Kannada NewsKarnataka NewsLatest

*ಅನುಕಂಪದ ಸರ್ಕಾರಿ ಹುದ್ದೆಗೆ ನೇಮಕಾತಿ ಪತ್ರ ವಿತರಣೆ*

ಪ್ರಾಮಾಣಿಕ ಸರ್ಕಾರಿ ಸೇವೆ ಸಲ್ಲಿಸಲು ಸಚಿವ ಜಾರಕಿಹೊಳಿ ಸಲಹೆ


ಪ್ರಗತಿವಾಹಿನಿ ಸುದ್ದಿ; ಹುಕ್ಕೇರಿ: ಪ್ರಾಮಾಣಿಕ ಮತ್ತು ದಕ್ಷ ಸೇವೆಯಿಂದ ಸರ್ಕಾರಕ್ಕೆ ಉತ್ತಮ ಹೆಸರು ತಂದುಕೊಡಬೇಕು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಸಲಹೆ ನೀಡಿದರು.


ಬೆಂಗಳೂರಿನ ಕರ್ನಾಟಕ ರಸ್ತೆ ಅಭಿವೃದ್ಧಿ (ಕೆಆರ್‌ಡಿಸಿಎಲ್) ನಿಗಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅನುಕಂಪದ ಆಧಾರದ ಮೇಲೆ ಸರ್ಕಾರಿ ಹುದ್ದೆಗೆ ನೇಮಕಗೊಂಡವರಿಗೆ ಸ್ಥಳ ನಿಯುಕ್ತಿಯೊಂದಿಗೆ ನೇಮಕಾತಿ ಪತ್ರ ವಿತರಿಸಿ ಅವರು ಮಾತನಾಡಿದರು.


ಹೊಸದಾಗಿ ಸರ್ಕಾರಿ ಹುದ್ದೆಗೆ ನೇಮಕಗೊಂಡವರು ಸೇವಾವಧಿಯಲ್ಲಿ ಉತ್ತಮ ಕಾರ್ಯ ನಿರ್ವಹಿಸಬೇಕು. ಸರ್ಕಾರ ಮತ್ತು ಇಲಾಖೆಗೆ ಒಳ್ಳೆಯ ಹೆಸರು ತಂದುಕೊಡಬೇಕು. ಸರ್ಕಾರದ ಯೋಜನೆಗಳು ಎಲ್ಲರಿಗೂ ತಲುಪುವಂತೆ ಕಾರ್ಯನಿರ್ವಹಿಸಬೇಕು ಎಂದು ಅವರು ಕಿವಿಮಾತು ಹೇಳಿದರು.

ಒಂದೂವರೆ ವರ್ಷದಿಂದ ಬಾಕಿ ಉಳಿದಿದ್ದ ಲೋಕೋಪಯೋಗಿ ಇಲಾಖೆಯಲ್ಲಿ ಸೇವಾನಿರತ ನೌಕರರ ಮೃತಪಟ್ಟ 22 ಮಕ್ಕಳಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಆದೇಶ ಪತ್ರ ವಿತರಿಸಲಾಗಿದೆ. ಇನ್ನೂ ಬಾಕಿ ಉಳಿದ ಪ್ರಕರಣವನ್ನೂ ಶೀಘ್ರವೇ ಇತ್ಯರ್ಥ ಪಡಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.


ಪಿಡಬ್ಲ್ಯೂಡಿ ಅಪರ ಮುಖ್ಯ ಕಾರ್ಯದರ್ಶಿ ಡಾ.ಸೆಲ್ವಕುಮಾರ, ಮುಖ್ಯ ಅಭಿಯಂತರ ದುರ್ಗಪ್ಪ, ಉಪ ಮುಖ್ಯ ಅಭಿಯಂತರ ಕೃಷ್ಣಾ ಅಗ್ನಿಹೋತ್ರಿ, ಸಚಿವರ ವಿಶೇಷ ಕರ್ತವ್ಯ ಅಧಿಕಾರಿ ವಿ.ಎನ್.ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button