*ಶಾಮನೂರು ಶಿವಶಂಕರಪ್ಪ ನಿಧನಕ್ಕೆ ವಿಧಾನ ಪರಿಷತ್ ನಲ್ಲಿ ಸಂತಾಪ*

ಪ್ರಗತಿವಾಹಿನಿ ಸುದ್ದಿ: ಮಾಜಿ ಲೋಕಸಭಾ ಸದಸ್ಯರು, ಮಾಜಿ ಸಚಿವರು ಹಾಗೂ ವಿಧಾನ ಸಭೆ ಹಾಲಿ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ವಿಧಾನ ಪರಿಷತ್ ನಲ್ಲಿ ಸಂತಾಪ ಸೂಚನೆ ನಿರ್ಣಯ ಕೈಗೊಳ್ಳಲಾಯಿತು.
1931ರ ಜೂನ್ 16ರಂದು ದಾವಣಗೆರೆಯಲ್ಲಿ ಜನಿಸಿದ್ದ ಶ್ರೀಯುತರು ಇಂಟರ್‌ಮೀಡಿಯೇಟ್‌ವರೆಗೂ ವ್ಯಾಸಂಗ ಮಾಡಿದ್ದರು. ಮೂಲತ: ಉದ್ಯಮಿಯಾಗಿದ್ದ ಅವರು 1969ರಲ್ಲಿ ದಾವಣಗೆರೆ ನಗರ ಸಭೆ ಸದಸ್ಯರಾಗುವ ಮೂಲಕ ರಾಜಕೀಯ ಪ್ರವೇಶಿಸಿ, 1971ರಲ್ಲಿ ದಾವಣಗೆರೆ ನಗರ ಸಭೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕದ ಮ್ಯಾಂಚೆಸ್ಟರ್ ಎಂದೇ ಖ್ಯಾತವಾದ ದಾವಣಗೆರೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಸಾವಿರಾರು ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಉನ್ನತ ಶಿಕ್ಷಣಕ್ಕೆ ನೆರವಾಗುವುದರ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದರು.
ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆ ಮಾತಿನಂತೆ ಶಾಮನೂರು ಶಿವಶಂಕರಪ್ಪ ಅವರು ದಾವಣಗೆರೆಯ ಅಂಗವಿಕಲ ಆಶಾಕಿರಣ ಟ್ರಸ್ಟ್, ಸ್ಪೋರ್ಟ್ಸ್ ಕ್ಲಬ್, ಬಾಪೂಜಿ ಇಂಜಿನಿಯರಿಂಗ್ ಅಸೋಸಿಯೇಷನ್ ಮತ್ತು ಇನ್ನಿತರ ಅನೇಕ ಸಂಘ ಸಂಸ್ಥೆಗಳ ಅಧ್ಯಕ್ಷರಾಗಿ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭೆಯ ರಾಷ್ಟ್ರೀಯ ಅಧ್ಯಕ್ಷರಾಗಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸುವ ಮೂಲಕ ಸಮಾಜದ ಎಲ್ಲಾ ರಂಗಗಳಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು.
1994ರಲ್ಲಿ ದಾವಣಗೆರೆ ವಿಧಾನ ಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾದರು. 2004, 2008, 2013. 2018, 2023ರಲ್ಲಿ ಶಾಸಕರಾಗಿ, ಕೃಷಿ ಮಾರುಕಟ್ಟೆ ಮತ್ತು ತೋಟಗಾರಿಕೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 1998ರಲ್ಲಿ ಲೋಕಸಭೆಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದ ಶ್ರೀಯುತರು ಶೈಕ್ಷಣಿಕ, ಆರೋಗ್ಯ, ಧಾರ್ಮಿಕ ಮತ್ತು ಔದ್ಯೋಗಿಕ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಅಪಾರವಾದದ್ದು. ಸಮಾಜಮುಖಿಯಾಗಿ ಅವರು ನಾಡಿಗೆ ಅಮೂಲ್ಯವಾದ ಕೊಡುಗೆಯನ್ನು ನೀಡಿದ ಸರಳ ಸಜ್ಜನಿಕೆಯ ನಾಯಕರಾಗಿದ್ದರು.
ಭಾರತ್ ಗೌರವ್ ಪ್ರಶಸ್ತಿ, ಶಿರೋಮಣಿ ವಿಕಾಸ್ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ, ವಿದ್ಯಾಶ್ರೀ ಸೇವಾ ಪ್ರಶಸ್ತಿ, ಸಿರಿಗೆರೆಯ ತರಳಬಾಳು ಮಠದಿಂದ ಧರ್ಮಚೂಡಾಮಣಿ ಬಿರುದು ಹಾಗೂ ದಿ ಇಂಟರ್ ನ್ಯಾಷನಲ್ ಗ್ಲೋಬಲ್ ಪ್ರಶಸ್ತಿಗಳಲ್ಲದೆ ಇತರೆ ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದರು.
ಶ್ರೀಯುತರ ನಿಧನದಿಂದಾಗಿ ರಾಜ್ಯವು ಹಿರಿಯ ಶ್ರೇಷ್ಠ ಮುತ್ಸದ್ದಿ ಹಾಗೂ ಸರಳ ಸಜ್ಜನ ನಾಯಕರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಸಂತಾಪ ನಿರ್ಣಯ ಮಂಡಿಸಿದರು.
ಸಂತಾಪ ನಿರ್ಣಯದ ಕುರಿತಂತೆ
ಸಭಾ ನಾಯಕರಾದ ಸಚಿವ ಭೋಸರಾಜು, ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ಇಂಧನ ಸಚಿವ ಕೆ. ಜೆ. ಜಾರ್ಜ್, ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್, ಆಹಾರ ಮತ್ತು ನಾಗರಿಕ ವ್ಯವಹಾರ ಸಚಿವ ಮುನಿಯಪ್ಪ, ಸದಸ್ಯರಾದ ಭೋಜೇಗೌಡ, ರವಿಕುಮಾರ್,
ಸಿ.ಟಿ. ರವಿ,ಐವನ್ ಡಿಸೋಜ,ಪ್ರದೀಪ್ ಶೆಟ್ಟರ್, ಎಂ.ನಾಗರಾಜ್, ಪಿ. ಹೆಚ್. ಪೂಜಾರ್, ಮಂಜುನಾಥ್ ಭಂಡಾರಿ ಮಾತನಾಡಿದರು.
ಮೃತರ ಗೌರವಾರ್ಥ ಎಲ್ಲಾ ಸದಸ್ಯರು ಎದ್ದು ನಿಂತು ಒಂದು ನಿಮಿಷ ಮೌನ ಸಲ್ಲಿಸಲಾಯಿತು.

