ಸಂತ್ರಸ್ತರಿಗೆ ಸಾಂತ್ವನ; ಅಧಿಕಾರಿಗಳ ತುರ್ತು ಸಭೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಶುಕ್ರವಾರ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಹಲವಾರು ಹಳ್ಳಿಗಳಿಗೆ ಭೇಟಿ ನೀಡಿ ಪ್ರವಾಹ ಸಂತ್ರಸ್ತರ ಕಣ್ಣೀರು ಒರೆಸುವ ಪ್ರಯತ್ನ ಮಾಡಿದರು.
ನಂದಿಹಳ್ಳಿ, ರಾಜಹಂಸಗಡ, ಹಿರೇಬಾಗೇವಾಡಿ ಮೊದಲಾದ ಪ್ರದೇಶಕ್ಕೆ ಭೇಟಿ ನೀಡಿ, ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಮನೆಗಳನ್ನು ಕಳೆದುಕೊಂಡವರಿಗೆ ಸಾಂತ್ವನ ಹೇಳಿ ಪರಿಹಾರ ನೀಡುವ ಭರವಸೆ ನೀಡಿದರು.
ನಂದಿಹಳ್ಳಿ ಗ್ರಾಮದ ವಯೋವೃದ್ಧರೊಬ್ಬರು ಮನೆಯನ್ನು ಕಳೆದುಕೊಂಡು ಕಣ್ಣೀರು ಹಾಕುವ ದೃಷ್ಯ ಎಂತವರ ಕರುಳು ಕಿತ್ತು ಬರುವಂತಿತ್ತು. ಹಿರೆಬಾಗೇವಾಡಿಯಲ್ಲಿ ಮಹಿಳೆಯೊಬ್ಬಳು ಬಿದ್ದು ಹೋಗಿರುವ ಮನೆಯನ್ನು ತೋರಿಸಿ ಅಳುತ್ತಿದ್ದಳು. ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಎಲ್ಲವನ್ನೂ ಪರಿಶೀಲಿಸಿ, ಅವರಿಗೆಲ್ಲ ಧೈರ್ಯ್ ಹೇಳಿ, ಸಾಂತ್ವನ ಹೇಳಿದರು. ಆದಷ್ಟು ಶೀಘ್ರ ಎಲ್ಲರಿಗೂ ಪರಿಹಾರ ನೀಡುವ ವ್ಯವಸ್ಥೆ ಮಾಡುವುದಾಗಿ ಅವರು ಭರವಸೆ ನೀಡಿದರು.
ಕಾಂಗ್ರೆಸ್ ಮುಖಂಡ ಚನ್ನರಾಜ ಹಟ್ಟಿಹೊಳಿ ಸಹ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ನೊಂದವರಿಗೆ ಸಾಂತ್ವನ ಹೆಳಿದರು. ಸಂಪೂರ್ಣ ಗ್ರಾಮೀಣ ಕ್ಷೇತ್ರದ ನಷ್ಟದ ಅಂದಾಜು ತಯಾರಿಸಲಾಗುತ್ತಿದ್ದು, ಪರಿಹಾರಕ್ಕಾಗಿ ಸರಕಾರಕ್ಕೆ ಶಿಫಾರಸ್ಸು ಮಾಡುವ ತಯಾರಿ ನಡೆಸಲಾಗುತ್ತಿದೆ ಎಂದು ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದ್ದಾರೆ.
ಅಧಿಕಾರಿಗಳ ತುರ್ತು ಸಭೆ
ಇಂದು ಸಂಜೆ ಅಧಿಕಾರಿಗಳ ತುರ್ತು ಸಭೆ ನಡೆಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ದಿನದ 24 ಗಂಟೆಯೂ ಸಂತ್ರಸ್ತರ ಕಣ್ಣೀರೊರೆಸುವ ಕೆಲಸ ಮಾಡುವಂತೆ ಕರೆ ನೀಡಿದರು.
ಪ್ರವಾಹದಿಂದಾಗಿ ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. ಅವರ ಕಷ್ಟಕ್ಕೆ ಎಲ್ಲರೂ ಸ್ಪಂದಿಸಬೇಕು. ಜೊತೆಗೆ ನಷ್ಟದ ಅಂದಾಜು ಪಟ್ಟಿ ತಯಾರಿಸಿ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸೂಚಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ