Kannada NewsKarnataka News

ಮೂರು ತಿಂಗಳೊಳಗೆ ಯಾದವಾಡ-ಕುಲಗೋಡ ರಸ್ತೆ ಸಂಪೂರ್ಣ ಸುಧಾರಣೆ

ಪ್ರಗತಿವಾಹಿನಿ ಸುದ್ದಿ, ಮೂಡಲಗಿ : ಹದಗೆಟ್ಟು ಸಾರ್ವಜನಿಕ ಸಂಚಾರಕ್ಕೆ ಅನಾನುಕೂಲವಾಗಿರುವ ಯಾದವಾಡ-ಕುಲಗೋಡ ರಸ್ತೆ ಸುಧಾರಣೆಗೆ ಆದ್ಯತೆ ನೀಡಿದ್ದು, ಈಗಾಗಲೇ ೨.೯೦ ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ತಾಲೂಕಿನ ಯಾದವಾಡ ಗ್ರಾಮದಲ್ಲಿ ಶುಕ್ರವಾರದಂದು ಲೋಕೋಪಯೋಗಿ ಇಲಾಖೆಯ ಸಂಕೇಶ್ವರ-ಸಂಗಮ ರಾಜ್ಯ ಹೆದ್ದಾರಿ-೪೪ ರ ೨.೯೦ ಕೋಟಿ ರೂ. ವೆಚ್ಚದ ಯಾದವಾಡ-ಕುಲಗೋಡ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ವಾರದೊಳಗೆ ರಾಜ್ಯ ಹೆದ್ದಾರಿ ನಿರ್ವಹನೆ ಯೋಜನೆಯಡಿ ಲೆಕ್ಕಶೀರ್ಷಿಕೆ ೩೦೫೪ ರಡಿ ೨ ಕೋಟಿ ರೂ. ಅನುದಾನ ಬಿಡುಗಡೆಯಾಗಲಿದ್ದು, ೫ ಕೋಟಿ ರೂ. ವೆಚ್ಚದಲ್ಲಿ ರಸ್ತೆ ಸುಧಾರಣೆ ನಡೆಯಲಿದೆ. ಯಾದವಾಡದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ೩ ಕಿ.ಮೀ. ವರೆಗಿನ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಸಾರ್ವಜನಿಕರ ಮನವಿಯ ಮೇರೆಗೆ ಯಾದವಾಡದಿಂದ ಕುಲಗೋಡವರೆಗಿನ ರಸ್ತೆಯನ್ನು ಸುಧಾರಣೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಶೀಘ್ರ ೧೫ ಕೋಟಿ ರೂ. ಬಿಡುಗಡೆ :

ಈ ರಸ್ತೆ ಕಾಮಗಾರಿಯನ್ನು ಪೂರ್ಣವಾಗಿ ಕೈಗೊಳ್ಳಲಿಕ್ಕೆ ಲೋಕೋಪಯೋಗಿ ಇಲಾಖೆಯ ಎಸ್‌ಎಚ್‌ಡಿಪಿ ಯೋಜನೆಯಡಿ ೧೫ ಕೋಟಿ ರೂ.ಗಳ ಅನುದಾನ ಮಂಜೂರಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲಿಯೇ ಈ ಅನುದಾನ ಬಿಡುಗಡೆಯಾಗಲಿದೆ. ಯಾದವಾಡ-ಕುಲಗೋಡ ವರೆಗಿನ ೧೫ ಕಿ.ಮೀ ರಸ್ತೆ ಕಾಮಗಾರಿಯನ್ನು ೩ ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಅವರು ಹೇಳಿದರು.

ದಿನೇ ದಿನೇ ಔದ್ಯೋಗಿಕವಾಗಿ ಬೆಳೆಯುತ್ತಿರುವ ಯಾದವಾಡ ಗ್ರಾಮಕ್ಕೆ ಸಂಚರಿಸುವ ರಸ್ತೆಗಳಲ್ಲಿ ಭಾರವಾದ ವಾಹನಗಳು ಸಂಚರಿಸುತ್ತಿರುವುದರಿಂದ ರಸ್ತೆ ಮೇಲಿಂದ ಮೇಲೆ ಹದಗೆಡುತ್ತಿದೆ. ಅದಕ್ಕಾಗಿ ಉತ್ತಮ ಗುಣಮಟ್ಟದ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು. ಸಾರ್ವಜನಿಕರಿಗೆ ನೀಡಿರುವ ಭರವಸೆಯಂತೆ ಯಾದವಾಡ-ಕುಲಗೋಡ ರಸ್ತೆಯನ್ನು ಸುಧಾರಣೆಪಡಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡುವುದಾಗಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.

ಗೋಕಾಕ ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ಘಯೋಮನೀಬ ಮಹಾಮಂಡಳಿ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ಯಾದವಾಡ ಗ್ರಾಪಂ ಅಧ್ಯಕ್ಷ ಯಲ್ಲಪ್ಪಗೌಡ ನ್ಯಾಮಗೌಡ, ಮುಖಂಡರಾದ ಪರ್ವತಗೌಡ ಪಾಟೀಲ, ರಂಗಪ್ಪ ಇಟ್ಟನ್ನವರ, ಶಂಕರ ಬೆಳಗಲಿ, ಸದಾಶಿವ ದುರಗನ್ನವರ, ಗಿರೀಶ ಹಳ್ಳೂರ, ಹನಮಂತ ಹುಚರಡ್ಡಿ, ಬಸು ಹಿಡಕಲ್, ಮಲ್ಲಪ್ಪ ಚಕ್ಕೆನ್ನವರ, ಶ್ರೀಶೈಲ ಢವಳೇಶ್ವರ, ಸುರೇಶ ಸಾವಳಗಿ, ಧರೆಪ್ಪ ಮುಧೋಳ, ಹನೀಫ ರಕೀಪದಾರ, ರಾಜುಗೌಡ ಪಾಟೀಲ, ಬೀರಪ್ಪ ಮುಗಳಖೋಡ, ಮಂಜು ರೂಢಗಿ, ಡಾ.ಶಿವನಗೌಡ ಪಾಟೀಲ, ಎನ್.ಎಂ. ಜಾರೆ, ಬಸು ಕೇರಿ, ಈಶ್ವರ ಬಾಗಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಆರ್.ಎ. ಗಾಣಿಗೇರ, ಎಸ್‌ಓ ಉಪ್ಪಾರ, ಗುತ್ತಿಗೆದಾರರಾದ ಬಿ.ಕೆ. ಗಂಗರಡ್ಡಿ, ಬಾಳಪ್ಪ ಗೌಡರ, ಮುಂತಾದವರು ಉಪಸ್ಥಿತರಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button