ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕಾಂಗ್ರೆಸ್ ಈ ದೇಶವನ್ನು ಒಗ್ಗೂಡಿಸುವ ಕೆಲಸ ಮಾಡಿದೆ. ಕಾಂಗ್ರೆಸ್ ಇಲ್ಲದಿದ್ದರೆ ಇಂದು ಈ ದೇಶ ಛಿದ್ರವಾಗಿರುತ್ತಿತ್ತು. ಇದೇ ಕಾರಣಕ್ಕೆ ನಾನು ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ, ದೇಶದ ಇತಿಹಾಸ ಎಂದು ಹೇಳುತ್ತಿರುತ್ತೇನೆ. ಇಂದು ನಾವಲ್ಲರೂ 138 ನೇ ವರ್ಷಕ್ಕೆ ಕಾಲಿಡುತ್ತಿದ್ದೇವೆ. ನಮ್ಮ ಇತಿಹಾಸ ಏನೆಂದರೆ ದೇಶದ ಜನರಿಗೆ ಧ್ವನಿ ನೀಡಿದ್ದೇವೆ, ಪ್ರಜಾಪ್ರಭುತ್ವ ವ್ಯವಸ್ಥೆ ನೀಡಿದ್ದೇವೆ. ಗಾಂಧೀಜಿ ಅವರ ಮಾರ್ಗದರ್ಶನದಲ್ಲಿ ಸಾಗುತ್ತಿದ್ದೇವೆ. ಯಾರು ಏನೇ ಟೀಕೆ ಮಾಡಿದರೂ ಆತ್ಮಸಾಕ್ಷಿ ಇದ್ದವರು ಕಾಂಗ್ರೆಸ್ ಕೊಟ್ಟ ಸ್ವಾತಂತ್ರ್ಯ, ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಾಮಾಜಿಕ ನ್ಯಾಯ ಎಲ್ಲವನ್ನೂ ಸ್ಮರಿಸುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕಾಂಗ್ರೆಸ್ ಸಂಸ್ಥಾಪನೆ ದಿನಾಚರಣೆ ಅಂಗವಾಗಿ ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಮಹಾತ್ಮ ಗಾಂಧೀಜಿ, ಬಾಬಾ ಸಾಹೇಬ್ ಅಂಬೇಡ್ಕರ್, ನೆಹರೂ ಅವರ ಭಾವಚಿತ್ರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪುಷ್ಪನಮನ ಸಲ್ಲಿಸಿದರು. ಈ ವೇಳೆ ಸೇವಾದಳ ರಾಜ್ಯ ಅಧ್ಯಕ್ಷ ರಾಮಚಂದ್ರ ಇದ್ದರು. ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ ಮತ್ತಿತರರು ಇದ್ದರು.
ಬಳಿಕ ಮಾತನಾಡಿದ ಡಿ.ಕೆ.ಶಿವಕುಮಾರ್, ಇಂದು ಕಾಂಗ್ರೆಸ್ ಸಂಸ್ಥಾಪನಾ ದಿನ. ಪಕ್ಷದ ಜನ್ಮದಿನ. ಈ ದಿನವನ್ನು ಸೇವಾದಳದ ಕಾರ್ಯಕರ್ತರ ಜತೆ ಆಚರಿಸಿದ್ದು, ನೀವು ಕೇವಲ ಸೇವಕರಲ್ಲ, ನಾಯಕರು ಎಂದು ಅವರಿಗೆ ಹೇಳಿದ್ದೇನೆ. ಇದು ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಸಂದೇಶ. ಸೇವಾದಳದವರಿಗೆ ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ನಾಯಕತ್ವದ ಸ್ಥಾನಮಾನ ನೀಡಬೇಕು ಎಂಬುದು ಪಕ್ಷದ ತೀರ್ಮಾನ. ಖರ್ಗೆ ಅವರು ಪಕ್ಷಕ್ಕೆ 50 ವರ್ಷಗಳ ಸೇವೆ ಮಾಡಿ ಇಂದು ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದರು.
ನಮಗೆ ಕೇಂದ್ರದಲ್ಲಿ ಸ್ವಲ್ಪ ಹಿನ್ನಡೆ ಆಗಿರಬಹುದು. ಇತಿಹಾಸದ ಪುಟಗಳಿಗೆ ಹೋದರೆ ಪ್ರತಿಯೊಂದು ಸಮಯದಲ್ಲಿ ಬಡವರ ಬಗ್ಗೆ ಚಿಂತನೆ ಮಾಡಿದ್ದು ಕಾಂಗ್ರೆಸ್ ಎಂಬುದು ಗೊತ್ತಾಗುತ್ತದೆ. ಉಳುವವನೆ ಭೂಮಿಯ ಒಡೆಯ ಯೋಜನೆ ಮೂಲಕ ಬಡವರಿಗೆ ಜಮೀನು, ನಿವೇಶನ ಹಂಚಿಕೆ, ಬ್ಯಾಂಕ್ ರಾಷ್ಟ್ರೀಕರಣದಂತಹ ನೀತಿಗಳನ್ನು ಕೊಟ್ಟಿದ್ದು ಕಾಂಗ್ರೆಸ್. ಇದನ್ನು ಬೇರೆ ಪಕ್ಷದವರು ಹೇಳಿಕೊಳ್ಳಲು ಸಾಧ್ಯವಿಲ್ಲ. ಮಹಾತ್ಮ ಗಾಂಧಿ ಅವರ ಹೆಸರಲ್ಲಿ ಉದ್ಯೋಗ ಖಾತ್ರಿ ಯೋಜನೆ ಮೂಲಕ ಹಳ್ಳಿಗಳ ಅಭಿವೃದ್ಧಿ ಜತೆಗೆ ಅಲ್ಲಿನ ಜನರಿಗೆ ಉದ್ಯೋಗ ನೀಡಿದ್ದೇವೆ. ಬಿಜೆಪಿಯವರಿಗೆ ಈ ಕಾರ್ಯಕ್ರಮ ನೀಡಲು ಆಗಲಿಲ್ಲ. ಎಲ್ಲರ ಹಸಿವು ನೀಗಿಸಲು ಆಹಾರ ಭದ್ರತೆ ಕಾಯ್ದೆ ಜಾರಿಗೆ ತಂದೆವು. ಆ ಮೂಲಕ ಕೇಂದ್ರ ಸರ್ಕಾರ 28 ರೂ.ಗೆ ಅಕ್ಕಿ ನೀಡಲು ಆರಂಭಿಸಿತು. ಉಳಿದ ಮೊತ್ತವನ್ನು ರಾಜ್ಯಗಳಿಗೆ ಬಿಡಲಾಯಿತು. ನಮ್ಮ ರಾಜ್ಯದಲ್ಲಿ ಉಳಿದ ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸಿ, ಉಚಿತವಾಗಿ ಅಕ್ಕಿ ನೀಡಲಾಯಿತು. ಇದು ಕಾಂಗ್ರೆಸ್ ಪಕ್ಷದ ನೀತಿ, ಸಿದ್ಧಾಂತ ಎಂದರು.
ರಾಹುಲ್ ಗಂಧಿ ಅವರು ಈ ದೇಶದಲ್ಲಿ ಶಾಂತಿ ಸ್ಥಾಪಿಸಿ, ಸಾಮಾಜಿಕ ಸಾಮರಸ್ಯ ಮೂಡಿಸಲು, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ನಡೆಯುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಯಾತ್ರೆ ಯಶಸ್ವಿಯಾಗಲು ನೀವು ಶ್ರಮಿಸಿದ್ದಾರೆ. ಯಾತ್ರೆ ಸಂದರ್ಭದಲ್ಲಿ ಹಿರಿಯ ಮಹಿಳೆ ಬಂದು ರಾಹುಲ್ ಗಾಂಧಿ ಅವರಿಗೆ ತನ್ನ ಜಮೀನಿನಲ್ಲಿ ಬೆಳೆದ ಸೌತೇಕಾಯಿಯನ್ನು ಕೊಟ್ಟರು. ಅದನ್ನು ಕೊಡುವಾಗ ಇದು ನಿಮ್ಮ ಅಜ್ಜಿ ಕೊಟ್ಟ ಭೂಮಿಯಲ್ಲಿ ಬೆಳೆದಿದ್ದು ಎಂದು ಹೇಳಿದರು. ಇಂದು ಬ್ಯಾಂಕುಗಳು ನಿಮ್ಮ ಮನೆ ಬಾಗಿಲಿಗೆ ಬಂದು ಸಾಲ ನೀಡುತ್ತಿವೆ ಎಂದರೆ ಇಂದಿರಾ ಗಾಂಧಿ ಅವರು ತೆಗೆದುಕೊಂಡು ಬ್ಯಾಂಕ್ ರಾಷ್ಟ್ರೀಕರಣವೇ ಕಾರಣ. ಇನ್ನು ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತಂದರು. ಆದರೆ ಸರ್ಕಾರ ಸೋಲುವ ಭಯದಲ್ಲಿ ಪಂಚಾಯ್ತಿಗಳ ಚುನಾವಣೆಯನ್ನೇ ಮಾಡಲಿಲ್ಲ. ಪ್ರಜಾಪ್ರಭುತ್ವದ 73, 74ನೇ ಪರಿಚ್ಛೆದಕ್ಕೆ ತಿದ್ದುಪಡಿ ತಂದು ಎಲ್ಲ ವರ್ಗದವವರಿಗೆ ಮೀಸಲಾತಿ ಕೊಟ್ಟು ಅವರ ರಕ್ಷಣೆಗೆ ಮುಂದಾಗಿದ್ದೇವೆ. ಇಂತಹ ಪಕ್ಷದ ಸದಸ್ಯರು ನೀವು. ನೀವು ನಿಮ್ಮನ್ನು ಸೇವಕರು ಎಂದು ಭಾವಿಸಬೇಡಿ. ನೀವೆಲ್ಲರೂ ಕಾಂಗ್ರೆಸ್ ಪಕ್ಷದ ನಾಯಕರು.
ನನಗೆ ಅವಕಾಶ ಸಿಕ್ಕಿದ್ದ ಸಂದರ್ಭದಲ್ಲಿ ಎಲ್ಲರನ್ನು ಶಾಸಕರನ್ನಾಗಿ ಮಾಡಲು ಸಾಧ್ಯವಾಗದಿರಬಹುದು. ಆದರೆ ವಿವಿಧ ಸಮಿತಿಗಳಲ್ಲಿ ನಾಮನಿರ್ದೇಶನ ಮಾಡಿದ್ದೇನೆ. ರಾಮಚಂದ್ರ ಅವರು ಬೆಂಗಳೂರು ಜಿಲ್ಲಾ ಅಧ್ಯಕ್ಷರಾಗಿದ್ದರು. ನಿಮ್ಮನ್ನು ಪಕ್ಷ ಗುರುತಿಸಲಿದೆ. ನಿಮ್ಮ ಸೇವೆ ಅಚಲವಾಗಿದೆ. ಬಿ.ಕೆ. ಹರಿಪ್ರಸಾದ್ ಅವರು ಸೇವಾದಳದಿಂದ ಬೆಳೆದು ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡಿ ಈಗ ಪರಿಷತ್ ನಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಕಾಂಗ್ರೆಸ್ ಅನ್ನು ಯಾರೂ ಮುಗಿಸಲು ಸಾಧ್ಯವಿಲ್ಲ. ಇಡೀ ರಾಷ್ಟ್ರಕ್ಕೆ ನಿಮ್ಮ ಕೊಡುಗೆ ಅಪಾರ. ಖಾದರ್, ವಿನಯ್ ಅವರು ಸೇವಾದಳದವರು. ಮೂವರು ಜಿಲ್ಲಾಧ್ಯಕ್ಷರು ಸೇವಾದಳದವರಾಗಿದ್ದಾರೆ. ಈಗ ನಾವು ಚುನಾವಣೆಗೆ ಹೋಗುತ್ತಿದ್ದೇವೆ. ನಾವು ಯಾರಿಗೂ ಸುಳ್ಳು ಹೇಳುವ ಅಗತ್ಯವಿಲ್ಲ. ಪಕ್ಷದ ನೀತಿ, ಸಿದ್ಧಾಂತ, ಕಾರ್ಯಕ್ರಮವನ್ನು ಜನರಿಗೆ ತಿಳಿಸಿದರೆ ಸಾಕು. ಭಾರತ್ ಜೋಡೋ ಕಾರ್ಯಕ್ರಮದಂತೆ ಪ್ರತಿ ಹಳ್ಳಿ, ಬೂತ್ ಗಳಲ್ಲಿ ಕೈಗೆ ಕೈ ಜೋಡಿಸುವ ಕಾರ್ಯಕ್ರಮ ಮಾಡುತ್ತಿದೆ. ನೀವು ಜನವರಿಯಿಂದ ಪ್ರತಿ ಬೂತ್ ಗೆ ಹೋಗಿ ಕಾರ್ಯಕ್ರಮ ರೂಪಿಸಬೇಕು.
ಡಿ. 30 ರಂದು ಕೃಷ್ಣಾ ನದಿ ನೀರಿನ ವಿಚಾರವಾಗಿ ವಿಜಯಪುರದಲ್ಲಿ, ಜ.2 ರಂದು ಮಹದಾಯಿ ಯೋಜನೆ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಜ.8 ರಂದು ಚಿತ್ರದುರ್ಗದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಸಮಾವೇಶ ಹಮ್ಮಿಕೊಂಡಿದ್ದೇವೆ. ನಂತರ 11ರಿಂದ ನಾವು ಯಾತ್ರೆ ಆರಂಭಿಸುತ್ತಿದ್ದೇವೆ ಎಂದು ಹೇಳಿದರು.
ಭಾರತ ಜೋಡೋ ಯಾತ್ರೆ ಸಂದೇಶವನ್ನು ಪ್ರತಿ ಬೂತ್ ಮಟ್ಟದಲ್ಲಿ ತಲುಪಿಸಲು, ಸಂಘಟನೆ ಮಾಡಲು ಹಸ್ತಕ್ಕೆ ಹಸ್ತ ಜೋಡಿಸುವ ಕಾರ್ಯಕ್ರಮವನ್ನು ಮುಂದಿನ ಒಂದು ತಿಂಗಳ ಕಾಲ ಮಾಡಬೇಕು ಎಂದು ಎಐಸಿಸಿ ಆದೇಶ ಕೊಟ್ಟಿದೆ. ಎಲ್ಲರೂ ಒಟ್ಟಾಗಿ ಪ್ರತಿ ಹಳ್ಳಿಯಲ್ಲಿ ದುಡಿಯುವುದಾಗಿ ಜನರಿಗೆ ಆಶ್ವಾಸನೆ ನೀಡಬೇಕು ಎಂದು ಮಾರ್ಗದರ್ಶನ ನೀಡಿದ್ದೇನೆ.
ರಾಜ್ಯ ಹಾಗೂ ಸ್ಥಳೀಯ ಮಟ್ಟದಲ್ಲಿ ಅನೇಕರು ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದಾರೆ. ಬೇರೆ ಪಕ್ಷದಿಂದ ಬರಲು ಇಚ್ಛಿಸುವವರಿಗೆ ಮುಕ್ತ ಆಹ್ವಾನ ನೀಡುತ್ತೇನೆ. ಯಾರೆಲ್ಲಾ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಮುಖಂಡತ್ವದಲ್ಲಿ ನಂಬಿಕೆ ಇಟ್ಟು, ಪಕ್ಷದ ಸಿದ್ಧಾಂತ ಒಪ್ಪಿ ಬೇಷರತ್ತಾಗಿ ಸೇರಬಯಸುವರೋ ಅವರು ಅರ್ಜಿ ಹಾಕಬಹುದು. ಸ್ಥಳೀಯ ಮಟ್ಟದಲ್ಲಿ ಸೇರಲು ಅವಕಾಶ ಮಾಡಿಕೊಡಲಾಗುವುದು. ರಾಜ್ಯದಲ್ಲಿ ಬಲಿಷ್ಠ ಕಾಂಗ್ರೆಸ್ ಸರ್ಕಾರ ಬರಲಿದ್ದು, ಅದರ ಭಾಗವಾಗಿರಬೇಕು ಎಂದು ಬಯಸುವವರು ಪಕ್ಷ ಸೇರಬಹುದು. ನಾವು ಯಾರನ್ನೂ ಬೇಡ ಎಂದು ತಿರಸ್ಕರಿಸುವುದಿಲ್ಲ. ನಮ್ಮಿಂದ ದೂರ ಹೋಗಿರುವ ಅನೇಕರು ಮತ್ತೆ ಪಕ್ಷ ಸೇರುವ ಇಚ್ಛೆ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಅರ್ಜಿ ಹಾಕುವಂತೆ ತಿಳಿಸಿದ್ದೇನೆ ಎಂದರು.
ಪಕ್ಷ ಸೇರುವವರಲ್ಲಿ ಈ ಹಿಂದೆ ಪಕ್ಷ ಬಿಟ್ಟು ಹೋಗಿದ್ದ 15 ಶಾಸಕರು ಇದ್ದಾರಾ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ಈಗ ಆ ವಿಚಾರವನ್ನು ಬಹಿರಂಗಪಡಿಸುವುದಿಲ್ಲ. ಯಾರು ಬೇಕಾದರೂ ಅರ್ಜಿ ಹಾಕಬಹುದು. ಬಿಜೆಪಿ ಸರ್ಕಾರದ ಭ್ರಷ್ಟಾಚಾರ ನೋಡಿ ಇಲ್ಲಿಂದ ಹೋದವರು ಸೇರಿದಂತೆ ಎಲ್ಲರೂ ಬೇಸತ್ತಿದ್ದಾರೆ. ಕೆಲವರು ತಮ್ಮ ಬೇಸರ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ವ್ಯಕ್ತಪಡಿಸಿಲ್ಲ. ಈಗ ಈ ವಿಚಾರವಾಗಿ ಹೆಚ್ಚು ಚರ್ಚೆ ಮಾಡುವುದಿಲ್ಲ’ ಎಂದರು.
ರಾಮನಗರದಲ್ಲಿ ರಾಮಮಂದಿರ ಕಟ್ಟುವ ಬಗ್ಗೆ ಸಚಿವ ಅಶ್ವತ್ ನಾರಾಯಣ್ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ‘ರಾಮ ಮಂದಿರ ಕಟ್ಟಲಿ, ಅದನ್ನು ಬೇಡ ಎಂದು ತಡೆದಿರುವವರು ಯಾರು? ಅವರು ಜಿಲ್ಲಾ ಮಂತ್ರಿಗಳಾಗಿದ್ದು, ರಾಮಮಂದಿರ ಕಟ್ಟುತ್ತೇವೆ ಎಂದರೆ ಅದನ್ನು ತಡೆಯುತ್ತಿರುವವರು ಯಾರು? ಅವರು ರಾಮಮಂದಿರ, ಸೀತಾ ಮಂದಿರ, ಹನುಮಂತನ ಮಂದಿರ ಕಟ್ಟಲಿ, ಶಿವ ಮಂದಿರ ಕಟ್ಟಲಿ. ಬೇಕಾದರೆ ಅಶ್ವತ್ಥ್ ನಾರಾಯಣ ಅವರ ಮಂದಿರವನ್ನೂ ಕಟ್ಟಿಕೊಳ್ಳಲಿ. ನಾನು 35 ವರ್ಷಗಳಿಂದ ಅಲ್ಲಿ ಬಹಳ ಗಂಡುಗಳನ್ನು ನೋಡಿದ್ದೇನೆ’ ಎಂದರು.
ಕೋವಿಡ್ ಸೋಂಕು ಹೆಚ್ಚುತ್ತಿದೆ ಎಂದು ಸರ್ಕಾರ ಹೇಳುತ್ತಿದೆ, ಮಾಸ್ಕ್ ಧರಿಸಿ ಎನ್ನುತ್ತಿದ್ದಾರೆ ‘ಸರ್ಕಾರ ಹವಾನಿಯಂತ್ರಿತ ಕೊಠಡಿಯಲ್ಲಿ ಮಾಸ್ಕ್ ಧರಿಸಿ ಎಂದು ಹೇಳಿದೆ. ಆರೋಗ್ಯ ಸಚಿವರು, ಮುಖ್ಯಮಂತ್ರಿಗಳು ಹಾಗೂ ಇತರೆ ಸಚಿವರು ಹಾಗೂ ನಾಯಕರು ಎಸಿ ಕೊಠಡಿಯಲ್ಲಿ ಸಭೆ ಮಾಡುತ್ತಿದ್ದಾರೆ. ಅಧಿವೇಶನದ ಸಮಯದಲ್ಲಿ ಅವರು ಯಾಕೆ ಮಾಸ್ಕ್ ಧರಿಸಿಲ್ಲ? ನಿನ್ನೆ ಮುಖ್ಯಮಂತ್ರಿಗಳು, ಗೃಹಸಚಿವರು ಸೇರಿದಂತೆ ಹಲವು ಮಂದಿ ಸದನದಲ್ಲಿ ಉತ್ತರ ನೀಡುವಾಗ ಮಾಸ್ಕ್ ಯಾಕೆ ಧರಿಸಿರಲಿಲ್ಲ? ಅವರು ಮಾಸ್ಕ್ ಹಾಕದೇ ಬೇರೆಯವರಿಗೆ ಹಾಕಿ ಎಂದು ಹೇಳುತ್ತಿದ್ದಾರೆ’ ಎಂದು ತಿಳಿಸಿದರು.
ಬಾರ್ ಹಾಗೂ ರೆಸ್ಟೋರೆಂಟ್ ಗಳಿಗೆ ಸ್ಪೆಷಲ್ ಮಾಸ್ಕ್ ಬಂದಿದೆ ಎಂಬ ಸಚಿವ ಅಶೋಕ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ಅವರು ಹಾಗೂ ಅವರ ಸ್ನೇಹಿತರು ಮಾಸ್ಕ್ ಗೆ ಪೈಪ್ ಅಳವಡಿಸಿಕೊಳ್ಳಲಿ. ಕೇಂದ್ರ ಮಂತ್ರಿಯಾಗಿದ್ದ ಸುರೇಶ್ ಅಂಗಡಿ ಅವರು ಕೋವಿಡ್ ನಿಂದ ಸತ್ತಾಗ ಅವರ ಪಾರ್ಥೀವ ಶರೀರವನ್ನು ಅವರ ಊರಿಗೆ ತಂದು ಕುಟುಂಬಕ್ಕೆ ನೀಡಲಿಲ್ಲ. ವಿಶೇಷ ವಿಮಾನದಲ್ಲಿ ಶವವನ್ನು ರವಾನಿಸಿ ಇಲ್ಲೇ ಅಂತ್ಯ ಸಂಸ್ಕಾರ ಮಾಡಬಹುದಾಗಿತ್ತು. ಆದರೆ ಮಾಡಲಿಲ್ಲ. ಅವರು ದೇಶದ ಸಂಸ್ಕೃತಿ, ಪರಪರೆ ಬಗ್ಗೆ ಮಾತನಾಡುತ್ತಾರೆ. ಈ ಘಟನೆ ನಾಚಿಕೆಗೇಡಿನ ವಿಚಾರ. ಬಿಜೆಪಿ ನಾಯಕರು ಈ ಬಗ್ಗೆ ಮಾತನಾಡುವ ಶಕ್ತಿ ಕಳೆದುಕೊಂಡಿದ್ದಾರೆ’ ಎಂದು ಟೀಕಿಸಿದರು.
ಅಮಿತ್ ಶಾ ಅವರ ಕಾರ್ಯಕ್ರಮಕ್ಕೆ 1 ಲಕ್ಷ ಜನ ಸೇರಿಸುತ್ತಾರಂತೆ ಎಂದು ಕೇಳಿದಾಗ, ‘ಅವರು 1 ಲಕ್ಷ ಜನರನ್ನಾದರೂ ಸೇರಿಸಲಿ, 3 ಕೋಟಿ ಜನರನ್ನಾದರೂ ಸೇರಿಸಲಿ. ಕೋವಿಡ್ ಇರುವಾಗ ಬೇಕಾದರೂ ಮಾಡಲಿ, ಇಲ್ಲದಿರುವಾಗ ಬೇಕಾದರೂ ಮಾಡಲಿ. ಅವರು ಬಂದು ಏನು ಹೇಳಬೇಕೋ ಹೇಳಲಿ. ತೀರ್ಮಾನ ಮಾಡುವವರು ಜನ’ ಎಂದರು.
ಮಾಸ್ಕ್ ಕಡ್ಡಾಯ ವಿಚಾರವಾಗಿ ಜನಸಾಮಾನ್ಯರು ಟೀಕಿಸುತ್ತಿದ್ದಾರೆ ಎಂಬ ಪ್ರಶ್ನೆಗೆ, ‘ಮೊದಲು ನೀವುಗಳು ನಿಮ್ಮ ಸಭೆಗಳಲ್ಲಿ ಮಾಸ್ಕ್ ಧರಿಸಬೇಕು. ಮಾಸ್ಕ್ ಕಡ್ಡಾಯ ಎಂದು ಘೋಷಿಸಿದ ಮೇಲೆ ಸದನದಲ್ಲೇ ಅವರು ಧರಿಸಬೇಕಿತ್ತು. ಅದನ್ನು ಬಿಟ್ಟು ಬಾರಿನಲ್ಲಿ ಮಾಸ್ಕ್ ಹಾಕಬೇಕು ಎಂದು ಹೇಳುತ್ತಾರೆ’ ಎಂದು ಛೇಡಿಸಿದರು.
ಗಡಿ ವಿವಾದದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಮಹಾರಾಷ್ಟ್ರ, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದೆ. ಕೇಂದ್ರದಲ್ಲೂ ಅವರೇ ಇದ್ದಾರೆ. ಉದ್ದೇಶಪೂರ್ವಕವಾಗಿ ಈ ವಿಚಾರವಾಗಿ ಚರ್ಚೆ ಮಾಡುತ್ತಿದ್ದಾರೆ. ನಾವು ಯಾವ ಹಳ್ಳಿಯನ್ನೂ ಬಿಡುವುದಿಲ್ಲ, ಅವರ ಹಳ್ಳಿಗಳು ಬೇಡ. ಜನ ಅವರ ಪಾಡಿಗೆ ಅವರು ಬದುಕುತ್ತಿದ್ದಾರೆ. ನಾವು ಇಲ್ಲಿ ಸುರ್ವಣಸೌಧ ನಿರ್ಮಾಣ ಮಾಡಿರುವುದೇ ಇದು ನಮ್ಮ ಭಾಗ ಎಂಬ ಕಾರಣಕ್ಕೆ. ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯ ಮಹರಾಷ್ಟ್ರದ ನಿರ್ಣಯವನ್ನು ಖಂಡಿಸುತ್ತದೆ. ಇದರ ಬಗ್ಗೆ ಚರ್ಚೆ ಬೇಡ. ಗೃಹ ಸಚಿವರು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆಸಿ ಮಾತನಾಡಿದರು. ಆ ಸಭೆಯಲ್ಲಿ ಏನಾಯ್ತು? ನಿನ್ನೆ ಸಚಿವರೊಬ್ಬರು ಮುಂಬೈ ಅನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು ಎಂದು ಹೇಳಿದ್ದಾರೆ. ಅದನ್ನು ಮಾಡಲು ಇವರಿಂದ ಸಾಧ್ಯವೇ? ಪರಿಜ್ಞಾನ ಇಲ್ಲದೆ ಸುಮ್ಮನೆ ಮಾತನಾಡಬಾರದು. ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿರುವಂತೆ ಕಾಣುತ್ತದೆ’ ಎಂದು ಹರಿಹಾಯ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ