*ಮೈಸೂರಿನಲ್ಲಿ ಸಂವಿಧಾನ ದಿನಾಚರಣೆಗೆ ಪೈಪೋಟಿ*: *ಯತೀಂದ್ರ–ಮಹದೇವಪ್ಪ ನಡುವೆ ಮುಸುಕಿನ ಗುದ್ದಾಟ?*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರು ಕೆಳಗಿಳಿದ ಬಳಿಕ ಮೈಸೂರು ಜಿಲ್ಲಾ ರಾಜಕಾರಣದಲ್ಲಿ ಹಿಡಿತ ಸಾಧಿಸುವ ವಿಚಾರವಾಗಿ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಮತ್ತು ಶಾಸಕ ಎಚ್.ಸಿ. ಮಹದೇವಪ್ಪ ನಡುವೆ ಪೈಪೋಟಿ ಆರಂಭವಾಗಿದೆ ಎಂಬ ಚರ್ಚೆ ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ನವೆಂಬರ್ 26ರಂದು ನಡೆಯಲಿರುವ ಸಂವಿಧಾನ ದಿನಾಚರಣೆ ಕಾರ್ಯಕ್ರಮದ ವಿಚಾರದಲ್ಲಿ ಇಬ್ಬರ ನಡುವೆ ಭಿನ್ನ ಕಾರ್ಯತಂತ್ರ ರೂಪುಗೊಂಡಿದೆ.
ಮೈಸೂರಿನಲ್ಲಿ ಎಚ್.ಸಿ. ಮಹದೇವಪ್ಪ ಅವರ ನೇತೃತ್ವದಲ್ಲಿ ನವೆಂಬರ್ 26ರಂದು ರಾಜ್ಯಮಟ್ಟದ ಸಂವಿಧಾನ ದಿನಾಚರಣೆ ಆಯೋಜಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಅವರು ದಲಿತ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಸಿದ್ಧತೆ ನಡೆಸುತ್ತಿದ್ದಾರೆ. ಮತ್ತೊಂದೆಡೆ, ರಾಜ್ಯ ಸರ್ಕಾರದ ವತಿಯಿಂದ ನಡೆಯುವ ಸಂವಿಧಾನ ದಿನಾಚರಣೆಯನ್ನು ಮೈಸೂರಿನಲ್ಲೇ ಆಯೋಜಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಯತೀಂದ್ರ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಸಭೆ ನಡೆದಿದ್ದು, ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು ಹಾಗೂ ಶಾಸಕರು ಭಾಗವಹಿಸಿದ್ದರು. ಸಚಿವರಾದ ಕೆ.ಎಚ್. ಮುನಿಯಪ್ಪ, ಎನ್. ಚಲುವರಾಯಸ್ವಾಮಿ, ಪಿ.ಎಂ. ನರೇಂದ್ರಸ್ವಾಮಿ, ಪುಟ್ಟರಂಗಶೆಟ್ಟಿ, ಯು.ಟಿ. ಖಾದರ್ ಹಾಗೂ ಶಾಸಕರಾದ ಟಿ.ಡಿ. ರಾಜೇಗೌಡ, ರಮೇಶ್ ಬಂಡಿಸಿದ್ದೇಗೌಡ, ರವಿಕುಮಾರ್ ಗಣಿಗ, ತಮ್ಮಯ್ಯ, ಕದಲೂರು ಉದಯ್, ದರ್ಶನ್ ಧ್ರುವನಾರಾಯಣ್ ಮತ್ತು ಹರೀಶ್ ಗೌಡ ಸಭೆಯಲ್ಲಿ ಉಪಸ್ಥಿತರಿದ್ದರು.
ಆದರೆ, ಮೈಸೂರಿನವರೇ ಆಗಿರುವ ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್ ಮತ್ತು ತನ್ವೀರ್ ಸೇಠ್ ಸಭೆಗೆ ಗೈರಾಗಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಸಭೆಯ ಕುರಿತು ಪ್ರತಿಕ್ರಿಯಿಸಿದ ಯತೀಂದ್ರ ಸಿದ್ದರಾಮಯ್ಯ, ಇದು ಉಪಾಹಾರ ಸಭೆಯಲ್ಲ. ನವೆಂಬರ್ 26ರಂದು ಸರ್ಕಾರದ ವತಿಯಿಂದ ಸಂವಿಧಾನ ದಿನಾಚರಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸಚಿವರು ಮತ್ತು ಶಾಸಕರ ಸಭೆ ಕರೆದು ಚರ್ಚೆ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಮಹದೇವಪ್ಪ ಅವರು ಆಯೋಜಿಸಿರುವ ಸಂವಿಧಾನ ದಿನಾಚರಣೆ ಕಾರ್ಯಕ್ರಮದ ಕುರಿತು ಕೇಳಿದ ಪ್ರಶ್ನೆಗೆ, ನವೆಂಬರ್ 26ರಂದು ಮೈಸೂರಿನಲ್ಲಿ ಅವರು ಕಾರ್ಯಕ್ರಮ ಹಮ್ಮಿಕೊಂಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಉತ್ತರಿಸಿದರು.
ಇನ್ನು, ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರು ಕೆಳಗಿಳಿದ ಬಳಿಕ ಅವರ ಆಪ್ತ ಬಳಗದಲ್ಲಿದ್ದ ಕೆಲವು ನಾಯಕರು ಅಂತರ ಕಾಯ್ದುಕೊಂಡಿದ್ದಾರೆ ಎಂಬ ಚರ್ಚೆಯೂ ನಡೆಯುತ್ತಿದೆ. ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಮಹದೇವಪ್ಪ, ಕೆ. ವೆಂಕಟೇಶ್ ಮತ್ತು ತನ್ವೀರ್ ಸೇಠ್ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ಅಲ್ಲದೆ, ಮೈಸೂರು ಜಿಲ್ಲೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರೊಬ್ಬರೇ ಸಚಿವರಾಗಿದ್ದು, ಅವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಸಿಗುವಂತೆ ಸಿದ್ದರಾಮಯ್ಯ ನೋಡಿಕೊಂಡಿದ್ದಾರೆ ಎಂಬುದು ಕೆಲವು ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



