
ವಿಜಯಪುರದಲ್ಲಿ ಹತ್ತು ವರ್ಷಗಳಲ್ಲೇ ಅತ್ಯಂತ ಕಡಿಮೆ ತಾಪಮಾನ ದಾಖಲು
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಮೈ ಕೊರೆವ ಚಳಿಗೆ ಜನರು ತತ್ತರಿಸುತ್ತಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಟ್ಟ ಮಂಜು ಹಾಗೂ ಚಳಿ ಅಬ್ಬರ ಜೋರಾಗಿದ್ದು, ಶೀತಗಾಳಿಯಿಂದಾಗಿ ಅನಾರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ.
ರಾಜ್ಯದ ಬಹುತೇಕ ಜಿಲೆಗಳಲ್ಲಿ ಭಾರಿ ಚಳಿ ಹೆಚ್ಚುತ್ತಿದ್ದು, ತಾಪಮಾನ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಉತ್ತರ ಕರ್ನಾಅಟಕ ಭಾಗದಲ್ಲಿ ಶೀತಗಾಳಿ ಆರಂಭವಾಗಿದ್ದು, ಇನ್ನೆರಡು ದಿನಗಳಲ್ಲಿ ಶೀತಗಾಳಿ ಇನ್ನಷ್ಟು ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಶೀತಗಾಳಿ ಹಿನ್ನೆಲೆಯಲ್ಲಿ 9 ಜಿಲ್ಲೆಗಳಲ್ಲಿ ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ, ಬೀದರ್, ಬಾಗಲಕೋಟೆ, ಕಲಬುರಗಿ, ರಾಯಚೂರು, ಯಾದಗಿರಿ, ವಿಜಯಪುರ, ಹಾವೇರಿ, ಕೊಪ್ಪಳ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರಿ ಶೀತಗಾಳಿ ಬೀಸಲಿದ್ದು ಆರೇಂಜ್ ಅಲರ್ಟ್ ಘೋಷಿಸಲಾಗಿದೆ.
ಈ ಜಿಲ್ಲೆಗಳಲ್ಲಿ ತಾಪಮಾನ ದಿಢೀರ್ ಕುಸಿತವಾಗಿದೆ. ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಅತಿ ಕಡಿಮೆ ತಾಪಮಾನ ದಾಖಲಾಗಿದೆ. ವಿಜಯಪುರದಲ್ಲಿ 7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕಳೆದ ಹತ್ತು ವರ್ಷಗಳಲ್ಲೇ ಇದು ಅತ್ಯಂತ ಕಡಿಮೆ ತಾಪಮಾನವಾಗಿದೆ. ಇನ್ನೆರಡು ದಿನಗಳಲ್ಲಿ ತಾಪಮಾನ ಇನ್ನಷ್ಟು ಕುಸಿಯಲಿದ್ದು 9 ಡಿಗ್ರಿ ಸೆಲ್ಸಿಯಸ್ ಗೆ ಕುಸಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಲರ್ಟ್ ಘೋಷಿಸಿದೆ.




