

ಎಂ.ಕೆ.ಹೆಗಡೆ, ಬೆಳಗಾವಿ – ಕೇವಲ 3-4 ದಿನಗಳ ಮೊದಲು ಹೇಳಕೇಳುವವರಿಲ್ಲ ಎನ್ನುವಂತಿದ್ದ ಬೆಳಗಾವಿಯ ಆನಗೋಳ ಬಡಾವಣೆ ಈಗ ರಾಜಕೀಯ ಜಾತ್ರೆಯಾಗಿ ಮಾರ್ಪಟ್ಟಿದೆ.
ರಾಜ್ಯದ ರಾಜಕೀಯ ದಿಗ್ಗಜರೆಲ್ಲ ಆನಗೋಳಕ್ಕೆ ಲಗ್ಗೆ ಇಡುತ್ತಿದ್ದಾರೆ. ಅಲ್ಲಿ ತಟಸ್ಥವಾಗಿ ನಿಂತಿರುವ ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವ ಸಂಗೊಳ್ಳಿ ರಾಯಣ್ಣನ ಕೃಪಾಶಿರ್ವಾದ ಪಡೆಯಲು ಪರಸ್ಪರ ಪೈಪೋಟಿ ನಡೆಸಿದ್ದಾರೆ.
ಆನಗೋಳ ಬೆಳಗಾವಿಯ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಹಿಂದುಳಿದಿರುವ ಒಂದು ಪ್ರದೇಶ. ಇಲ್ಲಿ ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಆರ್ಥಿಕವಾಗಿ ಬಡ- ಮಧ್ಯಮ ವರ್ಗಕ್ಕೆ ಸೇರಿದವರೇ ಹೆಚ್ಚು. ಆದರೆ ಇಲ್ಲಿನವರ ಹೃದಯ ವೈಶಾಲ್ಯ ಅತ್ಯಂತ ದೊಡ್ಡದು. ಕನ್ನಡಾಭಿಮಾನಕ್ಕೆ ಮೇರೆಯೇ ಇಲ್ಲ. ಕಿತ್ತೂರು, ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಎಂದರೆ ಇಲ್ಲಿನ ಯುವಕರ ಮೈ ರೋಮಗಳೆಲ್ಲ ಸೆಟೆದು ನಿಲ್ಲುತ್ತದೆ.
ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ಸೇರಿದಂತೆ ಯಾವುದೇ ಕನ್ನಡ ಕಾರ್ಯಕ್ರಮವಿರಲಿ ಪಾಲ್ಗೊಳ್ಳುವಿಕೆಯಲ್ಲಿ ಆನಗೋಳ ಯುವಕರದ್ದೇ ಸಿಂಹ ಪಾಲು. ಅಲ್ಲಿನ ಯುವಕರೆಲ್ಲ ಸೇರಿ ಕೆಲವು ವರ್ಷಗಳ ಹಿಂದೆ ಸಂಗೊಳ್ಳಿ ರಾಯಣ್ಣ ಸೇನೆ ಕಟ್ಟಿಕೊಂಡಿದ್ದಾರೆ. ಸಂಗೊಳ್ಳಿ ರಾಯಣ್ಣನ ಪುತ್ಥಳಿಯೊಂದನ್ನು ಮಾಡಿಟ್ಟುಕೊಂಡು ಯಾವುದೇ ಕಾರ್ಯಕ್ರಮಗಳಿರಲಿ ಆ ಪುತ್ಥಳಿಯೊಂದಿಗೆ ತೆರಳಿ ಮೆರವಣಿಗೆ, ಪೂಜೆ ನಡೆಸುತ್ತಾರೆ.
ಆ ಪುತ್ಥಳಿಯನ್ನು ಯುವಕರೊಬ್ಬರ ಮನೆಯ ಮುಂದೆ ನಿಲ್ಲಿಸಿಡಲಾಗಿತ್ತು. ಸಂಗೊಳ್ಳಿ ರಾಯಣ್ಣನ ಪುತ್ಥಳಿಯೊಂದನ್ನು ಶಾಶ್ವತವಾಗಿ ಆನಗೋಳದಲ್ಲಿ ಸ್ಥಾಪಿಸಬೇಕೆನ್ನುವ ಕನಸನ್ನು ಯುವಕರು ಕಾಣುತ್ತಲೇ ಇದ್ದರು. ಆದರೆ ಆರ್ಥಿಕವಾಗಿ ಸಹಾಯ ಸಿಗದ್ದರಿಂದ ಕನಸು ಹಾಗೆಯೇ ಉಳಿದಿತ್ತು.
ದುಷ್ಕರ್ಮಿಗಳ ಕಣ್ಣು
ಡಿ.18ರ ಬೆಳಗಿನಜಾವ ಇದ್ದಕ್ಕಿದ್ದಂತೆ ಸದ್ದಾಯಿತು. ನಾಗೇಶ್ ಮಾಲ್ತೋಡೆ ಎನ್ನುವ ಯುವಕ ಎದ್ದು ನೋಡಿದರೆ ದುಷ್ಕರ್ಮಿಗಳು ಮನೆ ಎದುರಿದ್ದ ಸಂಗೊಳ್ಳಿ ರಾಯಣ್ಣನ ಪುತ್ಥಳಿಗೆ ರಾಡ್ ನಿಂದ ಹೊಡೆಯುತ್ತಿದ್ದರು ನಾಗೇಶ್ ಜೋರಾಗಿ ಕೂಗಿದಾಗ ದುಷ್ಕರ್ಮಿಗಳು ಅಲ್ಲಿಂದ ಪಲಾಯನಗೌದರು. ನಾಲ್ವರು ಯುವಕರಿದ್ದರು., ಅವರ ಕೈಯಲ್ಲಿ ಮಾರಕಾಸ್ತ್ರಗಳಿದ್ದವು ಎನ್ನುವತ್ತಾರೆ ನಾಗೇಶ್.
ಹತ್ತಿರ ಹೋಗಿ ನೋಡಲಾಗಿ ರಾಯಣ್ಣನ ಕೈಯಲ್ಲಿದ್ದ ಖಡ್ಗ, ಡಾಲ್ ಕೆಳಗೆ ಬಿದ್ದಿತ್ತು. ಮುಖವೆಲ್ಲ ವಿರೂಪವಾಗಿತ್ತು. ತಕ್ಷಣ ಸುತ್ತಲಿನ ಯುವಕರನ್ನೆಲ್ಲ ಕೂಗಿ, ಪೊಲೀಸರಿಗೂ ಸುದ್ದಿ ಮುಟ್ಟಿಸಿದರು. ಜನ ಸೇರತೊಡಗಿದರು. ಪೊಲೀಸರು ಸ್ಥಳಕ್ಕೆ ಬಂದು ಎಲ್ಲರಿಗೂ ಶಾಂತಿಯ ಮಂತ್ರ ಪಠಿಸಿ ರಾಯಣ್ಣ ಪುತ್ಥಳಿಯನ್ನು ಎತ್ತಿಕೊಂಡು ಹೋದರು.
ಯುವಕರೆಲ್ಲ ಟಿಳಕವಾಡಿ ಪೊಲೀಸ್ ಠಾಣೆಯತ್ತ ಧಾವಿಸಿದರು. ಯಾರೂ ತಾಳ್ಮೆ ಕಳೆದುಕೊಳ್ಳಬಾರದು. ದುಷ್ಕರ್ಮಿಗಳನ್ನು ಶೀಘ್ರ ಬಂಧಿಸಲಾಗುವುದು. ರಾಯಣ್ಣ ಪುತ್ಥಳಿಯನ್ನು ಮೊದಲಿದ್ದಂತೆ ಮಾಡಿ, ಗ್ರಾಮದಲ್ಲಿ ಪ್ರತಿಷ್ಠಾಪಿಸಲು ಅವಕಾಶ ಮಾಡಿಕೊಡಲಾಗುವುದು ಎನ್ನುವ ಭರವಸೆಯನ್ನು ಪಡೆದು ಅಲ್ಲಿಂದ ತೆರಳಿದರು.
ಅದರಂತೆ ಪೊಲೀಸರು ಸಿದ್ಧಪಡಿಸಿಕೊಟ್ಟ ಪುತ್ಥಳಿಯನ್ನು ಪೂಜೆಯೊಂದಿಗೆ, ಹಬ್ಬದ ವಾತಾವರಣದಲ್ಲಿ ಭಾನುವಾರ ಪ್ರತಿಷ್ಠಾಪನೆಯನ್ನೂ ಮಾಡಲಾಯಿತು.
ರಾಜಕಾರಣಿಗಳ ದಂಡು
ರಾಯಣ್ಣ ಪುತ್ಥಳಿಗೆ ಅವಮಾನ ಮಾಡಿರುವ ಸುದ್ದಿ ರಾಜ್ಯಾದ್ಯಂತ ಕಾಡ್ಗಿಚ್ಚಿನಂತೆ ಹರಡಿತು. ಎಲ್ಲೆಡೆ ಪ್ರತಿಭಟನೆ, ಖಂಡನೆ ವ್ಯಕ್ತವಾಯಿತು ಬೆಳಗಾವಿಯಲ್ಲೇ ನಡಯುತ್ತಿರುವ ವಿಧಾನ ಮಂಡಳದ ಅಧಿವೇಶನದಲ್ಲಿ ಆಕ್ರೋಶದ ಚರ್ಚೆಯೂ ನಡೆಯಿತು. ರಾಯಣ್ಣನ ಪುತ್ಥಳಿಯನ್ನು ಭಾನುವಾರ ಪ್ರತಿಷ್ಠಾಪನೆ ಮಾಡಿರುವ ಸುದ್ದಿಯೂ ಹರಡಿತು.

ಅಲ್ಲಿಂದ ರಾಜಕಾರಣಿಗಳು ಜಾಗ್ರತರಾದರು. ಆನಗೋಳವನ್ನು ಹುಡುಕಿಕೊಂಡು ಬರತೊಡಗಿದರು. ಅಪರಿಚಿತವಾಗಿದ್ದ ಪ್ರದೇಶ ಒಮ್ಮೆಲೆ ಪ್ರಸಿದ್ಧಿಪಡೆಯಿತು. ಮಾಜಿ ಮುಖ್ಯಮಂತ್ರಿ, ಹಾಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೋಮವಾರ ಸ್ಥಳಕ್ಕೆ ಧಾವಿಸಿ, ರಾಯಣ್ಣ ಪುತ್ಥಳಿಗೆ ಮಾಲೆ ಹಾಕಿ ಕೈ ಮುಗಿದರು. ಸರಕಾರದ ವಿರುದ್ಧ ಒಂದಿಷ್ಟು ಆೋಪಗಳನ್ನು ಮಾಡಿ, ಸ್ಥಳೀಯ ಯುವಕರ ಅಹವಾಲುಗಳನ್ನು ಆಲಿಸಿದರು.

ಸ್ಥಳೀಯ ಕೆರೆಯ ಪಕ್ಕದಲ್ಲಿ ರಾಯಣ್ಣ ಪುತ್ಥಳಿ ಪ್ರತಿಷ್ಠಾಪನೆಯಾಗಬೇಕು. ರಾಯಣ್ಣ ಪುತ್ಥಳಿಗೆ ಸೂಕ್ತ ರಕ್ಷಣೆ ಸಿಗಬೇಕು. ಹದಗೆಟ್ಟಿರುವ ಸ್ಥಳೀಯ ರಸ್ತೆಗಳನ್ನು ದುರಸ್ತಿಗೊಳಿಸಬೇಕೆನ್ನುವ ಬೇಡಿಕೆಗಳನ್ನು ಯುವಕರು ಸಿದ್ದರಾಮಯ್ಯ ಮುಂದಿಟ್ಟರು. ಸಿದ್ದರಾಮಯ್ಯ ಸೋಮವಾರ ವಿಧಾನಸಭೆಯಲ್ಲಿ ಈ ಕುರಿತು ಪ್ರಸ್ತಾಪವನ್ನೂ ಮಾಡಿದರು.

ಮಂಗಳವಾರ ಬೆಳಗ್ಗೆ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಆನಗೋಳಕ್ಕೆ ಧಾವಿಸಿ, ಒಂದಿಷ್ಟು ಭರವಸೆಗಳನ್ನು ನೀಡಿದರು. ಸಂಗೊಳ್ಳಿ ರಾಯಣ್ಣ ಪುತ್ಥಳಿ ಧ್ವಂಸ ಮಾಡಿದವರನ್ನು ಬಿಡುವುದಿಲ್ಲ ಎಂದು ಭರವಸೆ ನೀಡಿದರು.
ನಂತರ ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಧಾವಿಸಿ ಬಂದರು. ಕಾಂಗ್ರೆಸ್ ವಿರುದ್ಧ ಒಂದಿಷ್ಟು ಆರೋಪಗಳನ್ನು ಮಾಡಿ ಅಲ್ಲಿಂದ ತೆರಳಿದರು. ಸಚಿವ ಎಂ.ಟಿ.ಬಿ.ನಾಗರಾಜ ಆಗಮಿಸಿ, ದುಷ್ಕರ್ಮಿಗಳನ್ನು ಸುಮ್ಮನೇ ಬಿಡುವುದಿಲ್ಲ ಎಂದು ಘರ್ಜಿಸಿದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಂದು ತಮ್ಮದೇ ಶೈಲಿಯಲ್ಲಿ ಮಾತನಾಡಿ ಹೋದರು.

ಒಟ್ಟಾರೆ ರಾಜಕಾರಣಿಗಳ ಜಾತ್ರೆಯೇ ಆಗಿರುವ ಆನಗೋಳದಲ್ಲೀಗ ಶಾಂತಿ ಕದಡಿ ಗದ್ದಲವೇ ತುಂಬಿಕೊಂಡಿದೆ. ಅಲ್ಲಿನ ಯುವಕರ ಸಣ್ಣ ಬೇಡಿಕೆಗಳನ್ನು ಈಡೇರಿಸಿ, ಸ್ಥಳೀಯರಲ್ಲಿ ಸಾಮರಸ್ಯ ಮೂಡಿಸಿ, ಶಾಂತಿಯುತವಾಗಿ ಬಾಳುವಂತಹ ವಾತಾವರಣ ನಿರ್ಮಾಣವಾದರೆ ಸಾಕು.
ತಮ್ಮ ಆರಾಧ್ಯ ದೈವ ಸಂಗೊಳ್ಳಿ ರಾಯಣ್ಣನಿಗೆ ಅವಮಾನವಾದರೂ ಸಹಿಸಿಕೊಂಡು, ಶಾಂತಿ ಕಾಪಾಡಿದ ಯುವಕರ ಆದರ್ಶ ಮೆಚ್ಚಲೇ ಬೇಕು.

ಆನಗೋಳದಲ್ಲಿ ಮಧ್ಯರಾತ್ರಿ ರಾಯಣ್ಣ ಮೂರ್ತಿ ಭಗ್ನ ಮಾಡಿದ ದುಷ್ಕರ್ಮಿಗಳು; ಪೊಲೀಸ್ ಠಾಣೆ ಬಳಿ ಜಮಾಯಿಸಿದ ಯುವಕರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ