ವಾರದೊಳಗಾಗಿ ಆಸ್ತಿ ಸಮೀಕ್ಷೆ ಪೂರ್ಣಗೊಳಿಸಿ : ಜಿಪಂ ಸಿಇಓ ರಾಹುಲ್ ಶಿಂಧೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬರಗಾಲ ಹಾಗೂ ಚುನಾವಣೆ ಎರಡನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿ ಜಿಲ್ಲೆಯಾದ್ಯಂತ ನೀರಿನ ಸಮಸ್ಯೆಯಾಗದಂತೆ ನೋಡಿಕೊಂಡಿರುವುದು ಹಾಗೂ ಸ್ವೀಪ್ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಹಮ್ಮಿಕೊಂಡು ಮತದಾನ ಪ್ರಮಾಣ ಹೆಚ್ಚಾಗಿರುವುದಕ್ಕೆ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶಿಂಧೆ ಅಭಿನಂದನೆಗಳನ್ನು ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ (ಮೇ.5) ತಾಲ್ಲೂಕು ಪಂಚಾಯತ್ ಅಧಿಕಾರಿಗಳೊಂದಿಗೆ ನಡೆದ ವಿವಿಧ ಯೋಜನೆಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯತ್ ಆಸ್ತಿ ಸಮೀಕ್ಷೆ ಪ್ರಕ್ರಿಯೆಯನ್ನು ಅಭಿಯಾನದ ರೀತಿ ಕೈಗೊಂಡು ಮುಂದಿನ ಒಂದು ವಾರದಲ್ಲಿ ಪೂರ್ಣಗೊಳಿಸುವುದು ವಿಳಂಬ ಮಾಡಿದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಸೂಚಿಸಿದರು. ಆಸ್ತಿ ಸಮೀಕ್ಷೆ ಮಾಹಿತಿಗಳನ್ನು ಪಿ2 ವರದಿಯಲ್ಲಿ ಒಂದು ವಾರದಲ್ಲಿ ಅಪ್ ಡೇಟ್ ಮಾಡಲು ಸೂಚಿಸಿದರು. ಸಕಾಲ ಯೋಜನೆಯಡಿ ಕಾಲಮಿತಿ ಮೀರಿ ಬಾಕಿ ಉಳಿದ ಆರ್ಜಿಗಳನ್ನು ಮುಂದಿನ 2 ದಿನದಲ್ಲಿ ವಿಲೇವಾರಿ ಮಾಡಲು ಕ್ರಮಕೈಗೊಳ್ಳುವುದು ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ತೊಂದರೆ ಆಗದಂತೆ ನಿರ್ವಹಿಸುವುದು ಪಿ.ಡಿ.ಐ ಪ್ರಕ್ರಿಯೆಯನ್ನು ಮುಂದಿನ ನಾಲ್ಕು ದಿನದಲ್ಲಿ ಪೂರ್ಣಗೊಳಿಸವುದು, ಕೂಸಿನಮನೆ, ನೆಲ ಜಲ ಮಿತ್ರ ಸರ್ವೇಗಳನ್ನು ಕೂಡಲೇ ಅಪ್ ಡೇಟ್ ಮಾಡಲು ಸೂಚಿಸಿದರು.
ಮನರೇಗಾ ಯೋಜನೆಯಡಿ ಕಡ್ಡಾಯವಾಗಿ ಜನರಿಗೆ ಕೆಲಸ ನೀಡಿ ತಾಲ್ಲೂಕಾವಾರು ನೀಡಿರುವ ಗುರಿಗನುಗುಣವಾಗಿ ಪ್ರಗತಿ ಸಾಧಿಸುವುದು, ಸನ್ 2023-24 ನೇ ಸಾಲಿನಡಿ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಮಗಾರಿಗಳು ಪೂರ್ಣಗೊಳಿಸದೇ ಹಾಗೇ ಉಳಿದುಕೊಂಡಿವೆ. ಅಂತಹ ಕಾಮಗಾರಿಗಳನ್ನು ಸಂಬಂಧಿಸಿದ ಅಧಿಕಾರಿಗಳು ಪೂರ್ಣಗೊಳಿಸಬೇಕು ಹಾಗೂ ಬಿಸಿಲು ಹೆಚ್ಚಿರುವ ಗ್ರಾಮ ಪಂಚಾಯತಿಗಳಲ್ಲಿ ಕೂಲಿಕಾರರಿಗೆ ಅನುಕೂಲವಾಗುವಂತೆ ಬೆಳಿಗ್ಗೆನ ಸಮಯದಲ್ಲಿ ಕೆಲಸ ನೀಡುವಂತೆ ಸಭೆಯಲ್ಲಿ ಸೂಚನೆ ನೀಡಿದರು. ಜಿಯೋ ಟ್ಯಾಗ್ ಮಾಡುವುದು ಸೇರಿದಂತೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಸಾಮಾಜಿಕ ಪರಿಶೋಧನೆಯಲ್ಲಿ ಎ.ಟಿ.ಆರ್. ಇತ್ಯರ್ಥಗೊಳಿಸುವುದು ಬಾಕಿ ಇದ್ದು, ವಾರಕ್ಕೆ ಎರಡು ಬಾರಿ ಅಡಾಕ್ ಸಮಿತಿ ಸಭೆಗಳನ್ನು ಮಾಡುವುದರ ಮೂಲಕ ಪ್ರಕರಣಗಳನ್ನು ಮುಕ್ತಾಯಗೊಳಿಸಲು ಕ್ರಮವಹಿಸುವಂತೆ ಎಂದು ನಿರ್ದೇಶನ ನೀಡಿದರು.
ಸ್ವಚ್ಛ ಭಾರತ ಮಿಷನ್ ಯೋಜನೆಗೆ ಸಂಬಂಧಿಸಿದಂತೆ ಪ್ರಗತಿಯಲ್ಲಿರುವ ಸಮುದಾಯ ಶೌಚಾಲಯಗಳನ್ನು ಒಂದು ವಾರದೊಳಗೆ ಮುಕ್ತಾಯ ಮಾಡಲು ತಿಳಿಸಿದರು. SWM ಸಂಬಂಧಿಸಿದಂತೆ ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ಪ್ರತಿ ದಿನ ಕಸ ನಿರ್ವಹಣೆ ಕಾರ್ಯ ಪ್ರಗತಿಯಲ್ಲಿರಬೇಕು. ವೈಯಕ್ತಿಕ ಶೌಚಾಲಯದ ಪ್ರಗತಿ ಸಾಧಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಜಿ. ಪಂ ಉಪಕಾರ್ಯದರ್ಶಿ (ಆಡಳಿತ) ರೇಖಾ ಡೊಳ್ಳಿಣವರ, ಉಪಕಾರ್ಯದರ್ಶಿ (ಅಭಿವೃದ್ಧಿ) ಬಸವರಾಜ ಅಡವಿಮಠ, ಯೋಜನಾ ನಿರ್ದೇಶಕ (ಡಿ.ಆರ್.ಡಿ.ಎ) ಡಾ: ಎಮ್. ಕೃಷ್ಣರಾಜು, ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ, ಮುಖ್ಯ ಯೋಜನಾಧಿಕಾರಿ ಗಂಗಾಧರ ದಿವಟರ ಜಿಲ್ಲೆಯ ಎಲ್ಲ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ ಹಾಗೂ ಪಂಚಾಯತ್ ರಾಜ್ ಹಾಗೂ ಜಿ.ಪಂ. ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ