
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಪಾಕ್ ಉಗ್ರರ 9 ಅಡಗುತಾಣವನ್ನು ಧ್ವಂಸ ಮಾಡಿದ್ದು, ಈ ಮಾಹಿತಿಯನ್ನು ಹಂಚಿಕೊಂಡಿದ್ದ ಇಬ್ಬರು ಮಹಿಳಾ ಅಧಿಕಾರಿಗಳ ಪೈಕಿ ಓರ್ವ ಮಹಿಳಾ ಅಧಿಕಾರಿ ಕರ್ನಾಟಕದ ಸೊಸೆ ಎಂಬುವುದು ಹೆಮ್ಮೆಯ ಸಂಗತಿ.
ಮಂಗಳವಾರ ತಡರಾತ್ರಿ ಭಾರತೀಯ ಸೇನೆಯು ಪಾಕ್ ನ ಉಗ್ರರ ಅಡಗುತಾಣದ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಈ ಬಗ್ಗೆ ರಕ್ಷಣಾ ಸಚಿವಾಲಯ ಬೆಳಗ್ಗೆ 10 ಗಂಟೆಗೆ ಪತ್ರಿಕಾಗೋಷ್ಠಿ ಕರೆದಿತ್ತು. ಈ ಸುದ್ದಿಗೋಷ್ಠಿಯನ್ನು ಕರ್ನಲ್ ಸೋಫಿಯಾ ಖುರೇಶಿ ಹಾಗೂ ವಾಯುಪಡೆಯ ವಿಂಗ್ ಕಮಾಂಡರ್ ವೋಮಿಕಾ ಸಿಂಗ್ ನಡೆಸಿದ್ದರು.
ಈ ಇಬ್ಬರು ಮಹಿಳಾ ಅಧಿಕಾರಿಗಳ ಪೈಕಿ ಕರ್ನಲ್ ಸೋಫಿಯಾ ಖುರೇಶಿ ಅವರು ಕರ್ನಾಟಕದ ಬೆಳಗಾವಿ ಜಿಲ್ಲೆಯ ಸೊಸೆ ಎಂಬುವುದು ಗೊತ್ತಾಗಿದೆ. ಅಲ್ಲದೇ ಸೋಫಿಯಾ ಪತಿ ಕೂಡ ಭಾರತೀಯ ಸೇನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸೋಫಿಯ ಪತಿ ಹೆಸರು, ತಾಜುದ್ದೀನ್ ಬಾಗೇವಾಡಿ ಇವರು ಮೂಲತಃ ಗೋಕಾಕಿನ ಕೊಣ್ಣೂರು ನಿವಾಸಿಯಾಗಿದ್ದು, ಭಾರತೀಯ ಸೇನೆಯಲ್ಲಿ ಇಬ್ಬರು ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 2015ರಲ್ಲಿ ಇಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ. ಸದ್ಯ ಸೋಫಿಯಾ ಜಮ್ಮುನಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದು, ಪತಿ ತಾಜುದ್ದೀನ್ ಜಾನ್ಸಿ ಅಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.