ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಅಪ್ರಾಪ್ತ ಬಾಲಕಿಯನ್ನು ಮದುವೆಯಾದ ಆರೋಪದಡಿ ಆಕೆಯ ಪತಿಯನ್ನು ವಶಕ್ಕೆ ಪಡೆದಿರುವ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಆತನ ಮನೆಯಲ್ಲಿದ್ದ ಬಾಲಕಿಯನ್ನು ರಕ್ಷಿಸಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ವಶಕ್ಕೆ ನೀಡಿದ ಘಟನೆ ಮಂಗಳವಾರ ವರದಿಯಾಗಿದೆ.
“ತಾಲ್ಲೂಕಿನ ಹಿರೇಮುನವಳ್ಳಿ ಗ್ರಾಮದ 24 ವರ್ಷದ ಯುವಕ ಮಂಜುನಾಥ ಡೂಗನವರ ವಶಕ್ಕೆ ಪಡೆದ ಪತಿ. ಮಂಜುನಾಥ ಅವರ ವಿವಾಹ ಹಿರೇಮುನವಳ್ಳಿಯ ಪಕ್ಕದ ಗ್ರಾಮವೊಂದರ 15 ವರ್ಷ 8 ತಿಂಗಳು ವಯಸ್ಸಿನ ಬಾಲಕಿಯ ಜೊತೆ ಕಳೆದ ಮೇ.26ರಂದು ನೆರವೇರಿತ್ತು. ಮದುವೆಯ ಬಳಿಕ ಬಾಲಕಿ ತನ್ನ ಪತಿಯ ಮನೆಯಲ್ಲಿ ವಾಸಿಸುತ್ತಿದ್ದರು. ಅಪ್ರಾಪ್ತ ವಯೋಮಾನದ ಬಾಲಕಿಯ ವಿವಾಹದ ಬಗ್ಗೆ ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ದೂರು ದಾಖಲಾಗಿದ್ದರಿಂದ ಬಾಲಕಿ ಇದ್ದ ಹಿರೇಮುನವಳ್ಳಿಗೆ ಭೇಟಿ ನೀಡಿದ ಅಧಿಕಾರಿಗಳು ಬಾಲಕಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಪತಿ ಮತ್ತು ಆತನ ಮನೆಯವರನ್ನು ಬೆಳಗಾವಿಯ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿಗೆ ವಿಚಾರಣೆಗೆ ಕರೆದುಕೊಂಡು ಬರಲಾಗಿದೆ. ಈ ಬಾಲ್ಯವಿವಾಹದ ಬಗ್ಗೆ ತನಿಖೆ ಪ್ರಗತಿಯಲ್ಲಿದೆ. ತನಿಖೆ ಪೂರ್ಣಗೊಂಡ ಬಳಿಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು” ಎಂದು ಖಾನಾಪುರ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚಂದ್ರಶೇಖರ ಸುಖಸಾರೆ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ