Kannada NewsKarnataka NewsLatest

*ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ನಿಂದ ಕಲೆಕ್ಷನ್; ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ*

ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ನಿಂದ ಕಲೆಕ್ಷನ್; ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯನ್ನು ಬೆಂಗಳೂರು ನಗದಾಭಿವೃದಿ ಇಲಾಖೆ ಎಂದು ಟೀಕಿಸಿದ ಮಾಜಿ ಸಿಎಂ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು ನಗರಾಭಿವೃದ್ಧಿ ಇಲಾಖೆಯನ್ನು ‘ಬೆಂಗಳೂರು ನಗದಾಭಿವೃದಿ ಇಲಾಖೆ ಎಂದು ಟೀಕಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು; ಕೈಗಾರಿಕೆ ಇಲಾಖೆಯಲ್ಲಿ ಬಿಡಿಎಗೆ ಏನು ಕೆಲಸ ಎಂದು ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿ ಸರ್ಕಾರಕ್ಕೆ ಟಾಂಗ್ ಕೊಟ್ಟಿರುವ ಅವರು; ತೆಲಂಗಾಣ ಚುನಾವಣೆಗೆ ರಾಜ್ಯದಲ್ಲಿ ಹಣ ಸಂಗ್ರಹ ಮಾಡಿದಂತೆ, ಲೋಕಸಭೆ ಚುನಾವಣೆಗೂ ವಸೂಲಿ ಶುರುವಾಗಿದೆ. ಇದು ಕಲೆಕ್ಷನ್ ಸರ್ಕಾರ ಎಂದು ಆರೋಪಿಸಿದ್ದಾರೆ.

‘ಬೆಂಗಳೂರು ನಗದಾಭಿವೃದ್ಧಿ’ ಇಲಾಖೆಯು ನಗದು ಅಭಿವೃದ್ಧಿಗೆ ಸಿಕ್ಕಸಿಕ್ಕ ಕಡೆ ಸುಲಿಗೆಗೆ ಇಳಿದಿದೆ. ದಂಧೆಗೆ ಯಾವ ಹುಲ್ಲುಗಾವಲಾದರೇನು? ಹೈಕಮಾಂಡ್ ಗೆ ಕಪ್ಪ ಸಲ್ಲಿಸಬೇಕೆಂದು ಹಾದಿಬೀದಿಯಲ್ಲಿ ಹೇಳಿಕೊಂಡು ಸಿಕ್ಕಿದ ಕಡೆಯೆಲ್ಲಾ ವಸೂಲಿ ಮಾಡಲಾಗುತ್ತಿದೆ ಎಂದು ಅವರು ದೂರಿದ್ದಾರೆ.

ಕೈಗಾರಿಕೆ, ಉದ್ಯಮ ಚಟುವಟಿಕೆಗೆ ಒಪ್ಪಿಗೆ ಕೊಡಲು KIADB ಇದೆ. ಏಕಗವಾಕ್ಷಿ ವ್ಯವಸ್ಥೆ ಅಡಿಯಲ್ಲಿ ಪ್ರಕ್ರಿಯೆ ನಿರಾತಂಕವಾಗಿ ನಡೆಯುತ್ತಿದೆ. ಅದಕ್ಕೂ ಮುನ್ನ ಉನ್ನತಮಟ್ಟದ ಹೂಡಿಕೆ ಅನುಮೋದನೆ ಸಮಿತಿ ಒಪ್ಪಿಗೆಯನ್ನೂ ಕೊಡುತ್ತದೆ. ಇಷ್ಟೆಲ್ಲ ಇದ್ದ ಮೇಲೆ ಇಲ್ಲಿ BDA ಕೆಲಸ ಏನು? ಯಾರ ಕಿಸೆ ಭರ್ತಿ ಮಾಡಲಿಕ್ಕೆ BDA ಇಂಥ ಅಡ್ಡದಾರಿ ತುಳಿದಿದೆ? ಎಂದು ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವರ್ತನೆಯನ್ನು ಕಟುವಾಗಿ ಟೀಕಿಸಿದ್ದಾರೆ.

ಬೆಂಗಳೂರು ವ್ಯಾಪ್ತಿಯಲ್ಲಿ ತನ್ನ ಅನುಮೋದನೆ ಇಲ್ಲದೆ ಉದ್ಯಮ ಪಾರ್ಕ್ ರಚನೆ, ಅಭಿವೃದ್ಧಿ, ಕೈಗಾರಿಕಾ ಸಮುಚ್ಚಯಗಳ ನಿರ್ಮಾಣ ಮಾಡಬಾರದು ಎಂದು BDA ಫರ್ಮಾನು ಹೊರಡಿಸಿರುವುದು ಬೆಂಗಳೂರು ‘ನಗದಾಭಿವೃದ್ಧಿ’ ಇಲಾಖೆ ಕೈಚಳಕ, ಅನುಮಾನವೇ ಇಲ್ಲ. ತೆಲಂಗಾಣ ಎಲೆಕ್ಷನ್ ಗೆ ಕಲೆಕ್ಷನ್ ಮಾಡಿದಂತೆ ಈಗ ಲೋಕಸಭೆ ಚುನಾವಣೆಗೆ ವಸೂಲಿ ಶುರುವಾಗಿದೆ ಎಂದು ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button