Kannada NewsKarnataka NewsLatestNational

*ಪ್ರಾರ್ಥನೆಗೆ ಎದ್ದ ಸಹ ಪೈಲಟ್*: *ಕೆಲವೇ ನಿಮಿಷಗಳಲ್ಲಿ ಸ್ಮಿತ್ ಮಚ್ಚಾರ್ ಮೇಲೆ ಕೊಡಲಿಯಿಂದ ದಾಳಿ*

ಪ್ರಗತಿವಾಹಿನಿ ಸುದ್ದಿ: ಫ್ಲೈದುಬೈ FZ1073 ವಿಮಾನದಲ್ಲಿ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ನಡೆದ ದಾಳಿಯ ಮತ್ತಷ್ಟು ವಿವರಗಳು ಇದೀಗ ಬಹಿರಂಗವಾಗಿವೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆಗಿನ ಮಾತುಕತೆಯಲ್ಲಿ ಮಚ್ಚಾರ್, ದಾಳಿಗೂ ಮುನ್ನ ಕಾಕ್‌ಪಿಟ್‌ನಲ್ಲಿ ನಡೆದಿದ್ದ ಘಟನೆಗಳನ್ನು ವಿವರಿಸಿದ್ದಾರೆ.

ದುಬೈನಿಂದ ಟೆಲ್ ಅವಿವ್‌ಗೆ ತೆರಳುತ್ತಿದ್ದ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನ ಸಾಮಾನ್ಯವಾಗಿ ಹಾರಾಟ ನಡೆಸುತ್ತಿತ್ತು. ಈ ವೇಳೆ ಒಮಾನ್ ಮೂಲದ ಸಹ ಪೈಲಟ್ ಹಮಾಮ್ ಅಲ್-ಹಮ್ಮಾಮಿ ಪ್ರಾರ್ಥನೆ ಸಲ್ಲಿಸುವುದಾಗಿ ಹೇಳಿ ಎದ್ದು ನಿಂತಿದ್ದಾನೆ.

ಸಹ ಪೈಲಟ್‌ನ ಧಾರ್ಮಿಕ ಆಚರಣೆಗೆ ಗೌರವ ನೀಡಿದ ಮಚ್ಚಾರ್, ಹಿಂದಕ್ಕೆ ನೋಡದೆ ವಿಮಾನದ ಮುಂಭಾಗದತ್ತಲೇ ಗಮನ ಹರಿಸಿದ್ದರು. ಆದರೆ ಸುಮಾರು ನಾಲ್ಕೈದು ನಿಮಿಷಗಳ ಬಳಿಕ ತಲೆಯ ಹಿಂಭಾಗಕ್ಕೆ ಬಲವಾದ ಹೊಡೆತ ಬಿದ್ದಿದೆ ಎಂದು ಮಚ್ಚಾರ್ ನೆತನ್ಯಾಹುಗೆ ತಿಳಿಸಿದ್ದಾರೆ.

ಮೊದಲಿಗೆ ವಿಮಾನಕ್ಕೆ ಯಾವುದೋ ದೊಡ್ಡ ತಾಂತ್ರಿಕ ಸಮಸ್ಯೆ ಎದುರಾಗಿದೆ ಎಂದು ಮಚ್ಚಾರ್ ಭಾವಿಸಿದ್ದರು. ಆದರೆ ಸತತವಾಗಿ ಹೊಡೆತಗಳು ಬೀಳುತ್ತಿದ್ದಂತೆ, ವಿಮಾನದಲ್ಲಿ ಸಮಸ್ಯೆ ಆಗಿಲ್ಲ, ಕಾಕ್‌ಪಿಟ್‌ನಲ್ಲಿದ್ದ ಸಹ ಪೈಲಟ್‌ನೇ ದಾಳಿ ಮಾಡುತ್ತಿದ್ದಾನೆ ಎಂಬುದು ತಿಳಿಯಿತು ಎಂದು ವಿವರಿಸಿದ್ದಾರೆ.

ದಾಳಿಯಿಂದ ಮಚ್ಚಾರ್ ಅವರ ದೃಷ್ಟಿ ಮಸುಕಾಗಿತ್ತು. ವಿಮಾನವೂ ತೀವ್ರವಾಗಿ ಕೆಳಕ್ಕೆ ಇಳಿಯುತ್ತಿರುವುದು ಗೊತ್ತಾಯಿತು. ಈ ನಡುವೆ ಕಾಕ್‌ಪಿಟ್ ಬಾಗಿಲು ತೆರೆಯಲು ಮೊದಲ ಪ್ರಯತ್ನ ಮಾಡಿದ್ದು, ಸಹ ಪೈಲಟ್ ಬಾಗಿಲನ್ನು ಮತ್ತೆ ಮುಚ್ಚಿದ್ದ ಎಂದು ಮಚ್ಚಾರ್ ಹೇಳಿದ್ದಾರೆ.

ಗಂಭೀರವಾಗಿ ಗಾಯಗೊಂಡು ಕಾಕ್‌ಪಿಟ್‌ನ ನೆಲಕ್ಕೆ ಬಿದ್ದಿದ್ದರೂ ಮಚ್ಚಾರ್ ಕೊನೆಯ ಪ್ರಯತ್ನ ಕೈಬಿಡಲಿಲ್ಲ. “ನನ್ನೊಳಗೆ ಇನ್ನೂ ಒಂದು ಕೊನೆಯ ಹೋರಾಟ ಉಳಿದಿತ್ತು” ಎಂಬ ರೀತಿಯಲ್ಲಿ ವಿವರಿಸಿದ ಮಚ್ಚಾರ್, ಎಲ್ಲಾ ಶಕ್ತಿಯನ್ನು ಬಳಸಿ ಮತ್ತೆ ಕಾಕ್‌ಪಿಟ್ ಬಾಗಿಲಿನತ್ತ ತೆರಳಿ ಅದನ್ನು ತೆರೆದಿದ್ದಾರೆ.

ಬಾಗಿಲು ತೆರೆದ ತಕ್ಷಣ ಹೊರಗಿದ್ದ ಪ್ರಯಾಣಿಕರು ಕಾಕ್‌ಪಿಟ್‌ಗೆ ನುಗ್ಗಿ ಸಹ ಪೈಲಟ್‌ನನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂದಾದರು. ಬಳಿಕ ವಿಮಾನದಲ್ಲಿದ್ದ ಇಬ್ಬರು ಹೆಚ್ಚುವರಿ ಪೈಲಟ್‌ಗಳು ನಿಯಂತ್ರಣ ವಹಿಸಿಕೊಂಡು ವಿಮಾನವನ್ನು ಸ್ಥಿರಗೊಳಿಸಿದರು. ನಂತರ ಸೌದಿ ಅರೇಬಿಯಾದ ತಬೂಕ್‌ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಯಿತು.

ಇದೇ ವೇಳೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಚ್ಚಾರ್ ಜೊತೆ ದೂರವಾಣಿ ಮೂಲಕ ಮಾತನಾಡಿ ಆರೋಗ್ಯ ವಿಚಾರಿಸಿದ್ದಾರೆ. ಕಠಿಣ ಪರಿಸ್ಥಿತಿಯಲ್ಲೂ ತೋರಿದ ಧೈರ್ಯ ಮತ್ತು ಸಮಯಪ್ರಜ್ಞೆಯನ್ನು ನೆತನ್ಯಾಹು ಶ್ಲಾಘಿಸಿದ್ದಾರೆ. ಭಾರತ, ಇಸ್ರೇಲ್ ಹಾಗೂ ಇಡೀ ವಿಶ್ವದ ಪಾಲಿಗೆ ಮಚ್ಚಾರ್ ಹೀರೋ ಎಂದು ಬಣ್ಣಿಸಿದ್ದಾರೆ.

ಮುಂದಿನ ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರನ್ನು ಆಹ್ವಾನಿಸುವುದಾಗಿ ನೆತನ್ಯಾಹು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ದೀಪ ಬೆಳಗಿಸುವಂತೆ ಇಬ್ಬರನ್ನೂ ಆಹ್ವಾನಿಸುವುದಾಗಿ ಹೇಳಿದ್ದಾರೆ. ಘಟನೆಯ ಕುರಿತು ಯುಎಇ ಸೇರಿದಂತೆ ಹಲವು ದೇಶಗಳ ತನಿಖಾ ಸಂಸ್ಥೆಗಳು ತನಿಖೆ ಮುಂದುವರಿಸಿವೆ. ಯುಎಇ ತನಿಖಾಧಿಕಾರಿಗಳ ಪ್ರಕಾರ, ಸಹ ಪೈಲಟ್ ಕಾಕ್‌ಪಿಟ್‌ನ ಕ್ರ್ಯಾಶ್ ಆಕ್ಸ್ ಬಳಸಿ ಮಚ್ಚಾರ್ ಮೇಲೆ ದಾಳಿ ಮಾಡಿದ್ದಾನೆ. ದಾಳಿಯ ಉದ್ದೇಶ ಮತ್ತು ಇತರ ಸಂಪರ್ಕಗಳ ಕುರಿತು ತನಿಖೆ ಮುಂದುವರಿದಿದೆ.

*ಜನರಿಗೆ ನೆರವಾಗಲು ಪ್ರಜಾಸೇವೆ ಕಾರ್ಯಕ್ರಮದಲ್ಲಿ ಕಾನೂನು ನೆರವು ಕೇಂದ್ರ ಆರಂಭ: ಸಿಎಂ ಡಿ.ಕೆ ಶಿವಕುಮಾರ್* – Pragati Vahini

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button