Kannada NewsKarnataka NewsLatest

ಬೆಳಗಾವಿಯಲ್ಲಿ ಡಾ.ಪ್ರಭಾಕರ ಕೋರೆಗೆ ಮಠಾಧೀಶರಿಂದ ಅಭಿನಂದನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ  : ಹತ್ತಿದರೆ ಹಿಮಾಲಯ ಹತ್ತಬೇಕು, ಬಿತ್ತಿದರೆ ಫಲನೀಡುವ ಬೀಜ ಬಿತ್ತಬೇಕು ಎಂಬ ಮಾತಿನಂತೆ ಡಾ.ಪ್ರಭಾಕರ ಕೋರೆಯವರು ಶಿಕ್ಷಣ ಆರೋಗ್ಯ ಕ್ಷೇತ್ರದಲ್ಲಿ ಅಗಾಧವಾದ ಸಾಧನೆಯನ್ನು ಮಾಡಿದ್ದಾರೆ. ಮನಶುದ್ಧವಾಗಿ ತನುಶುದ್ಧವಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಖ್ಯಾತ ಸಾಹಿತಿಗಳಾದ ಗೊ.ರು.ಚನ್ನಬಸಪ್ಪನವರು ಹೇಳಿದರು.

ಅವರು ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದಲ್ಲಿ ಜರುಗಿದ ಡಾ.ಪ್ರಭಾಕರ ಕೋರೆಯವರ ಅಮೃತ ಮಹೋತ್ಸವದ ಅಭಿನಂದನ ಸಮಾರಂಭ ಹಾಗೂ ಮಠಾಧೀಶರ ಬೃಹತ್ ಚಿಂತನಾ ಸಮಾವೇಶವನ್ನು ಉದ್ದೇಶಿಸಿ ಆಶಯ ನುಡಿಗಳನ್ನಾಡಿದರು.
ಡಾ.ಕೋರೆಯವರ ಸಾಧನೆ ಅನನ್ಯ ಅಸಾದೃಶ. ಸಮಾಜಕ್ಕೆ ಅವರು ಸಲ್ಲಿಸಿದ ಕೊಡುಗೆ ಅಪಾರ. ಅವರನ್ನು ನಾಡಿ ಸಮಸ್ತ ಮಠಾಧೀಶರು ಇಂದು ಸನ್ಮಾನಿಸುತ್ತಿರುವುದು ಅಭಿನಂದನೀಯ. ನಮ್ಮ ನಾಡನ್ನು ಜಾಗತಿಕವಾಗಿ ಬೆಳಗಿಸಿದ ಡಾ.ಕೋರೆಯವರು ಅವಿಸ್ಮರಣೀಯವಾದ ಸೇವೆಯನ್ನು ನೀಡಿದ್ದಾರೆ. ದೇಶ ವಿದೇಶಗಳಲ್ಲಿಯೂ ಮನ್ನಣೆಗೆ ಪಾತ್ರರಾಗಿದ್ದಾರೆ. ಅವರು ಶತಾಯುಷಿಗಳಾಗಲಿ ಎಂದರು.

ಮಠಗಳು ಎಂದರೆ ಒಂದು ಕಾಲದಲ್ಲಿ ವಿದ್ಯಾ ಕೇಂದ್ರಗಳೆನಿಸಿದ್ದವು. ಶಿಕ್ಷಣವನ್ನು ನೀಡುವುದರ ಮೂಲಕ ಸಮಾಜವನ್ನು ಜ್ಞಾನದೆಡೆಗೆ ಕೊಂಡ್ಯೊಯುವ ಶ್ರದ್ಧಾಕೇಂದ್ರಗಳೆನಿಸಿದ್ದವು. ಆ ಕಾರ್ಯವನ್ನು ಇಂದಿಗೂ ಅನವರತವಾಗಿ ಮಾಡಿಕೊಂಡುಬರುತ್ತಿರುವುದು ಅಭಿನಂದನಾರ್ಹವೆನಿಸಿದೆ.

ಹನ್ನೆರಡನೆಯ ಶತಮಾನದ ಶರಣರ ತತ್ತ್ವಾದರ್ಶದಲ್ಲಿ ಮುನ್ನಡೆದ ಹತ್ತು ಸಾವಿರಕ್ಕೂ ಹೆಚ್ಚು ಮಠಗಳು ಕಾಲಾಂತರದಲ್ಲಿ ಆ ಸಂಖ್ಯೆ ಗತಿಸುತ್ತಾ ೫೦೩೬ ವೀರಶೈವ ಲಿಂಗಾಯತ ಮಠಗಳು ಉಳಿದುಕೊಂಡವು, ಅದರಲ್ಲಿಯೂ ಮೂರು ಸಾವಿರ ಮಠಗಳು ಕಾರಣಾಂತರಳಿಂದ ಸರ್ವನಾಶವಾದವು. ಇಂದು ಸುಮಾರು ೨೦೦ರಷ್ಟು ಮಠಗಳು ಮಾತ್ರ ಅಸ್ತಿತ್ವದಲ್ಲಿರುವುದು ವಿಪರ್ಯಾಸ. ಮಠಾಧೀಶರಾದವರು ಮಠದ ಪಾವಿತ್ರ್ಯತೆಯನ್ನು ಹಾಳು ಮಾಡುತ್ತಿದ್ದಾರೆ, ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ರಾಜಕೀಯವಾಗಿ ಮತ್ತು ಸ್ವಹಿತಾಶಕ್ತಿಗಳಿಗಾಗಿ ಯುವಜನಾಂಗವನ್ನು ದೂರತಳ್ಳುತ್ತಿದ್ದಾರೆ. ಹಾಗಾಗಬಾರದು. ತಮ್ಮ ನೈತಿಕ ಜವಾಬ್ದಾರಿಯನ್ನು ಅರಿತು ಸಮಾಜವನ್ನು ಧರ್ಮವನ್ನು ಕಟ್ಟುವ ಕೆಲಸ ಮಠಾಧೀಶರಿಂದ ನಡೆಯಬೇಕು. ಸಮಾಜ ಸೇವೆಯ ಹಲವು ಮುಖಗಳಲ್ಲಿ ತೊಡಗಬೇಕಾಗಿದೆ. ಕೆಎಲ್‌ಇ ಸಂಸ್ಥೆಯು ಮಠಗಳಂತೆ ಜಾತ್ಯಾತೀವಾಗಿ ಸಮಾಜವನ್ನು ಕಟ್ಟುವ ಕೆಲಸವನ್ನು ಮಾಡಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿದ್ದ ಸುತ್ತೂರು ಕ್ಷೇತ್ರದ   ಜಗದ್ಗುರು ದೇಶಿಕೇಂದ್ರ ಮಹಾಸ್ವಾಮಿಗಳು, ಸಿರಿಗೆರೆ ತರಳಬಾಳು ಮಹಾಸಂಸ್ಥಾನ ಮಠದ ಪರಮಪೂಜ್ಯರಾದ ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ, ಹುಬ್ಬಳ್ಳಿಯ ಮೂರುಸಾವಿರ ಮಠದ ಪರಮಪೂಜ್ಯರಾದ ಜಗದ್ಗುರು ಡಾ.ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮೀಜಿ, ಗದಗ ತೋಂಟದಾರ್ಯ ಸಂಸ್ಥಾನಮಠದ ಪರಮಪೂಜ್ಯರಾದ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮೀಜಿ, ಮುಂಡರಗಿಯ ಅನ್ನದಾನೇಶ್ವರ ಸಂಸ್ಥಾನಮಠದ ಪರಮಪೂಜ್ಯ ಶ್ರೀ ಜಗದ್ಗುರು ನಾಡೋಜ ಡಾ.ಅನ್ನದಾನೇಶ್ವರ ಮಹಾಸ್ವಾಮೀಜಿ, ನಿಡಸೋಸಿ ಸಿದ್ಧಸಂಸ್ಥಾನಮಠದ ಪರಮಪೂಜ್ಯರಾದ ಜಗದ್ಗುರು ಪಂಚಮಶಿವಲಿಂಗೇಶ್ವರ ಮಹಾಸ್ವಾಮೀಜಿ, ಕೊಟ್ಟೂರುಸ್ವಾಮಿಮಠದ ಪರಮಪೂಜ್ಯರಾದ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮೀಜಿ ಆಶೀರ್ವಚನ ನೀಡಿ ಡಾ.ಪ್ರಭಾಕರ ಕೋರೆಯವರಿಗೆ ಶುಭಹಾರೈಸಿದರು.

ಡಾ.ಪ್ರಭಾಕರ ಕೋರೆಯವರು ಸನ್ಮಾನ ರೂಪದ ಆಶೀರ್ವಾದವನ್ನು ಸ್ವೀಕರಿಸಿ ಮಾತನಾಡುತ್ತ, ಇಂದು ಎಲ್ಲ ಪರಮಪೂಜ್ಯರು ಒಂದಾಗಿ ಈ ಪವಿತ್ರ ವೇದಿಕೆಯ ಮೇಲೆ ನನ್ನ ಮೇಲಿನ ಗೌರವ, ಅಭಿಮಾನದಿಂದ ಭವ್ಯ ಸಮಾರಂಭವನ್ನು ಆಯೋಜಿಸಿರುವುದು ಅತೀವ ಸಂತೋಷವೆನಿಸಿದೆ. ಮಾತ್ರವಲ್ಲದೆ ನಾನು ಲಿಂಗಾಯತನಾಗಿ ಹುಟ್ಟಿರುವುದಕ್ಕೆ ಬದುಕು ಸಾರ್ಥಕವೆನಿಸುತ್ತಿದೆ. ಸದಾಕಾಲ ಶಿಕ್ಷಣ ಬೆಳಗುವಂತೆ ಮಾಡಿದ ಸಪ್ತರ್ಷಿಗಳ ಸೇವೆ ಎಲ್ಲಕ್ಕೂ ಮಿಗಿಲಾದದು.

ಅತ್ಯಂತ ಬಡತನ ಹಾಗೂ ಕಷ್ಟಕರ ದಿನಗಳಲ್ಲಿ ಏಳು ಜನ ಶಿಕ್ಷಕರು ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕಿದರು. ಅಂದು ಅವರು ಬಿತ್ತಿದ ಬೀಜ ಇಂದು ಹೆಮ್ಮೆರವಾಗಿ ಬೆಳೆದುನಿಂತಿದೆ. ಅರಟಾಳ ರುದ್ರಗೌಡರು, ಸರ್ ಸಿದ್ದಪ್ಪ ಕಂಬಳಿಯವರ ಕೊಡುಗೆ ಅಪಾರವಾಗಿದೆ. ದಾನಿಗಳು ಮಹಾದಾನಿಗಳಿಂದ ಕೆಎಲ್‌ಇ ಸಂಸ್ಥೆಯು ಇಂದು ಬೆಳೆದುನಿಂತಿದೆ. ಅದು ನನ್ನೊಬ್ಬನಿಂದ ಸಾಧ್ಯವಾದುದಲ್ಲ. ನನ್ನ ಎಲ್ಲ ಆಡಳಿತ ಮಂಡಳಿಯ ಸದಸ್ಯರು ಕೈಹಿಡಿದು ಈ ಸಂಸ್ಥೆಯನ್ನು ಕಟ್ಟಿಬೆಳೆಸಿದ್ದಾರೆ. ಅವರೆಲ್ಲರಿಗೂ ಶ್ರೇಯಸ್ಸು ಸಲ್ಲಬೇಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಪ್ರಿ.ಬಿ.ಎಸ್.ಗವಿಮಠರು ಡಾ.ಪ್ರಭಾಕರ ಕೋರೆಯವರ ಕುರಿತು ರಚಿಸಿದ ’ಕನ್ನಡರತ್ನ ಡಾ.ಪ್ರಭಾಕರ ಕೋರೆ’ ಗ್ರಂಥವನ್ನು ವೇದಿಕೆಯ ಮೇಲಿನ ಸಮಸ್ತ ಪೂಜ್ಯರು ಲೋಕಾರ್ಪಣಗೊಳಿಸಿದರು. ಆನಂದಪುರಂ ಬೆಕ್ಕಿನಕಲ್ಮಠದ ಪರಮಪೂಜ್ಯರಾದ ಜಗದ್ಗುರು ಶ್ರೀ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ, ಸೊಲ್ಲಾಪುರ ಹಿರೇಮಠ ಗೌಡಗಾಂವ ಲೋಕಸಭಾ ಸದಸ್ಯರಾದ ಶ್ರೀ ಡಾ.ಜಯಸಿದ್ಧೇಶ್ವರ ಶಿವಾಚಾರ್ಯ, ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮಿಗಳು, ಮುರಗೋಡ ನೀಲಕಂಠ ಮಹಾಸ್ವಾಮಿಗಳು, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರು ಹಾಗೂ ಎರಡನೂರಾ ಐವತ್ತಕ್ಕೂ ಹೆಚ್ಚು ಸ್ವಾಮೀಜಿಯವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ವಿಧಾನ ಪರಿಷತ್‌ನ ಮಾಜಿ ಸದಸ್ಯರಾದ ಮಹಾಂತೇಶ ಕವಟಗಿಮಠ ಸ್ವಾಗತಿಸಿದರು. ಶೇಗುಣಸಿಯ ಪೂಜ್ಯ ಮಹಾಂತ ದೇವರು ನಿರೂಪಿಸಿದರು.

ವಂದೇ ಭಾರತ್ ರೈಲು ಹಾಗೂ ಭಾರತ್ ಗೌರವ್ ಕಾಶಿ ರೈಲಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ

https://pragati.taskdun.com/politics/vande-bharat-trainbharat-gourav-kaashi-trainpm-modibangalore/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button