Kannada NewsKarnataka News

7 ಪ್ರಮುಖ ಸುದ್ದಿಗಳ ಸಂಗ್ರಹ

ಸ್ಮಾರ್ಟಸಿಟಿ: ೮ ತರಗತಿ ಕೊಠಡಿಗಳು ಸಿದ್ದ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :  ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್ ನಗರದ ೧೧ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್‌ರೂಂಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಇವುಗಳನ್ನು ೨ ಹಂತಗಳಲ್ಲಿ ಅಭಿವೃದ್ಧಿ ಪಡಿಸುತ್ತಿದ್ದು, ಮೊದಲನೇ ಹಂತದಲ್ಲಿ ೮ ತರಗತಿ ಕೊಠಡಿಗಳನ್ನು ಬೆಳಗಾವಿ ದಕ್ಷಿಣ ಮತ್ತು ಬೆಳಗಾವಿ ಉತ್ತರದ ಕ್ಷೇತ್ರಗಳಲ್ಲಿ ಅಭಿವೃದ್ಧಿ ಪಡಿಸಲಾಗಿದೆ.
ಬೇಡಿಕೆಯ ಆಧಾರದ ಮೇಲೆ ಇನ್ನೂ ೩ ಶಾಲೆಗಳಲ್ಲಿ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದೆ ಎಂದು ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್ ಹಿರಿಯ ಸಾಮಾಜಿಕ ಅಭಿವೃದ್ಧಿ ಆಧಿಕಾರಿಗಳು ತಿಳಿಸಿದ್ದಾರೆ.
ಬೆಳಗಾವಿ ಸ್ಮಾರ್ಟ್ ಸಿಟಿಯು ೨೦ ಗಣಕಯಂತ್ರಗಳು, ಪಿಠೋಪಕರಣಗಳು ಮತ್ತು ಒಂದು ಇ-ಲೈಬ್ರರಿಯನ್ನು ಒದಗಿಸಲಾಗಿದೆ.
ಈ ಸ್ಮಾರ್ಟ್ ತರಗತಿ ಕೊಠಡಿಗಳು ೮ ಶಾಲೆಗಳಲ್ಲಿ ಸಿದ್ದವಾಗಿದ್ದು ವಿದ್ಯಾರ್ಥಿಗಳು ಉಪಯೋಗಿಸುತ್ತಿದ್ದಾರೆ.  ಎರಡನೇ ಹಂತದ ಕಾಮಗಾರಿಗಳು ಒಂದು ವಾರದಲ್ಲಿ ಸಂಪೂರ್ಣಗೊಳ್ಳಲಿವೆ.

ಈ ಶಾಲೆಗಳನ್ನು ವಿದ್ಯಾರ್ಥಿಗಳ ಸಂಖ್ಯಾ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ. ಏಕೆಂದರೆ ಬಹಳಷ್ಟು ವಿದ್ಯಾರ್ಥಿಗಳು ಈ ಸ್ಮಾರ್ಟ್ ತರಗತಿ ಕೊಠಡಿಯ ಲಾಭವನ್ನು ಪಡೆಯಬೇಕು .ಈಗಾಗಲೇ ಧನಾತ್ಮಕ ಬೆಳವಣಿಗೆಯು ಈ ಸ್ಮಾರ್ಟ್ ತರಗತಿ ಕೊಠಡಿಯಿರುವ ಶಾಲೆಯಲ್ಲಿ ಕಂಡುಬಂದಿದೆ. ಅಲ್ಲದೆ ಶಾಲೆ ಬಿಡುವ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಹಲವಾರು ಶಾಲೆಗಳ ಪ್ರಾಂಶುಪಾಲರುಗಳು ನಮ್ಮನ್ನು ಸಂಪರ್ಕಿಸುತ್ತಿದ್ದಾರೆ. ಆದ್ದರಿಂದ ಈ ಯೋಜನೆಯನ್ನು ಲಭ್ಯವಿರುವ ಅನುದಾನದ ಮೇಲೆ ವಿಸ್ತರಿಸಲಾಗುವುದೆಂದು ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ.
ಮೊದಲನೇ ಹಂತದಲ್ಲಿ ಚಿಂತಾಮಣರಾವ್ ಶಾಲೆ ಶಹಾಪೂರ,  ವಡಗಾಂವ ಬೆಳಗಾವಿ,   ಭಾರತನಗರ ಖಾಸಭಾಗ, ಸರ್ದಾರ ಹೈಸ್ಕೂಲ ಚವಾಟಗಲ್ಲಿ,  ಖಾಸಭಾಗ,  ಮಹಾಂತೇಶ ನಗರ, ಮರಾಠಿ ಶಾಲೆ ನಂ-೫ ವಡಗಾಂವಿ,  ಹಳೆ ಬೆಳಗಾವಿ-ಬೆಳಗಾವಿಯ ಶಾಲೆಗಳು ಸ್ಮಾರ್ಟ್ ಕ್ಲಾಸ್‌ರೂಂ ಗಳನ್ನು ಹೊಂದಿವೆ.
ಎರಡನೇ ಹಂತದಲ್ಲಿ ಶಾಲೆ ನಂ-೩೩ ವಂಟಮೂರಿ ಬೆಳಗಾವಿ, ಉರ್ದು ಶಾಲೆ ಖಂಜರಗಲ್ಲಿ, ಸರ್ಕಾರಿ ಶಾಲೆ ವಿಶ್ವೇಶ್ವರಯ್ಯಾ ನಗರ ಬೆಳಗಾವಿಯ ಶಾಲೆಗಳು ಸ್ಮಾರ್ಟ್ ಕ್ಲಾಸ್‌ರೂಂ ಗಳನ್ನು ಹೊಂದಲಿವೆ ಎಂದು ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್ ಹಿರಿಯ ಸಾಮಾಜಿಕಅಭಿವೃದ್ಧಿ ಆಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ. ೨೩ ರವರೆಗೆ ಎಸ್.ಸಿ.ವಿ.ಟಿ ಪರೀಕ್ಷೆ

ಜಿಲ್ಲೆಯಲ್ಲಿನ ೪ ಉಪ ಪರೀಕ್ಷಾ ಕೇಂದ್ರಗಳಲ್ಲಿ ಎಸ್.ಸಿ.ವಿ.ಟಿ ಪರೀಕ್ಷೆಯು ಸೆಪ್ಟೆಂಬರ ೨೩ರ ವರೆಗೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ.ಎಸ್.ಬೊಮ್ಮನಹಳ್ಳಿ ಅವರು ತಿಳಿಸಿದ್ದಾರೆ. ಸದರಿ ಪರೀಕೆಗಳು ಸುಗಮವಾಗಿ ನಡೆಸಲು ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಒಬ್ಬರು ವಿಕ್ಷಕರನ್ನು ನೇಮಿಸುವುದು ಅತಿ ಅವಶ್ಯಕವಾಗಿದೆ.
ವೀಕ್ಷಕರೆಂದು ನೇಮಿಸಲಾದ ಅಧಿಕಾರಿಗಳು ಪರೀಕ್ಷಾ ವೇಳಾ ಪಟ್ಟಿಯಂತೆ ಪರೀಕ್ಷೆ ನಡೆಯುವ ಸಮಯಕ್ಕೆ ಸರಿಯಾಗಿ ಉಪಸ್ಥಿತರಿದ್ದು, ಆನ್‌ಲೈನ್ ಮೂಲಕ ಉಪ ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆ ಪತ್ರಿಕೆಯನ್ನು ಡೌನಲೋಡ್ ಮಾಡಿ ಝೇರಾಕ್ಸ್ ಮಾಡುವ ಸಮಯದಲ್ಲಿ ವಿಡಿಯೋ ಚಿತ್ರಿಕರಣ ಜರುಗಿಸಲು ಅಧೀಕ್ಷರಿಗೆ ತಿಳಿಸುವುದು ಎಂದು ಜಿಲ್ಲಾಧಿಕಾರಿಗಳಾದ ಡಾ.ಎಸ್.ಬೊಮ್ಮನಹಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನದಡಿ ಅರ್ಜಿ ಆಹ್ವಾನ

ಕೃಷಿ ಇಲಾಖೆಯಿಂದ ಅನುಷ್ಠಾನಗೊಳಸುತ್ತಿರುವ ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನ-ಮಳೆಯಾಶ್ರಿತ ಪ್ರದೇಶ ಅಭಿವೃಧ್ಧಿ  ಯೋಜನೆಯಡಿ ಬೆಳಗಾವಿ ಜಿಲ್ಲೆಯ ಆಯ್ದ ಪ್ರದೇಶದ ಗ್ರಾಮಗಳಿಗೆ ರೈತರಿಂದ ಅರ್ಜಿ ಅಹ್ವಾನಿಸಲಾಗಿದೆ.
ಬೆಳಗಾವಿ ತಾಲ್ಲೂಕಿನ ಚಂದಗಡ ಗ್ರಾಮ, ಖಾನಾಪೂರ ತಾಲ್ಲೂಕಿನ ಸೋರಾಪೂರ, ಭಾಗ್ಯನಗರ, ಚಿಕ್ಕೋಡಿ ತಾಲ್ಲೂಕಿನ ದುಳಗನವಾಡಿ, ಬೈಲಹೊಂಗಲ ತಾಲ್ಲೂಕಿನ ಅಮಟೂರ, ಅಥಣಿ ತಾಲ್ಲೂಕಿನ ಕನ್ನಾಳ ಗ್ರಾಮ, ಗೋಕಾಕ ತಾಲ್ಲೂಕಿನ ಕಳ್ಳಿಗುದ್ದಿ ಗ್ರಾಮ, ಹುಕ್ಕೇರಿ ತಾಲ್ಲೂಕಿನ ಗೋಟುರ ಗ್ರಾಮ, ರಾಯಬಾಗ ತಾಲ್ಲೂಕಿನ ಜೋಡಟ್ಟಿ ಗ್ರಾಮ, ರಾಮದುರ್ಗ ತಾಲ್ಲೂಕಿನ ಕಲ್ಲೂರ ಗ್ರಾಮ, ಸವದತ್ತಿ ತಾಲ್ಲೂಕಿನ ಹಳಕಟ್ಟಿ ಗ್ರಾಮಗಳಲ್ಲಿ ಒಂದೇ ಭೂ ಪ್ರದೇಶದಲ್ಲಿ ಗುಚ್ಚ ಮಾದರಿಯಲ್ಲಿ ಉಪಚಾರಗಳನ್ನು ಕೈಕೊಳ್ಳಬೇಕಾಗಿದೆ.
ಆದ್ದರಿಂದ ತೋಟಗಾರಿಕೆ ಮಿಶ್ರ ಬೆಳೆಗಳ ಆಧಾರಿತ ಪಧ್ಧತಿಗಳನ್ನು ಅಳವಡಿಸಿದಲ್ಲಿ ಪ್ರತಿ ಫಲಾನುಭವಿಗಳ ಕುಟುಂಬಕ್ಕೆ ಗರಿಷ್ಠ ೨ ಹೇಕ್ಟರ ಪ್ರದೇಶದವರಿಗೆ ಸಹಾಯಧನ ನೀಡಲಾಗುವುದು. ಈ ಯೋಜನೆಯಡಿ ಘಟಕ ವೆಚ್ಚವು ಹೆಕ್ಟೇರಗೆ ಗರಿಷ್ಠ ರೂ. ೫೦,೦೦೦ ಇದ್ದು, ಇದರಲ್ಲಿ ಘಟಕ ವೆಚ್ಚದ ಶೇ ೫೦ ಅಥವಾ ಹೆಕ್ಟೇರಗೆ ಗರಿಷ್ಠ ರೂ. ೨೫೦೦೦ ಸಹಾಯಧನ ನೀಡಲು ಅವಕಾಶವಿರುತ್ತದೆ.
ಆಸಕ್ತ ರೈತರು ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರ ತಾಲ್ಲೂಕ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಬೆಳಗಾವಿ ಕೃಷಿ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಸಂಪರ್ಕಿಸಬೇಕೇಂದು ತೋಟಗಾರಿಕೆ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ತಂಬಾಕಿನಿಂದಾಗುವ ದುಷ್ಪರಿಣಾಮದ ಬಗ್ಗೆ ತರಬೇತಿ 

ಆರೋಗ್ಯ ಇಲಾಖೆಯ ವೃತ್ತಿಪರರಿಗೆ  ತಂಬಾಕು ಹಾಗೂ ತಂಬಾಕಿನಿಂದಾಗುವ ದುಷ್ಪರಿಣಾಮದ ಬಗ್ಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಸೆಪ್ಟೆಂಬರ್ ೧೯ ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಜಿಲ್ಲಾ ಸಲಹೆಗಾರರು ಡಾ. ಶ್ವೇತಾ ಪಾಟೀಲ ತಂಬಾಕು ಹಾಗೂ ತಂಬಾಕಿನಿಂದಾಗುವ ದುಷ್ಪರಿಣಾಮದ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನು ಮಾತನಾಡಿದರು ಕಾರ್ಯಾಗಾರಕ್ಕೆ ಮುಖ್ಯ ಅಥಿತಿಗಳಾಗಿ ಆರ್‌ಎಲ್ ಕಾಲೇಜ್ ನಿವೃತ್ತ ಪ್ರಾಂಶುಪಾಲರು  ಪ್ರೋ. ಡಿ. ವಾಯ್.ಕುಲಕರ್ಣಿ ಕಾರ್ಯಾಗಾರ ಉದ್ಘಾಟಿಸಿದರು.
ಅತಿಥಿಗಳಾಗಿ ಆಗಮಿಸಿದ ಬೆಳಗಾವಿ ಹಿರಿಯ ಪ್ರಯೋಗ ಶಾಲಾ ತಂತ್ರಜ್ಞರು ಎಸ್.ಯಫ್ ಕತ್ತಿಶೆಟ್ಟರ ಸಿಗರೇಟ್ ಸೇವನೆಯಿಂದ ನಮ್ಮ ಆರೋಗ್ಯ ಹಾಳಾಗುವುದಲ್ಲದೆ ಇನ್ನೊಬ್ಬರ ಆರೋಗ್ಯವು ಕೂಡಾ ಹಾಳಾಗುತ್ತದೆ. ನಾವೆಲ್ಲರೊ ಕೂಡಾ ಪರೋಕ್ಷವಾಗಿ ತಂಬಾಕು ಸೇವನೆಗೆ ಒಳಗಾಗುತ್ತಿದ್ದೇವೆಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಪ್ರೋ. ಡಿ. ವಾಯ್.ಕುಲಕರ್ಣಿ, ತಂಬಾಕಿನ ಕಾನೂನು ಅರಿವು ಕೋಟ್ಪಾ-೨೦೦೩ ರ ಬಗ್ಗೆ ಸೆಕ್ಷನ್-೪ ರ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಮಾಡಲಾಗಿದೆ. ಈ ಕಾನೂನು ಉಲ್ಲಂಘಿಸಿದ ವ್ಯಕ್ಕಿಗೆ ರೂ ೨೦೦ ದಂಡ ವಿಧಿಸಲಾಗುವುದು.
ಸೆಕ್ಷನ್-೫ ಪ್ರಕಾರ ತಂಬಾಕು ಉತ್ಪನ್ನಗಳ ನೇರ ಹಾಗೂ ಪರೋಕ್ಷ ಜಾಹೀರಾತು ನಿಷೇಧ, ಸೆಕ್ಷನ್-೬ರ ಪ್ರಕಾರ ತಂಬಾಕು ಉತ್ಪನ್ನಗಳ ಅಪ್ರಾಪ್ತ ವಯಸ್ಕರಿಗೆ ನಿಯಂತ್ರಣ ಮಾಡುವುದು ಹಾಗೂ ಸೆಕ್ಷನ್-೬(ಬಿ) ಪ್ರಕಾರ ಶಿಕ್ಷಣ ಸಂಸ್ಥೆಗಳ ೧೦೦ ಮೀಟರ್ ಒಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ. ಸೆಕ್ಷನ್-೭ ಪ್ರಕಾರ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಮೇಲೆ ನಿರ್ಧಿಷ್ಡ ಆರೋಗ್ಯ ಎಚ್ಚರಿಕೆಗಳ ಸಂದೇಶಗಳಿಲ್ಲದೆ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ತಿಳಿಸಿ ಕೋಟ್ಪಾ ಕಾಯ್ದೆಯ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಕೆ.ಎಲ್.ಇ ದಂತ ವೈದ್ಯಕೀಯ ಮಹಾ ವಿದ್ಯಾಲಯದ ಉಪ ಪ್ರಾಂಶುಪಾಲರಾದ ಡಾ. ಅಂಜನಾ ಬಾಗೇವಾಡಿ ಇವರು ತಂಬಾಕು ಸೇವನೆಯಿಂದ ಬಾಯಿ ಕ್ಯಾನ್ಸರ ಕುರಿತು ಪಿಪಿಟಿ ಮೂಲಕ ಉಪನ್ಯಾಸ ನೀಡಿದರು.
ಈ ತರಬೇತಿ ಕಾರ್ಯಾಗಾರದಲ್ಲಿ ಆರೋಗ್ಯ ಇಲಾಖೆಯ ವೃತ್ತಿಪರರು ಹಾಜರಿದ್ದರು. ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಮಾಜ ಕಾರ್ಯಕರ್ತೆಯಾದ  ಕವಿತಾ ರಾಜನ್ನವರ ನಿರೂಪಿಸಿದರು.

ರೈತ ಉತ್ಪಾದಕ ಸಂಸ್ಥೆಗಳನ್ನು ರಚಿಸಲು ಸಲಹೆ

ದೊಡ್ಡ ದೊಡ್ಡ ಹಿಡುವಳಿ ಇದ್ದದ್ದು ಈಗ ಸಣ್ಣ ಹಾಗೂ ಅತಿ ಸಣ್ಣ ಹಿಡುವಳಿಗೆ ಪರಿವರ್ತನೆಯಾಗಿದ್ದು, ಆ ರೈತರಿಗೆ ಆದಾಯ ಹೆಚ್ಚಿಸಲು ರೈತ ಉತ್ಪಾದಕ ಸಂಸ್ಥೆಗಳನ್ನು ಪ್ರಾರಂಭಿಸುವದು ಇಂದಿನ ಅವಶ್ಯಕತೆ ಆಗಿದೆ ಎಂದು ಕೃಷಿ ವಿಶ್ವವಿದ್ಯಾಲಯ ಧಾರವಾಡದ ವಿಸ್ತರಣಾ ನಿರ್ದೇಶಕರಾದ ಡಾ. ರಮೇಶ ಬಾಬು ಅವರು ಹೇಳಿದರು.

ಬೆಳಗಾವಿ ಜಂಟಿ ಕೃಷಿ ನಿರ್ದೇಶಕರ ಮುಖ್ಯ ಸಭಾಂಗಣದಲ್ಲಿ ಜರುಗಿದ ಜಿಲ್ಲೆಯ ಕೃಷಿ ಮತ್ತು ವಿವಿಧ ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳು ಹಾಗೂ ಆತ್ಮ ಸಿಬ್ಬಂದಿಗೆ ರೈತ ಉತ್ಪಾದಕ ಸಂಸ್ಥೆಗಳ ರಚನೆ ಕುರಿತು ಏರ್ಪಡಿಸಲಾದ ಒಂದು ದಿನದ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.
ಆತ್ಮ ಯೋಜನೆಯ ನಿರ್ದೇಶಕರಾದ ಎಚ್. ಡಿ. ಕೋಳೇಕರ ಅವರು ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ರೈತರು ಬೆಳೆದ ಉತ್ಪಾದನೆಗೆ ಒಳ್ಳೆಯ ಬೆಲೆ ಸಿಗಲು ರೈತ ಉತ್ಪಾದಕ ಸಂಸ್ಥೆಗಳಿಂದ ಸಹಾಯವಾಗಬಹುದು ಎಂದು ತಿಳಿಸಿ ತರಬೇತಿಯ ಸದುಪಯೋಗ ಪಡೆಯಲು ತಿಳಿಸಿದರು.
ಉಪ ಕೃಷಿ ನಿರ್ದೇಶಕರಾದ ಸಲೀಂ ಸಂಗತ್ರಾಸ ಮಾತನಾಡಿ ರೈತ ಆಸಕ್ತಿ ಗುಂಪು, ಆಹಾರ ಭದ್ರತಾ ಗುಂಪು ಸೇರಿಸಿ, ರೈತ ಉತ್ಪಾದಕ ಸಂಸ್ಥೆಗಳನ್ನು ರಚಿಸಲು ಆಸಕ್ತಿ ತೋರಬೇಕೆಂದು ಹೇಳಿದರು.
ತೋಟಗಾರಿಕೆ ಉಪ ನಿದೇಶಕರಾದ ರವೀಂದ್ರ ಹಕಾಟಿ ಅವರು ಬೆಳಗಾವಿ ಜಿಲ್ಲೆಯಲ್ಲಿ ತೋಟಗಾರಿಕೆಯಲ್ಲಿ ರೈತ ಉತ್ಪಾದಕ ಸಂಸ್ಥೆ ರಚಿಸಿದ ಬಗ್ಗೆ ಹಾಗೂ ರೇಷ್ಮೆ ಉಪ ನಿರ್ದೇಶಕರಾದ ಎನ್. ಡಿ. ನಾಯಕ ಅವರು ರೇಷ್ಮೆ ರೈತ ಉತ್ಪಾದಕರ ಸಂಸ್ಥೆ ರಚಿಸಿದ ಬಗ್ಗೆ ವಿವರವಾಗಿ ತಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಾದ ಜಿಲಾನಿ ಎಚ್. ಮೊಕಾಶಿ ಅವರು, ಬೇಡಿಕೆ ಅನುಗುಣವಾಗಿ ಕ್ರಮ, ಉತ್ಪಾದಕಗಳ ಕುರಿತು ಪ್ರಚಾರ ಮಾಡುವದು, ಹಾಗೂ ಸಮಾನ ಮನಸ್ಕ ರೈತರು ಭಾಗವಹಿಸುವದರಿಂದ ರೈತ ಉತ್ಪಾದಕರ ಸಂಸ್ಥೆಯು ಒಂದು ಉತ್ತಮ ಕಂಪನಿಯಾಗಲು ಸಾಧ್ಯವೆಂದು ಹೇಳಿದರು.
ತೋಟಗಾರಿಕೆ ಇಲಾಖೆಯ ಗಿರಿಧರ ಜಾಧವ ವಿವಿಧ ರೈತ ಉತ್ಪಾದಕರ ಕಂಪನಿಗಳಿಂದ ಮಹೇಶ ಬಾವಿಕಟ್ಟಿ ,  ಸದಲಗೆ, ಮಹಾದೇವ ಶಿದ್ನಾಳ, ಕೃಷಿ ವಿಶ್ವವಿದ್ಯಾಲಯದ ಡಾ. ಗೋಪಾಲ ಹಾಗೂ ಡಾ. ಚನ್ನಾಳ, ಭಾವಹಿಸಿದ್ದರು. ಉಪಯೊಜನಾ ನಿರ್ದೇಶಕರಾದ ಆರ್. ಡಿ. ಕಟಗಲ್ಲ ಹಾಗೂ ಎಮ. ಸಿ. ಮಠದ ತರಬೇತಿ ನಡೆಸಿಕೊಟ್ಟರು. ಕೃಷಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಆತ್ಮ ಸಿಬ್ಬಂದಿಗಳು ತರಬೇತಿ ಪಡೆದರು.

ಸೆಪ್ಟೆಂಬರ್ ೨೨ ರಂದು ವಿದ್ಯುತ್ ನಿಲುಗಡೆ

ಹುವಿಸಕಂನಿ ವತಿಯಿಂದ ೧೧೦ ಕೆ.ವ್ಹಿ. ಹೊನಗಾ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಸದರಿ ಉಪಕೇಂದ್ರದಿಂದ ಸರಬರಾಜು ಆಗುವ ಹೊನಗಾ ಔದ್ಯೋಗಿಕ ಕ್ಷೇತ್ರಗಳಿಗೆ ಸೆಪ್ಟೆಂಬರ ೨೨ ರಂದು ಬೆಳಿಗ್ಗೆ ೯ ಗಂಟೆಯಿಂದ ಸಾಯಂಕಾಲ ೬ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ.೨೨ ರಿಂದ ಬೆಳಗಾವಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟ

೨೦೧೯-೨೦ನೇ ಸಾಲಿನ ಬೆಳಗಾವಿ ವಿಭಾಗದ ದಸರಾ ಕ್ರೀಡಾಕೂಟದ ಸ್ಪರ್ಧೆಗಳನ್ನು ಸೆಪ್ಟೆಂಬರ ೨೨ ರಿಂದ ಗದಗ, ಬಾಗಲಕೋಟೆ, ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಏರ್ಪಡಿಸಲಾಗಿದೆ.
ಆಯಾ ಜಿಲ್ಲೆಗಳಲ್ಲಿ ಸಂಘಟಿಸಲಾದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಗಳಲ್ಲಿ ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ವಿಜೇತರು ಮಾತ್ರ ಭಾಗವಹಿಸಲು ಅರ್ಹರಾಗಿರುತ್ತಾರೆ.
ಸೆಪ್ಟೆಂಬರ ೨೨ ರಂದು ಗದಗ ಜಿಲ್ಲೆಯ ಕೆ. ಎಚ್. ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಕುಸ್ತಿ ಸೆ.೨೨ ರಂದು ವರದಿ ಮಾಡಿಕೊಳ್ಳಬೇಕು, ಸೆಪ್ಟೆಂಬರ ೨೪ ರಂದು ಅಥ್ಲೆಟಿಕ್ಸ್, ಖೋಖೋ, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ ಸೆ.೨೪ ರಂದು ವರದಿ ಮಾಡಿಕೊಳ್ಳಬೇಕು, ಗದಗ ಕಳಸಾಪೂರ ರಸ್ತೆ, ಒಳಾಂಗಣ ಕ್ರಿಡಾಂಗಣದಲ್ಲಿ ಸೆಪ್ಟೆಂಬರ ೨೫ ರಂದು ಕಬಡ್ಡಿ, ಟೇಕ್ವಾಂಡೋ, ನೆಟ್‌ಬಾಲ್ ಸ್ಪರ್ಧೆಗಳು ನಡೆಯಲಿವೆ, ಸೆ.೨೫ ರಂದು ಬೆಳಿಗ್ಗೆ ೯ ಗಂಟೆಯೊಳಗೆ ವರದಿ ಮಾಡಿಕೊಳ್ಳಬೇಕು.
ಸೆಪ್ಟೆಂಬರ ೨೪ ರಿಂದ ೨೫ ರ ವರೆಗೆ ಬಾಗಲಕೋಟೆ ಜಿಲ್ಲೆಯ ನವನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಫುಟಬಾಲ್, ಬಾಸ್ಕೇಟಬಾಲ್, ಹಾಕಿ, ಹ್ಯಾಂಡಬಾಲ್, ಸೈಕ್ಲಿಂಗ್, ವುಶು, ಫೆನ್ಸಿಂಗ್, ಬಾಲ್ ಬ್ಯಾಡ್ಮಿಂಟನ್, ಥ್ರೋಬಾ ಸ್ಪರ್ಧೆಗಳು ನಡೆಯಲಿವೆ, ಸೆ.೨೩ ರಂದು ಸಂಜೆ ೪ ಗಂಟೆಯೊಳಗೆ ವರದಿ ಮಾಡಿಕೊಳ್ಳಬೇಕು.
ಸೆಪ್ಟೆಂಬರ ೨೪ ರಿಂದ ೨೫ ರ ವರೆಗೆ ಬೆಳಗಾವಿ ಜಿಲ್ಲೆಯ ನೆಹರುನಗರ ಜಿಲ್ಲಾ ಕ್ರೀಡಾಂಗಣದಲ್ಲಿ ವಾಲಿಬಾಲ್, ಜುಡೋ, ಈಜು, ಟೆನ್ನಿಸ್, ಆರ್ಚರಿ, ಬಾಕ್ಸಿಂಗ್, ಭಾರ ಎತ್ತುವುದು ಸ್ಪರ್ಧೆಗಳು ನಡೆಯಲಿವೆ, ಸೆ.೨೪ ರಂದು ಬೆಳಿಗ್ಗೆ ೯ ಗಂಟೆಯೊಳಗೆ ವರದಿ ಮಾಡಿಕೊಳ್ಳಬೇಕು.
ಸೆಪ್ಟೆಂಬರ ೨೪ ರಿಂದ ೨೫ ರ ವರೆಗೆ ಧಾರವಾಡ ಜಿಲ್ಲೆಯ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಜಿಮ್ನಾಸ್ಟಿಕ್ ಸ್ಪರ್ಧೆ ನಡೆಯಲಿದೆ, ಸೆ.೨೪ ರಂದು ಬೆಳಿಗ್ಗೆ ೯ ಗಂಟೆಯೊಳಗೆ ವರದಿ ಮಾಡಿಕೊಳ್ಳಬೇಕು.
ಅರ್ಹ ಕ್ರೀಡಾಪಟುಗಳು ವಿವಿಧ ಜಿಲ್ಲೆಗಳಲ್ಲಿ ಆಯೋಜಿಸಲಾಗಿರುವ ವಿಭಾಗ ಮಟ್ಟದ ದಸರಾ ಕ್ರೀಡಾಕೂಟಗಳಲ್ಲಿ ಭಾಗವಹಿಸುವಂತೆ ಬೆಳಗಾವಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button