪ್ರವಾಹ ನಿರ್ವಹಣೆಗೆ ಎಲ್ಲಾ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಪ್ರವಾಹ ಹಾವಳಿ ಹೆಚ್ಚುತ್ತಿರುವ ಕಾರಣ ಜನ-ಜಾನುವಾರಗಳ ರಕ್ಷಣೆಗಾಗಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುವಂತೆ ಬೆಳಗಾವಿ ಜಿಲ್ಲಾ ಉಸ್ತವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರದು, ಔಷಧೋಪಚಾರದೊಂದಿಗೆ ಜನರ ಆರೋಗ್ಯ ಹಾಗೂ ಜಾನುವಾರುಗಳಿಗೆ ಆಹಾರ ವ್ಯವಸ್ಥೆಯನ್ನು ಮಾಡುವುದು ಹಾಗೂ ರಸ್ತೆ ಸೇತುವೆ ಹಾಳಾಗಿದ್ದರೆ ಕೂಡಲೇ ದುರಸ್ತಿ, ಕೆರೆ ಕಟ್ಟೆಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಿ, ಎಲ್ಲಾ ಕೆಲಸಗಳನ್ನೂ ಮುತುವರ್ಜಿಯಿಂದ ಅತ್ಯಂತ ಕಟ್ಟು ನಿಟ್ಟಾಗಿ ನಿರ್ವಹಿಸಬೇಕು.
ಈ ನಿಟ್ಟಿನಲ್ಲಿ ಸರಕಾರದ ವಿವಿಧ ಇಲಾಖೆಗಳ ಮೂಲಕ (ಆರೋಗ್ಯ, ಕಂದಾಯ, ಲೋಕೋಪಯೋಗಿ, ಪೊಲೀಸ್) ಜನರಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಮಾಡಬೇಕು ಹಾಗೂ ಜನರ ರಕ್ಷಣೆಯ ಜವಾಬ್ದಾರಿ ನಮ್ಮೆಲ್ಲರ ಕರ್ತವ್ಯ ಎಲ್ಲಾ ಅಧಿಕಾರಿಗಳಿಗೆ ಕರ್ತವ್ಯ ನಿರ್ವಹಿಸುವಂತೆ ಸೂಕ್ತ ಸೂಚನೆ ನೀಡುವದು ಹಾಗೂ ಕರ್ತವ್ಯಲೋಪ ಮಾಡುವಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಹಾಗೂ ಎಲ್ಲಾ ಕಾರ್ಯಗಳನ್ನು ಅತ್ಯಂತ ಜಾಗೂಕತೆಯಿಂದ ನಿರ್ವಹಿಸಬೇಕು ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಜಿಲ್ಲಾಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ.
ನದಿತೀರದ ಗ್ರಾಮಸ್ಥರ ಸ್ಥಳಾಂತರಕ್ಕೆ ಕ್ರಮ: ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ
ನೆರೆಯ ಮಹಾರಾಷ್ಟ್ರ ಹಾಗೂ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ವ್ಯಾಪಕ ಮಳೆಯಾಗುತ್ತಿರುವುದರಿಂದ ನದಿತೀರದ ಗ್ರಾಮಗಳ ಜನರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
ವೇದಗಂಗಾ ನದಿಯು ಅಪಾಯಮಟ್ಟದಲ್ಲಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ (ಜು.೨೩) ನಿಪ್ಪಾಣಿ ತಾಲ್ಲೂಕಿನ ಕೋಡಣಿ ಗ್ರಾಮ ಸೇರಿದಂತೆ ವಿವಿಧೆಡೆ ಭೇಟಿ ನೀಡಿ ಅವರು ಪರಿಶೀಲಿಸಿದರು.
ತುರ್ತು ಸಂದರ್ಭದಲ್ಲಿ ನದಿತೀರದ ಗ್ರಾಮಗಳ ಜನರ ಸ್ಥಳಾಂತರಕ್ಕೆ ಈಗಾಗಲೇ ಗುರುತಿಸಲಾಗಿರುವ ಕಾಳಜಿ ಕೇಂದ್ರಗಳಲ್ಲಿ ಜನರಿಗೆ ತಾತ್ಕಾಲಿಕ ಊಟೋಪಹಾರ ಹಾಗೂ ವಸತಿ ಸೌಕರ್ಯ ಕಲ್ಪಿಸಲಾಗಿದೆ.
ಕೆಲವು ಗ್ರಾಮಗಳ ಜನರು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ತೆರಳಿದ್ದು, ಕೆಲವು ಕುಟುಂಬಗಳು ತಮ್ಮ ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದುಕೊಂಡಿರುತ್ತಾರೆ. ಆದರೆ ಪ್ರವಾಹದಿಂದ ಬಾಧಿತಗೊಳ್ಳಬಹುದಾದ ನದಿತೀರದ ಎಲ್ಲ ಗ್ರಾಮಗಳ ಜನರ ಸ್ಥಳಾಂತರಕ್ಕೆ ಅನುಕೂಲವಾಗುವಂತೆ ಕಾಳಜಿ ಕೇಂದ್ರಗಳನ್ನು ಈಗಾಗಲೇ ಗುರುತಿಸಲಾಗಿದೆ.
ಯಾವುದೇ ಗ್ರಾಮಸ್ಥರು ಭಯಪಡುವ ಅಗತ್ಯವಿಲ್ಲ; ಪ್ರತಿ ತಾಲ್ಲೂಕು ಹಾಗೂ ಗ್ರಾಮಮಟ್ಟದಲ್ಲೂ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ತುರ್ತು ಸಂದರ್ಭದಲ್ಲಿ ಜನರು ಹಾಗೂ ಜಾನುವಾರುಗಳ ಸ್ಥಳಾಂತರಕ್ಕೆ ತಕ್ಷಣವೇ ಅವರು ಕ್ರಮ ಕೈಗೊಳ್ಳಲಿದ್ದಾರೆ.
ಎನ್.ಡಿ.ಆರ್.ಎಫ್ ಮತ್ತು ಎಸ್.ಡಿ.ಆರ್.ಎಫ್. ತಂಡಗಳು ಕೂಡ ಜಿಲ್ಲೆಯಲ್ಲಿ ಬೀಡು ಬಿಟ್ಟಿರುವುದರಿಂದ ಜನರ ರಕ್ಷಣೆಗೆ ಕ್ರಮ ಕೈಗೊಳ್ಳಲಿವೆ ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.
ಕೊಯ್ನಾ ಜಲಾಶಯ ವ್ಯಾಪ್ತಿಯಲ್ಲಿ ಇಂದು ಮಳೆಯ ಪ್ರಮಾಣ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಜಲಾಶಯಗಳಿಂದ ನಿರಂತರವಾಗಿ ನೀರು ಬಿಡುಗಡೆ ಮಾಡಲಾಗುತ್ತಿರುವುದರಿಂದ ಪ್ರವಾಹಭೀತಿ ಕಡಿಮೆಯಾಗುತ್ತಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿಗಳು ವೇದಗಂಗಾ ಸೇತುವೆ, ನಿಪ್ಪಾಣಿ ತಾಲ್ಲೂಕಿನ ಕೋಡಣಿ ಗ್ರಾಮ, ಮಮದಾಪುರ, ಸಂಕೇಶ್ವರ ಪಟ್ಟಣದ ಕುಂಬಾರ ಓಣಿ, ಮಠಗಲ್ಲಿ, ಶಂಕರಲಿಂಗ ದೇವಸ್ಥಾನದ ಬಳಿ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಿದರು.
ಇದಾದ ಬಳಿಕ ಚಿಕ್ಕೋಡಿ ತಾಲ್ಲೂಕಿನ ಮಾಂಜರಿ ಸೇತುವೆ ಬಳಿ ಕೃಷ್ಣಾ ನದಿ ಹರಿವು ವೀಕ್ಷಿಸಿದರು.
ಇದೇ ಸಂದರ್ಭದಲ್ಲಿ ಚಿಕ್ಕೋಡಿಯಲ್ಲಿ ಸಭೆ ನಡೆಸಿದ ಜಿಲ್ಲಾಧಿಕಾರಿ ಹಿರೇಮಠ ಅವರು, ಮಹಾರಾಷ್ಟ್ರ ಹಾಗೂ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿರುವುದರಿಂದ ಎಲ್ಲ ನೋಡಲ್ ಅಧಿಕಾರಿಗಳು ಸ್ಥಳದಲ್ಲಿಯೇ ಇದ್ದುಕೊಂಡು ಪರಿಸ್ಥಿತಿಯ ಮೇಲೆ ನಿಗಾವಹಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಚಿಕ್ಕೋಡಿ ಉಪ ವಿಭಾಗಾಧಿಕಾರಿ ಯುಕೇಶ್ ಕುಮಾರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಸೂಚನೆ
ಚರಂಡಿ ನೀರಿನಲ್ಲಿ, ಮನೆಗಳಲ್ಲಿ, ಟೈಯರ್ ಹಾಗೂ ಸಿಮೆಂಟಿನ ತೊಟ್ಟಿಯಲ್ಲಿ ವಾಸಿಸುವ ಸೊಳ್ಳೆಗಳಿಂದ ಡೆಂಗೀ ಚಿಕನ್ ಗುನ್ಯ ಗಳಂತಹ ರೋಗಗಳು ಹರಡದಂತೆ ತಡೆಗಟ್ಟಲು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿಗಳಾದ ಅಶೋಕ ದುಡಗುಂಟಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಭವನದಲ್ಲಿ ಶುಕ್ರವಾರ (ಜು.೨೩) ನಡೆದ ಡೆಂಗೀ ಮತ್ತು ಚಿಕುನ್ ಗುನ್ಯ ರೋಗವಾಹಕ ಸೊಳ್ಳೆಗಳ ನಿಯಂತ್ರಣ ಕಾರ್ಯಕ್ರಮದಲ್ಲಿ ಭಿತ್ತಿ ಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮನೆಯ ಸುತ್ತ ಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಹಾಗೂ ಬೇವಿನ ಹೊಗೆ ಹಾಕುವುದರಿಂದ ಸೊಳ್ಳೆಗಳನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗುತ್ತದೆ.
ಸಂಜೆ ವೇಳೆಯಲ್ಲಿ ಬೇವಿನ ಹೋಗೆ ಹಾಕುವದು ಸೊಳ್ಳೆ ಬತ್ತಿಗಳನ್ನು ಬಳಸುವದು, ಹಾಗೂ ಮನೆಯ ಸುತ್ತ ಮುತ್ತಲು ನೀರು ನಿಲ್ಲದಂತೆ ಗುಂಡಿಗಳನ್ನು ಮುಚ್ಚುವುದು, ಸೊಳ್ಳೆ ಪರದೆಗಳನ್ನು ಬಳಸುವದು ಮನೆಯ ಸುತ್ತ ಮುತ್ತಲಿನ ಪ್ರದೇಶದಲ್ಲಿ ನೈರ್ಮಲ್ಯ ಕಾಪಾಡುವುದು ಮತ್ತು ನೀರು ನಿಲ್ಲದಂತೆ ಮಾಡಿ
ಸೊಳ್ಳೆಗಳು ಉತ್ಪತ್ತಿ ಆಗದಂತೆ ಕ್ರಮವನ್ನು ಕೈಗೊಳ್ಳಬೇಕೆಂದು ಹೇಳಿದರು.
ಮಲೇರಿಯ ಚಿಕನ್ ಗುನ್ಯಾ, ಡೆಂಗ್ಯೂ ಮೆದುಳು ಜ್ವರ ಹಾಗೂ ಇನ್ನಿತರ ಸಾಂಕ್ರಾಮಿಕ ರೋಗಗಳು ಹರಡದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧ ಪಟ್ಟ ಇಲಾಖೆಯವರಿಗೆ ಸೂಚನೆ ನೀಡಿದರು.
ವಯೋವೃದ್ದರಲ್ಲಿ, ಮಕ್ಕಳಲ್ಲಿ ಹಾಗೂ ಗರ್ಭಿಣಿ ಸ್ತ್ರೀಯರಲ್ಲಿ ಡೆಂಗ್ಯೂ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿದ್ದು, ಇದಕ್ಕೆ ಮೂಲ ಕಾರಣ ಸೊಳ್ಳೆ ಆಗಿದ್ದು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು.
ಜಿಕಾ ವೈರಸ್ ಹಾಗೂ ಮಲೇರಿಯ ಚಿಕನ್ ಗುನ್ಯಾ, ಡೆಂಗ್ಯೂ ಮೆದುಳು ಜ್ವರ ಇವುಗಳಿಗೆ ಮೂಲ ಕಾರಣ ಸೊಳ್ಳೆಗಳಗಿದ್ದು ಸೊಳ್ಳೆಗಳ ನಿಯಂತ್ರಣದಿಂದ ಹಾಗೂ ಮುನ್ನೆಚ್ಚರಿಕಾ ಕ್ರಮಗಳಿಂದ ಈ ರೋಗಗಳನ್ನು ಬರದಂತೆ ಹರಡದಂತೆ ನಿಯಂತ್ರಿಸಬಹುದು ಎಂದು ಹೇಳಿದರು.
ಎಚ್.ಐ.ವಿ ರೋಗಿಗಳಿಗೆ ಕೋವಿಡ್-೧೯ ಪಾಸಿಟಿವ್ ಬಂದಿದ್ದು, ಅವರಿಗೆ ಅಗತ್ಯವಿರುವ ಔಷಧಿಗಳನ್ನು ಮನೆಗಳಿಗೆ ಕಳಿಸಿಕೋಡುವ ವ್ಯವಸ್ಥೆ ಮಾಡಲಾಗಿದೆ ಎಂದು ಅಶೋಕ ದುಡಗುಂಟಿ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಮುನ್ಯಾಳ, ರಾಜ್ಯ ತಂಬಾಕು ನಿಯಂತ್ರಣ ಘಟಕದ ವಿಭಾಗಿಯ ಸಂಯೋಜಕರಾದ ಮಹಾಂತೇಶ ಉಳ್ಳಾಗಡ್ಡಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ನಡುಗಡ್ಡೆಯಾದ ಖಾನಾಪುರದ 60 ಗ್ರಾಮಗಳು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ