*ಬೆಳಗಾವಿಯಲ್ಲಿ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಇತಿಹಾಸ, ಸಾಧನೆಗಳನ್ನು ಯಾರೂ ಬದಲಿಸಲು ಸಾಧ್ಯವಿಲ್ಲ. ಶಿವಾಜಿ ಪ್ರತಿಮೆ ನಿರ್ಮಾಣಕ್ಕೆ 50 ಲಕ್ಷ ಅನುದಾನವನ್ನು ಬಿಡುಗಡೆ ನಾನು ಮಾಡಿದ್ದೇನೋ, ಬಿಜೆಪಿ ಸರ್ಕಾರ ಬಿಡುಗಡೆ ಮಾಡಿದೆಯೋ ಎಂಬುದು ಇತಿಹಾಸದಲ್ಲಿ ದಾಖಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ನಾವು ಮನೆ ಕಟ್ಟುತ್ತೇವೆ. ಅನೇಕರು ಸೇರಿ ಒಂದು ಮನೆ ಕಟ್ಟುತ್ತಾರೆ. ಆದರೆ ಆ ಮನೆ ಕಟ್ಟುವ ಎಲ್ಲರೂ ಅಲ್ಲಿ ವಾಸ ಮಾಡುವುದಿಲ್ಲ. ಅದೇ ರೀತಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಮಾಜದ ಋಣ ತೀರಿಸಬೇಕು. ಈ ವರ್ಗದ ಜನ ತಮಗೆ ಶಕ್ತಿ ತುಂಬಿದ್ದು, ಅವರಿಗೆ ಅಭಿನಂದನೆ ಸಲ್ಲಿಸಬೇಕು ಎಂದು ಕೇಳಿದಾಗ ನಾವು ಅದಕ್ಕೆ ಒಂದು ಅವಕಾಶ ಮಾಡಿಕೊಟ್ಟೆವು. ನಮ್ಮ ಕರ್ನಾಟಕದಲ್ಲಿ ಅಂತಹ ಭವ್ಯವಾದ ಶಿವಾಜಿ ಪ್ರತಿಮೆ ಬೇರೆ ಕಡೆ ಇಲ್ಲ. ಈ ಇತಿಹಾಸವನ್ನು ಬೊಮ್ಮಾಯಿ ಅವರೂ ಬದಲಿಸಲು ಆಗುವುದಿಲ್ಲ, ಬೇರೆಯವರೂ ಬದಲಿಸಲು ಆಗುವುದಿಲ್ಲ ಎಂದರು.
ಮುಖ್ಯಮಂತ್ರಿಗಳು ಈ ಪ್ರತಿಮೆ ಅನಾವರಣ ಮಾಡಿದ್ದಾರೆ. ಕ್ಷೇತ್ರದ ಜನರ ಋಣ ತೀರಿಸಲು ಅದಕ್ಕೆ ಆದ ಸಂಸ್ಕಾರ ಇದೆ. ನಮ್ಮ ದೇಶದ ಆಸ್ತಿಯೇ ಸಂಸ್ಕೃತಿ. ನಾವು ಯಾವುದೇ ಉತ್ತಮ ಕೆಲಸ ಮಾಡುವಾಗ ಶುಭ ಗಳಿಗೆ ನೋಡುತ್ತೇವೆ. ಆದರೆ ಬಿಜೆಪಿಯವರು ಒಬ್ಬ ನಾಯಕನ ಆತುರಕ್ಕೆ ಬಂದು ಉದ್ಘಾಟನೆ ಮಾಡಿದ್ದಾರೆ. ಆದರೆ ಇದು ಜನರ ವಿಚಾರ. ಜನ ಇದರಿಂದ ಸಂತೋಷ ಪಡುವುದು ಮುಖ್ಯ. ಅಕ್ಕಿ ಒಂದು ಕಡೆ, ಅರಿಶಿನ ಒಂದು ಕಡೆ ಇರುತ್ತದೆ. ಎರಡೂ ಸೇರಿದರೆ ಮಂತ್ರಾಕ್ಷತೆಯಾಗುತ್ತದೆ. ಗಂಡು ಹೆಣ್ಣು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲೂ ಮದುವೆಯಾಗಬಹುದು, ಸಾವಿರಾರು ಜನರ ನಡುವೆ ಮದುವೆ ಆಗಬಹುದು. ಬಿಜೆಪಿಯವರು ಈ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮವನ್ನು ತಮ್ಮ ಪಕ್ಷಕ್ಕೆ ಮಾತ್ರ ಸೀಮಿತಗೊಳಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂಬ ಯಡಿಯೂರಪ್ಪ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ಬಹಳ ಸಂತೋಷ. ಅವರ ಆಸೆ, ಛಲ ಇರಲಿ’ ಎಂದರು.
ಬಂದ್ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ನಾವು ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆಯೇ ಹೊರತು, ಶಾಸಕರ ವಿರುದ್ಧವಲ್ಲ. ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವೇ ರಾಜ್ಯಪಾಲರು ಅವರನ್ನು ವಜಾ ಮಾಡಬೇಕು’ ಎಂದರು.
ಬಿಜೆಪಿಯವರು ಸಾಕ್ಷಿ ಕೇಳುವುದರ ಬಗ್ಗೆ ಪ್ರಶ್ನೆ ಮಾಡಿದಾಗ, ‘ಲೋಕಾಯುಕ್ತ ಅಧಿಕಾರಿಗಳು ಬಿಜೆಪಿ ಶಾಸಕರ ಭ್ರಷ್ಟಾಚಾರ ಬಯಲು ಮಾಡಿ ಸಾಕ್ಷಿ ನೀಡಿದ್ದಾರೆ. ಅದಕ್ಕಾಗಿ ನಾವು ರಾಜ್ಯದುದ್ದಗಲಕ್ಕೆ ಮಾ.9ರಂದು 2 ಗಂಟೆಗಳ ಕಾಲ ಸಾಂಕೇತಿಕ ಬಂದ್ ಆಚರಣೆಗೆ ಕರೆ ನೀಡಿದ್ದೇವೆ. ನಾವು ಶಿಕ್ಷಣ ಸಂಸ್ಥೆ, ವಾಹನ ಸವಾರರು, ಆಸ್ಪತ್ರೆ ಸೇರಿದಂತೆ ಅಗತ್ಯ ಸೇವೆಗಳಿಗೆ ತೊಂದರೆ ಮಾಡುವುದಿಲ್ಲ. ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಎಲ್ಲ ವರ್ತಕರು, ಸಂಘ ಸಂಸ್ಥೆಗಳು 2 ಗಂಟೆಗಳ ಕಾಲ ಬಂದ್ ಗೆ ಸಹಕಾರ ನೀಡಬೇಕು ಎಂದು ಮನವಿ ಮಾಡುತ್ತೇನೆ’ ಎಂದರು.
ReplyForward |
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ