Kannada NewsKarnataka NewsLatest

ಕಾಂಗ್ರೇಸ್ ಮತ್ತು ಜೆಡಿಎಸ್ ಗೆ 3 ತಿಂಗಳಿಗೊಮ್ಮೆ ಚುನಾವಣೆ ಬೇಕಾಗಿದೆ- ಯಡಿಯೂರಪ್ಪ

 ಪ್ರಗತಿವಾಹಿನಿ ಸುದ್ದಿ, ಅಥಣಿ- ಕಾಂಗ್ರೇಸ್ ಹಾಗೂ ಜೆಡಿಎಸ್ ನವರಿಗೆ ಕರ್ನಾಟಕದ ಅಭಿವೃದ್ದಿ ಬೇಕಾಗಿಲ್ಲ, ಅವರಿಗೆ ಮಧ್ಯಂತರ ಚುನಾವಣೆ ಬೇಕಾಗಿದೆ. ಮೂರು ತಿಂಗಳಿಗೊಮ್ಮೆ ನಾಲ್ಕು ತಿಂಗಳಿಗೊಮ್ಮೆ ಚುನಾವಣೆ ಬೇಕಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹರಿಹಾಯ್ದರು.

ಕಾಗವಾಡ ಭಾಗದ ಉಪಚುನಾವಣೆ ನಿಮಿತ್ಯವಾಗಿ ಅನಂತಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಮಾವೇಶದಲ್ಲಿ ಮಾತನಾಡುತ್ತಾ, ಶ್ರೀಮಂತ ಪಾಟೀಲ ಅವರ ಜೊತೆಗೆ ೧೬ ಜನ ದಿಟ್ಟ ನಿರ್ಧಾರ ತಗೊಂಡು ಕ್ಷೇತ್ರದ ಅಭಿವೃದ್ದಿಗಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಕೊಟ್ಟು ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಿದ್ದನ್ನು ಕರ್ನಾಟಕದ ಇತಿಹಾಸದಲ್ಲಿ ಸುವರ್ಣ ಅಕ್ಷರದಲ್ಲಿ ಬರೆದಿಡಬೇಕು ಎಂದರು.

ಸಮ್ಮಿಶ್ರ ಸರಕಾರ ಆಡಳಿತ ಅವಧಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿತ್ತು, ಅಭಿವೃದ್ದಿ ಮರೆತಿದ್ರು, ಉತ್ತರ ಕರ್ನಾಟಕ ಕಡೆಗಣಿಸಿದ್ದರು. ಈ ರೀತಿಯಾದ ಆಡಳಿತ ಕಳೆದ ೪೦ ವರ್ಷದಲ್ಲಿ ಬಂದಿರಲಿಲ್ಲ. ಈ ಭಾಗದ ೨೩ ಕೆರೆಗಳನ್ನು ತುಂಬಿಸುವ ಯೋಜನೆ, ಗಡಿಭಾಗದ ಶೈಕ್ಷಣಿಕ ಸಮಸ್ಯೆ ನಿವಾರಣೆ, ಬಸವೇಶ್ವರ ಏತ ನೀರಾವರಿ ಇತ್ಯಾದಿ ಕಾರ್ಯಕ್ಕಾಗಿ ನಾನು ಬಜೆಟ್ ನಲ್ಲಿ ಸಾಕಷ್ಟು ಅನುದಾನವನ್ನು ಮೀಸಲಿಡುತ್ತೇನೆ ಎಂದರು.

ಸರ್ವಧರ್ಮ ಪ್ರಿಯರಾದ ನಾವು ಹಜ್ ಯಾತ್ರಿಗಳಿಗಾಗ ೪೦ ಕೋಟಿ ರೂ ಕೊಟ್ಟಿದ್ದೇವೆ. ಮಸೀದಿ ನಿರ್ಮಾಣಕ್ಕಾಗಿ, ಮಹಿಳೆಯರ ಸಬಲೀಕರಣಕ್ಕಾಗಿ, ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗಾಗಿ, ನಿರುದ್ಯೋಗಿ ಯುವಕರ ಸಬಲೀಕರಣಕ್ಕಾಗಿ ಹಾಗೂ ಇತ್ಯಾದಿಗಳಿಗಾಗಿ ಹತ್ತು ಹಲವಾರು ಯೋಜನೆಗಳನ್ನು ರೂಪಿಸಿದ್ದೇವೆ.

ಮೂರುವರೆ ವರ್ಷದ ನಂತರ ೧೫೦ ಸೀಟುಗಳನ್ನು ಬಿಜೆಪಿ ಗೆಲ್ಲುವಂತಹ ಕಾರ್ಯವನ್ನು ನಾವು ಮಾಡುತ್ತೇವೆ. ಯಾವ ಕಾರ್ಯಕ್ಕಾಗಿ ಶ್ರೀಮಂತ ಪಾಟೀಲರು ರಾಜೀನಾಮೆ ಕೊಟ್ಟರೋ ನಾನು ಅದನ್ನು ಈಡೇರಿಸುತ್ತೇನೆ ಎಂದು ಭರವಸೆ ನೀಡುತ್ತೇನೆ ಎಂದು ಹೇಳಿದರು.

ರೈತನ ಸಂಕಷ್ಟಕ್ಕೆ ಹೆಗಲು ಕೊಡುವ ಕಾರ್ಯ ನಾವು ಮಾಡುತ್ತೇವೆ, ಫೆಬ್ರವರಿ ಬಜೇಟ್ ನಲ್ಲಿ ಮಾದರಿ ಕರ್ನಾಟಕ್ಕಾಗಿ ಹಾಗೂ ಈ ಭಾಗಕ್ಕೆ ಬೇಕಾದ ಅನುದಾನವನ್ನು ಮೀಸಲಿಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

 

ಇಬ್ಬರನ್ನೂ ಆರಿಸಿಕೊಂಡು ವಿಧಾನಸಭೆ ಮೆಟ್ಟಿಲು ಹತ್ತುತ್ತೇನೆ

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡುತ್ತಾ, ಉಪಮುಖ್ಯಮಂತ್ರಿ ಸ್ಥಾನ ನನಗೆ ಬಯಸದೇ ಬಂದ ಭಾಗ್ಯ. ಇದರಿಂದಾಗಿ ಅನಂತಪುರ ಭಾಗದ ಜನತೆಯ ಋಣ ತೀರಿಸ್ತೀನಿ. ಪ್ರತಿಯೊಂದು ಚುನಾವಣೆಯಲ್ಲಿ ಬಸವೇಶ್ವರ ಏತ ನೀರಾವರಿ ಹೆಸರು ಪ್ರಸ್ತಾಪ ಮಾಡ್ತಾರೆ.

ಹಿಂದಿನ ನೀರಾವರಿ ಸಚಿವರು ಭಾಷಣ ಮಾಡಲು ಅಥಣಿಗೆ ಬಂದಿದ್ದಾರೆ. ಆದರೆ ನಾನು ಭಾಷಣ ಮಾಡಲು ಬಂದಿಲ್ಲ. ಕೃಷ್ಣಾ ನದಿ ನೀರನ್ನು ತಂದು ನಿಮ್ಮ ಅನಂತಪುರ ಹೊಲದಲ್ಲಿ ಬಿಡಲು ಬಂದಿದ್ದೇನೆ ಎಂದರು.

ಯಡಿಯೂರಪ್ಪನವರಿಂದ ಬಸವೇಶ್ವರ ಏತ ನೀರಾವರಿಗೆ ಈಗಾಗಲೇ ಅನುಮತಿ ಪಡೆದಿದ್ದು ೨೦ ತಿಂಗಳಿನ ಒಳಗಾಗಿ ನಿಮಗೆ ನೀರು ತಂದು ಕೊಡ್ತೀನಿ. ನಾನು ನಿಮ್ಮೆಲ್ಲರ ಭರವಸೆಯ ಮೇರೆಗೆ ಅಥಣಿ ಹಾಗೂ ಕಾಗವಾಡ ಅಭ್ಯರ್ಥಿಗಳನ್ನು ಆರಿಸಿಕೊಂಡು ವಿಧಾನಸಭೆ ಮೆಟ್ಟಿಲು ಹತ್ತುತ್ತೀನಿ. ಅದನ್ನು ನೀವೆಲ್ಲ ಮತಹಾಕುವ ಮೂಲಕ ಈಡೇರಿಸಿ.

ಮಂತ್ರದ ಮೂಲಕ ಮಾವಿನಕಾಯಿ ಉದುರುವುದಿಲ್ಲ. ಹಾಗಾಗಿ ನಾವು ಅಭಿವೃದ್ದಿ ಕೆಲಸ ಮಾಡಬೇಕಾದರೆ ನೀವು ಮತಹಾಕಿ ನಮ್ಮ ಅಭ್ಯರ್ಥಿಗಳನ್ನು ಆರಿಸಿಕೊಡಬೇಕು, ಸ್ಥಿರ ಸುಭದ್ರ ಸರಕಾರಕ್ಕೆ ನಿಮ್ಮ ಮತ ಅವಶ್ಯಕ.

ನೀವು ಹಾಕುವ ಮತ ಶ್ರೀಮಂತ ಪಾಟೀಲರಿಗೆ ಅಲ್ಲ, ಯಡಿಯೂರಪ್ಪನವರಿಗೆ ಎಂದರು. ನಿರ್ಲಕ್ಷ್ಯವಾಗಿರುವ ಉತ್ತರ ಕರ್ನಾಟಕದ ಅಭಿವೃದ್ದಿಗಾಗಿ ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯಾಗಿ ಮುನ್ನಡೆಸಿರಿ ಎಂದರು.

ಹತ್ತಿರಕ್ಕೂ ಬಿಡಲಿಲ್ಲ

ಅನಂತರದಲ್ಲಿ ಕಾಗವಾಡ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಅವರು ಮಾತನಾಡುತ್ತಾ ಕಳೆದ ವಿಧಾನಸಭೆಯಲ್ಲಿ ನಿಮ್ಮ ಆಶಿರ್ವಾದ ಮೂಲಕ ಆಯ್ಕೆಯಾಗಿದ್ದೆ. ಆದರೆ ಸಮ್ಮಿಶ್ರ ಸರಕಾರ ರಚನೆಯಾಗಿ ಕೇವಲ ನಾಲ್ಕು ಜಿಲ್ಲೆಯ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಆಯ್ಕೆಯಾಗಿ ನಮ್ಮನ್ನು ಕಡೆಗಣಿಸಿದ್ದರು.

ನಮ್ಮ ಖಿಳೇಗಾವಿ ಬಸವೇಶ್ವರ ಏತ ನೀರಾವರಿ ಯೋಜನೆಗೆ ಯಾವ ಅನುದಾನವನ್ನೂ ಸಹ ಬಿಡುಗಡೆಗೊಳಿಸಲಿಲ್ಲ. ಒಂದು ರಸ್ತೆಗೂ ಕೂಡ ಅನುದಾನವನವನ್ನು ಬಿಡುಗಡೆಗೊಳಿಸಲಿಲ್ಲ, ಮೂರು ವರ್ಷದಲ್ಲಿ  ಮುಗಿಯಬೇಕಾಗಿದ್ದ ಬಸವೇಶ್ವರ ಏತ ನೀರಾವರಿ ಯೋಜನೆ ಇನ್ನು ಹಾಗೇಯೇ ಇದೆ, ಇದೇ ರೀತಿ ಆ ಯೋಜನೆ ಮುಂದುವರೆದರೆ ಆ ಯೋಜನೆ ಮುಗಿಯಲು ಸುಮಾರು ೧೦ ವರ್ಷ ಬೇಕಾಗುತ್ತದೆ.

ಈ ಯೋಜನೆಗಾಗಿ ೧೫೦೦ ಕೋಟಿ ರೂ ಬೇಕಾಗುತ್ತದೆ ಎಂದು ವಿನಂತಿಸಿದರೂ ನಮ್ಮ ಮೇಲೆ ದಯೆ, ಕರುಣೆ ಬಂದಿಲ್ಲ. ನೂರು ಸಾರಿ ಕುಮಾರಸ್ವಾಮಿ ಹತ್ತಿರ ಹೋದರೂ ನಮ್ಮನ್ನು ಅವರ ಹತ್ತಿರ ಕೂಡ ಬಿಡಲಿಲ್ಲ ಎಂದು ಆರೋಪಿಸಿದರು.

ಶಾಶ್ವತ ಪರಿಹಾರ

ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಅಥಣಿ ಭಾಗದ ೨೨ ಗ್ರಾಮಗಳು ಕರ್ನಾಟಕದಲ್ಲಿ ಕಾಂಗ್ರೇಸ್ ಸರಕಾರ ನಮ್ಮನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಮನವಿ ಮಾಡಿದ್ದಕ್ಕೆ ಕಾಂಗ್ರೇಸ್ ಸರಕಾರ ಸರಿಯಾಗಿ ಸ್ಪಂದಿಸಲಿಲ್ಲ.

ಆಗ ನಾನು ಮತ್ತು ಲಕ್ಷ್ಮಣ ಸವದಿ ಅವರು ಸೇರಿ ಹಲವಾರು ನೀರಾವರಿ ಯೋಜನೆಗಳ ಮೂಲಕವಾಗಿ ಮಹಾರಾಷ್ಟ್ರದ ಹಲವು ಗ್ರಾಮಗಳು ಕರ್ನಾಟಕಕ್ಕೆ ಬರುತ್ತೀವಿ ಎಂದು ಮನವಿ ಮಾಡುವ ಹಾಗಾಯಿತು.

ನಾನು ಸಿಎಮ್ ಇದ್ದಾಗ ೨೦೧೨ ರಲ್ಲಿ ಬಸವೇಶ್ವರ ಏತ ನೀರಾವರಿ ಯೋಜನೆಗೆ ಸಾಕಷ್ಟು ಅನುದಾನ ಬಿಡುಗಡೆ ಗೊಳಿಸಿದ್ದೆ. ಆದರೆ ನಂತರ ಬಂದ ಕಾಂಗ್ರೇಸ್ ಸರಕಾರದಲ್ಲಿ ಆ ಯೋಜನೆಗೆ ಚಾಲನೆ ಮಾತ್ರ ಸಿಕ್ಕಿತ್ತು. ಆದರೆ ಅನುದಾನ ಸಿಕ್ಕಿರಲಿಲ್ಲ. ಇದೀಗ ಯಡಿಯೂರಪ್ಪ ನವರು ಮುಖ್ಯಮಂತ್ರಿಗಳಾಗಿದ್ದರಿಂದ ನಾವು ಆ ಯೋಜನೆಯನ್ನು ಸಂಪೂರ್ಣವಾಗಿ ಮಾಡಿಕೊಡುತ್ತೀವಿ ಎಂದರು.

ಪ್ರತಿಸಲ ಬೇಸಿಗೆಯಲ್ಲಿ ಉಂಟಾಗುವ ನೀರಿನ ಸಮಸ್ಯೆಗೆ ಯಡಿಯೂರಪ್ಪನವರು ಮಹಾರಾಷ್ಟ್ರದ ಮುಖ್ಯಮಂತ್ರಿ ಅವರ ಜೊತೆಗೆ ಮಾತನಾಡಿ ಶಾಶ್ವತ ಪರಿಹಾರ ಮಾಡುತ್ತಾರೆ.  ಜೆಡಿಎಸ್ ಹಾಗೂ ಕಾಂಗ್ರೇಸ್ ನವರಿಗೆ ಭ್ರಮನಿರಸವಾಗಿದೆ. ಮಾಧ್ಯಮಗಳಲ್ಲಿ ಸುಳ್ಳುಸುದ್ದಿಯ ಮೂಲಕವಾಗಿ ತಿರುಕನ ಕನಸು ಕಾಣ್ತಿದ್ದಾರೆ.

ಸಿದ್ದರಾಮಯ್ಯ  ಅವರ ಜೀವನದಲ್ಲಿ ಎಂದಿಗೂ ಮುಖ್ಯಮಂತ್ರಿಯಾಗಲ್ಲ ಹಾಗೂ ಶ್ರೀಮಂತ ಪಾಟೀಲರನ್ನು ಆರಿಸಿಕೊಟ್ಟರೆ ಸಚಿವರಾಗಿ ನಿಮ್ಮ ಕ್ಷೇತ್ರಕ್ಕೆ ಬರುತ್ತಾರೆ. ಇತ್ತ ಲಕ್ಷ್ಮಣ ಸವದಿ ಉಪಮುಖ್ಯಮಂತ್ರಿ, ಶ್ರೀಮಂತ ಪಾಟೀಲ ಸಚಿವ ಹೀಗೆ ಬಿಜೆಪಿ ಸರಕಾರದಲ್ಲಿ ನಿಮ್ಮ ಭಾಗಕ್ಕೆ ಡಬಲ್ ಧಮಾಕಾ ಆಗುತ್ತದೆ ಎಂದು ಭರವಸೆ ಕೊಟ್ಟರು.

10ರಷ್ಟು ಕಮಿಷನ್ ತಿಂದರೂ 50 ಕೋಟಿ ಆಗುತ್ತದೆ

ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಮಾತನಾಡುತ್ತಾ ಅಥಣಿ ಕ್ಷೇತ್ರದಲ್ಲಿ ಕನಿಷ್ಠ ೨೫೦೦೦ ಅಂತರದಿಂದ ಬಿಜೆಪಿ ಗೆಲುವು ನಿಶ್ಚಿತ, ಕುಮಾರಸ್ವಾಮಿಯವರು ಸಾಂಧರ್ಭಿಕ ಶಿಶುವಾಗಿ ಮುಖ್ಯಮಂತ್ರಿಯಾಗಿದ್ದರು. ಸಾಂದರ್ಭಿಕ ಶಿಶುವಾಗಿಯೇ ಹೋದರು. ನಮ್ಮ ವಿಜಯಪೂರಕ್ಕೆ ಒಂದು ರೂಪಾಯಿ ಅನುದಾನವನ್ನು ಕೊಡಲಿಲ್ಲ.

ಅದೇ ರೀತಿ ಕಾಂಗ್ರೇಸ್ ಶಾಸಕರಿಗೂ ಕೊಡಲಿಲ್ಲ, ಕುಮಾರಸ್ವಾಮಿಯವರ ಆರೋಪದಂತೆ ಶ್ರೀಮಂತ ಪಾಟೀಲರು ೨೫ ಕೋಟಿ ರೂಪಾಯಿ ತಗೊಳ್ಳುವಂತೆ ಕಾಣುತ್ತಾರಾ ? ಓರ್ವ ಪಂಚಾಯತಿ ಸದಸ್ಯನೂ ಕೂಡ ೨೫ ಕೋಟಿ ರೂಪಾಯಿ ತಗೊಳ್ಳುವುದಿಲ್ಲ. ಅಂತದ್ರಲ್ಲಿ ಓರ್ವ ಶಾಸಕ ತೆಗೆದುಕೊಳ್ಳುತ್ತಾನಾ ಎಂದು ಪ್ರಶ್ನಿಸಿದರು.

ಈಗ ಯಡಿಯೂರಪ್ಪನವರು ನಮ್ಮ ವಿಜಯಪುರಕ್ಕೆ ಸುಮಾರು ೫೦೦ ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಅದರಲ್ಲಿ ನಾನು ೧೦ ಪ್ರತಿಷತ ಹಣ ತಿಂದರೂ ೫೦ ಕೋಟಿ ರೂ ಆಗುತ್ತದೆ. ಇನ್ನು ಪ್ರತಿಪಕ್ಷದವರ ಆರೋಪದಂತೆ ಓರ್ವ ಶಾಸಕ ೨೫ ಕೋಟಿ ರೂಪಾಯಿಗೆ ಆಸೆ ಪಡುತ್ತಾನಾ ? ಎಂದರು.

ಮುರುವರೆ ವರ್ಷದಲ್ಲಿ ಉತ್ತರಕರ್ನಾಟಕ್ಕೆ ೨೫ ಸಾವಿರ ಕೋಟಿ ರೂಪಾಯಿ ನೀರಾವರಿಗಾಗಿ ಮೀಸಲಿಡುತ್ತೆನೆ ಎಂದು ಯಡಿಯೂರಪ್ಪನವರು ಭರವಸೆ ಕೊಟ್ಟಿದ್ದಾರೆ, ಸಮ್ಮಿಶ್ರ ಸರಕಾರದಲ್ಲಿ ನಮಗೆ ಒಂದು ರೂಪಾಯಿ ಅನುದಾನ ಸಿಕ್ಕಿಲ್ಲ. ನಮ್ಮ ಭಾಗವನ್ನು ಸಂಪೂರ್ಣ ನಿರ್ಲಕ್ಷಿಸಿದ್ದರು ಎಂದು ಆರೋಪಿಸಿದರು.

ಶ್ರೀಮಂತ ಪಾಟೀಲ ಒಬ್ಬ ತ್ಯಾಗಮಯಿ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರು ಮಾತನಾಡುತ್ತಾ ಶ್ರೀಮಂತ ಪಾಟೀಲ ಒಬ್ಬ ತ್ಯಾಗಮಯೀ. ಬಿಜೆಪಿ ಸರಕಾರಕ್ಕಾಗಿ ತನ್ನ ಶಾಸಕ ಸ್ಥಾನವನ್ನು ತ್ಯಾಗ ಮಾಡಿದ ಮಹಾನ್ ವ್ಯಕ್ತಿಗಳಾಗಿದ್ದಾರೆ. ಅಂತಹ ವ್ಯಕ್ತಿಯನ್ನು ಕಾಗವಾಡ ಸಮಸ್ತ ಜನತೆ ಆರಿಸಿ ತರಬೇಕು. ಸಮ್ಮಿಶ್ರ ಸರಕಾರದಲ್ಲಿ ಕುಮಾರಸ್ವಾಮಿಯವರು ಉತ್ತರ ಕರ್ನಾಟಕವನ್ನು ನಿರ್ಲಕ್ಷಸಿದ್ದರು.

ಅವರು ತಮ್ಮ ಭಾಗದ ನಾಲ್ಕು ಜಿಲ್ಲೆಗಳಿಗೆ ಮಾತ್ರ ಮುಖ್ಯಮಂತ್ರಿಯಾಗಿದ್ದರು. ಅಂತಹ ಸಂದರ್ಭದಲ್ಲಿ ಕ್ಷೇತ್ರದ ಅಭಿವೃದ್ದಿಗಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಶ್ರೀಮಂತ ಪಾಟೀಲ ಅವರಿಗೆ ಕಾಗವಾಡ ಕ್ಷೇತ್ರದ ಮತದಾರರು ಆಶಿರ್ವದಿಸಬೇಕು ಎಂದರು.

ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಸರಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಸಚಿವ ಸಿ ಸಿ ಪಾಟೀಲ ಮಾತನಾಡಿದರು. ಈ ವೇಳೆಯಲ್ಲಿ ರಾಯಭಾಗ ಶಾಸಕ ದುರ್ಯೊಧನ ಐಹೊಳೆ, ಕುಡಚಿ ಶಾಸಕ ಪಿ ರಾಜೀವ,  ಶಶಿಕಾಂತ ನಾಯಿಕ, ಅಥಣಿ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ, ಸುನೀಲ ವಲ್ಲಾಪೂರೆ, ಮಹೇಶ ಟೆಂಗಿನಕಾಯಿ ಸೇರಿದಂತೆ ಅನೇಕ ಮುಖಂಡರು  ಉಪಸ್ಥಿತರಿದ್ದರು.

ದೇಶದಲ್ಲೇ ಮಾದರಿ ರಾಜ್ಯವನ್ನಾಗಿ ಮಾಡುತ್ತೇನೆ -ಯಡಿಯೂರಪ್ಪ

ಸಿದ್ಧರಾಮಯ್ಯರದ್ದು ತಿರುಕನ ಕನಸು- ಯಡಿಯೂರಪ್ಪ ವ್ಯಂಗ್ಯ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button